ಕುಮಟಾ: ಮುಂಗಾರು ಹಂಗಾಮಿಗೆ ತಾಲೂಕಿನ ರೈತಾಪಿ ಸಮುದಾಯ ಸನ್ನದ್ಧವಾಗಿದ್ದು, ಈಗಾಗಲೇ ಕೆಲ ಪ್ರದೇಶಗಳಲ್ಲಿ ಭತ್ತದ ಬಿತ್ತನೆ ಆರಂಭವಾಗಿದೆ. ಕೆಲ ದಿನಗಳ ಹಿಂದೆ ಸುರಿದ ಅಕಾಲಿಕ ಮಳೆಯು ಭತ್ತದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿಸಿದೆ.
ತಾಲೂಕು ವ್ಯಾಪ್ತಿಯಲ್ಲಿ ಒಟ್ಟೂ 2.860 ಹೆಕ್ಟೇರ್ ಭತ್ತ ಬೆಳೆಯುವ ಪ್ರದೇಶವಿದ್ದು, ಕೂಜಳ್ಳಿ ಹಾಗೂ ಅಳ್ವೆಕೋಡಿ ಭಾಗದಲ್ಲಿನ ರೈತರು ಈಗಾಗಲೇ ಭೂಮಿಹದಗೊಳಿಸಿ ಬಿತ್ತನೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ. ಏಪ್ರಿಲ್ ಹಾಗೂ ಮೇ ತಿಂಗಳಿನಲ್ಲಿ ಆಗಾಗ ಮಳೆಯಾಗುತ್ತಿರುವುದರಿಂದ ಭೂಮಿಯಲ್ಲಿ ತೇವಾಂಶ ಅಧಿಕವಾಗುತ್ತಿದ್ದು, ಇದು ಭತ್ತದ ಬಿತ್ತನೆ ಕಾರ್ಯಕ್ಕೆ ವರದಾನವಾಗಿ ಪರಿಣಮಿಸಿದೆ.
ತಾಲೂಕಿನ ಕುಮಟಾ, ಕೂಜಳ್ಳಿ, ಮಿರ್ಜಾನ ಹಾಗೂ ಗೋಕರ್ಣ ಹೋಬಳಿಯ ರೈತ ಸಂಪರ್ಕ ಕೇಂದ್ರದಲ್ಲಿ ಬಿತ್ತನೆ ಬೀಜ ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನಿದೆ. ತಾಲೂಕು ವ್ಯಾಪ್ತಿಯಲ್ಲಿ ನೀರು ಬಿತ್ತನೆ ಹಾಗೂ ಹೋಬಳಿ ಭಾಗಗಳಲ್ಲಿ ಸಾಲು ನಾಟಿ ಅಧಿಕವಾಗಿದೆ. ಮೊದಲ ಹಂತದಲ್ಲಿ 440 ಕ್ವಿಂಟಾಲ್ ಜಯಾ ಭತ್ತದ ಬೀಜ ಬಂದಿದ್ದು, 725 ರೈತರಿಗೆ 251 ಕ್ವಿಂಟಾಲ್ ಬೀಜವನ್ನು ವಿತರಿಸಲಾಗಿದೆ. ಎಂಟಿಯು-1.000 ತಳಿಯ 220 ಕ್ವಿಂಟಾಲ್ ಬೀಜ ದಾಸ್ತಾನಿದ್ದು, 217 ರೈತರಿಗೆ 75 ಕ್ವಿಂಟಾಲ್ ಹಾಗೂ ಹೈಬ್ರಿಡ್ ಪಿ.ಎ.ಸಿ-837 ಭತ್ತದ ತಳಿಯ 10.5 ಕ್ವಿಂಟಾಲ್ ದಾಸ್ತಾನಿದ್ದು, ಇದನ್ನು 8 ರೈತರು ಮಾತ್ರ ಪಡೆದುಕೊಂಡಿದ್ದಾರೆ. ಈ ಎಲ್ಲ ಬೀಜವನ್ನು ಸಹಾಯ ಧನದಲ್ಲಿ ರೈತರಿಗೆ ವಿತರಿಸಲಾಗುತ್ತಿದೆ.
ಬೇಡಿಕೆಗೆ ತಕ್ಕಂತೆ ಮೂರು ಹಂತಗಳಲ್ಲಿ ಬಿತ್ತನೆ ಬೀಜವನ್ನು ತರಿಸಿಕೊಡಲಾಗುವುದು. ತಾಲೂಕಿ ನಲ್ಲಿ ಬೀಜ ಭತ್ತದ ಒಟ್ಟೂ ಬೇಡಿಕೆ ಸರಿ ಸುಮಾರು 950 ಕ್ವಿಂಟಾಲ್ ಗಳಿವೆ. ಆದರೆ ಕಳೆದ ವರ್ಷ ನೆರೆ ಹಾವಳಿಯಿಂದ ಭತ್ತದ ಬೆಳೆ ಹಾಳಾಗಿರುವುದರಿಂದ ಈ ವರ್ಷ 1 ಸಾವಿರ ಕ್ವಿಂಟಾಲ್ ಗಿಂತಲೂ ಅಧಿಕ ಬೇಡಿಕೆ ಬರುವ ನಿರೀಕ್ಷೆಯಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಶಂಕರ ಹೆಗಡೆ ಮಾಹಿತಿ ನೀಡಿದ್ದಾರೆ. ಕೃಷಿ ಚಟುವಟಿಕೆಗೆ ಕೂಲಿ ಕಾರ್ಮಿಕರ ದರ ದಿನದಿಂದ ದಿನಕ್ಕೆ ಅಧಿಕವಾಗುತ್ತಿದೆ. ಲಾಕ್ ಡೌನ್‌ನಿಂದ ಕೃಷಿ ಕಾರ್ಯ ವಿಳಂಬವಾಗಿದೆ. ಇದರಿಂದ ಆರ್ಥಿಕ ಸಂಕಷ್ಟವಾಗಲಿದ್ದು, ಸರ್ಕಾರ ರೈತರ ಸಹಾಯಕ್ಕೆ ನಿಲ್ಲಬೇಕು ಎನ್ನುತ್ತಾರೆ ಕೂಜಳ್ಳಿಯ ರೈತ ಮಾದೇವ ನಾಯ್ಕ.