ರೋಣ: ಪಟ್ಟಣದ ಬಸನಗೌಡ ಗಿರಡ್ಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜನ್ನು ಬಾಗಲಕೋಟೆ ಜಿಲ್ಲೆ ಗುಳೆದಗುಡ್ಡಕ್ಕೆ ಸ್ಥಳಾಂತರಗೊಳಿಸಿದ್ದು, ಇಲ್ಲಿನ ಪ್ರಗತಿಪರ ಚಿಂತಕರು, ಹಳೆ ವಿದ್ಯಾರ್ಥಿಗಳು, ಶಿಕ್ಷಣ ಪ್ರೇಮಿಗಳು ಸ್ಥಳಾಂತರ ಆದೇಶ ರದ್ದು ಮಾಡಿ ಮರಳಿ ಕಾಲೇಜು ಪ್ರಾರಂಭಿಸುವವರೆಗೂ ಹೋರಾಟ ಮಾಡಲು ಮುಂದಾಗಿದ್ದಾರೆ.
1990-91 ಆರಂಭದ ವರ್ಷದಲ್ಲಿ ಪಟ್ಟಣದ ವಿ.ಎಫ್. ಪಾಟೀಲ ಪ್ರಾಥಮಿಕ ಶಾಲೆ ಹಿಂಭಾಗದಲ್ಲಿರುವ ಖಾಸಗಿ ಕಟ್ಟಡವೊಂದರಲ್ಲಿ ಕಾಲೇಜು ಆರಂಭವಾಗಿತ್ತು. ಅಂದಿನ ಶಾಸಕರಾಗಿದ್ದಂತಹ ಜಿ.ಎಸ್. ಪಾಟೀಲ ಅವರು ಕಾಲೇಜಿಗೆ ಸ್ವಂತ ಕಟ್ಟಡ ನಿರ್ಮಾಣ ಮಾಡಬೇಕು ಎಂಬ ಉದ್ದೇಶವನ್ನಿಟ್ಟುಕೊಂಡು ಅಂದಿನ ಶಿಕ್ಷಣ ಮಂತ್ರಿಗಳಾಗಿದ್ದಂತಹ ಕೆ.ಎಚ್. ರಂಗನಾಥ ಅವರಿಗೆ ನಿರಂತರ ಒತ್ತಡ ಹೇರಿ ಸರ್ಕಾರಿ ಕಾಲೇಜು ನಿರ್ಮಾಣಕ್ಕೆ ಮಂಜೂರಾತಿ ಮಾಡಿಸಿಕೊಂಡು ಬಂದಿದ್ದರು.
ಕಾಲೇಜಿಗೆ ಜಾಗ ಹುಡುಕುತ್ತಿರುವಾಗ ಆರ್.ಬಿ. ಗಿರಡ್ಡಿ ಅವರ ಕುಟುಂಬವು ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಬದಾಮಿ ರಸ್ತೆಯಲ್ಲಿರುವ ಐದು ಎಕರೆ ಜಮೀನನ್ನು ಖರೀದಿಸಿ ಕಾಲೇಜು ನಿರ್ಮಾಣಕ್ಕೆ ದಾನವಾಗಿ ನೀಡಿತು.
ಕಾಲೇಜು ಕಟ್ಟಡ ನಿರ್ಮಾಣಕ್ಕೆ ಜಾಗ ದೊರೆತ ನಂತರ ಶಾಸಕ ಜಿ.ಎಸ್. ಪಾಟೀಲ ಅವರು ಕಟ್ಟಡ ನಿರ್ಮಾಣಕ್ಕೆ ಅನುದಾನ ಬಿಡುಗಡೆಗೊಳಿಸಿ ಕಟ್ಟಡ ನಿರ್ಮಾಣ ಕಾಮಗಾರಿ ಪ್ರಾರಂಭಿಸಿದರು.
ಕಳಕಪ್ಪ ಬಂಡಿ ಪ್ರಥಮ ಬಾರಿಗೆ ಶಾಸಕರಾಗಿ 2007ರಲ್ಲಿ ಅಂದಿನ ಶಿಕ್ಷಣ ಮಂತ್ರಿಗಳಾಗಿದ್ದ ಅರವಿಂದ ಲಿಂಬಾವಳಿ ಮೇಲೆ ಒತ್ತಡ ಹೇರಿ 5 ಕೋಟಿ ಅನುದಾನ ಬಿಡುಗಡೆಗೊಳಿಸಿ ಕಾಮಗಾರಿ ಮುಗಿಸಿದ್ದರು. ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಅವರಿಂದ ಉದ್ಘಾಟನೆಗೊಂಡಿತ್ತು. ನಂತರ ಸರ್ಕಾರಿ ಕಟ್ಟಡಕ್ಕೆ ಸರ್ಕಾರಿ ಕಾಲೇಜು ಬಸನಗೌಡ ಗಿರಡ್ಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಎಂಬ ನಾಮಕರಣದೊಂದಿಗೆ ಸ್ವಂತ ಕಟ್ಟಡದಲ್ಲಿ ಪ್ರಾರಂಭಗೊಂಡಿತು.
ಇದಾದ ಮೂರು ವರ್ಷಗಳ ಬಳಿಕ ಅಂದರೆ 2010ರಲ್ಲಿ ವಿಶ್ವವಿದ್ಯಾಲಯವು ಖಾಸಗಿ ಕಾಲೇಜಿಗೆ ಪರವಾನಗಿ ನೀಡಿದ ಪರಿಣಾಮ ಬಸನಗೌಡ ಗಿರಡ್ಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಪ್ರತಿವರ್ಷ ಕುಸಿಯುತ್ತ ಬಂತು. ಇದೀಗ ಹಾಜರಾತಿ ಕಡಿಮೆ ಎಂಬ ನೆಪವೊಡ್ಡಿ ಗುಳೇದಗುಡ್ಡಕ್ಕೆ ಸ್ಥಳಾಂತರಗೊಂಡಿದೆ.