ಬುಕ್ ಮೈ ಶೋ ವಿರುದ್ಧ ಹಲವು ನಿರ್ಮಾಪಕರು, ನಿರ್ದೇಶಕರಿಂದ ಕೇಳಿಬಂದಿದ್ದ ಆರೋಪಕ್ಕೆ ಸಂಬಂಧಿಸಿದಂತೆ, ನಿರ್ಮಾಪಕರ ಸಂಘ ಶೀಘ್ರವೇ “ನಮ್ಮ ಚಿತ್ರ ಡಾಟ್ ಕಾಮ್’ ಆ್ಯಪ್ ಶುರು ಮಾಡುವ ಮೂಲಕ ನಿರ್ಮಾಪಕರ ಸಮಸ್ಯೆ ಬಗೆಹರಿಸಲು ಮುಂದಾಗಿದೆ. ಇತ್ತೀಚೆಗಷ್ಟೇ ಒಳ್ಳೆಯ ಸಿನಿಮಾಗಳಿಗೂ ಬುಕ್ ಮೈ ಶೋನಿಂದ ಅನ್ಯಾಯ ಆಗುತ್ತಿದೆ ಎಂಬ ಆರೋಪ ಜೋರಾಗಿಯೇ ಕೇಳಿಬಂದಿತ್ತು.
ಈ ಹಿನ್ನೆಲೆಯಲ್ಲಿ ನಿರ್ಮಾಪಕರ ಸಂಘ ಆದಷ್ಟ ಬೇಗ “ನಮ್ಮ ಚಿತ್ರ ಡಾಟ್ ಕಾಮ್’ ಆ್ಯಪ್ ಹೊರತಂದು ಆ ಮೂಲಕ ನಿರ್ಮಾಪಕರ ಪರ ನಿಲ್ಲುವ ಭರವಸೆ ನೀಡಿದೆ. ಈ ಕುರಿತು
“ಉದಯವಾಣಿ’ ಜೊತೆ ಮಾತನಾಡಿದ ಸಂಘದ ಅಧ್ಯಕ್ಷ ಪ್ರವೀಣ್ ಕುಮಾರ್, “ಬುಕ್ ಮೈ ಶೋ ನಡೆಸುವ ವ್ಯಕ್ತಿಗಳು ಸರ್ವಾಧಿಕಾರಿಗಳಂತೆ ವರ್ತಿಸುತ್ತಿದ್ದಾರೆ. ಕನ್ನಡದ ಬಹುತೇಕ ಸಿನಿಮಾಗಳಿಗೆ ಬೆಂಬಲ ನೀಡದೆ, ಕಡೆಗಣಿಸಲಾಗುತ್ತಿದೆ.
ಹೀಗಾಗಿ “ನಮ್ಮ ಚಿತ್ರ ಡಾಟ್ ಕಾಮ್’ ಎಂಬ ಹೊಸ ಆ್ಯಪ್ ಹೊರತಂದು, ಆ ಮೂಲಕ ಕನ್ನಡ ಸಿನಿಮಾ ನಿರ್ಮಾಪಕರ ಸಮಸ್ಯೆಗೆ ಸ್ಪಂದಿಸುವ ಕೆಲಸ ಮಾಡಲಾಗುವುದು. ಈಗಾಗಲೇ ಈ ಆ್ಯಪ್ ಕುರಿತು ಮಾತುಕತೆ ನಡೆದಿದೆ. ನಾವೇ ಸಾಫ್ಟ್ವೇರ್ ರೆಡಿ ಮಾಡಿ, ಅದನ್ನು ಸರ್ಕಾರಕ್ಕೆ ಕೊಡುತ್ತಿದ್ದೇವೆ. ಆದರೆ, ಆ ಆ್ಯಪ್ ನಿರ್ವಹಣೆಯನ್ನು ನಾವು ವಹಿಸಿಕೊಳ್ಳುತ್ತೇವೆ. ಇದು ನಿರ್ಮಾಪಕರ ಪರ ಇರಲಿದೆ.
ಈ ಆ್ಯಪ್ ಹೇಗೆ ಕಾರ್ಯನಿರ್ವಹಿಸುತ್ತೆ ಅಂದರೆ, ಪ್ರತಿ ಸಿನಿಮಾಗೂ ಒಂದು ಕೋಡ್ ನಂಬರ್ ಇರುತ್ತೆ. ಅದನ್ನು ನಿರ್ಮಾಪಕರಿಗೂ ಹಾಗು ಸರ್ಕಾರಕ್ಕೂ ಕೊಡಲಾಗುತ್ತೆ. ತಮ್ಮ ಆ್ಯಪ್‌ನಲ್ಲಿ ಕೋಡ್ ನಂಬರ್ ಮೂಲಕ ಎಲ್ಲಿಂದ ಬೇಕಾದರೂ, ರಿಲೀಸ್ ಆಗುವ ತಮ್ಮ ಚಿತ್ರಗಳ ಗಳಿಕೆ ಎಷ್ಟಾಯಿತು. ಎಷ್ಟು ಜನ ಬಂದರು ಎಂಬಿತ್ಯಾದಿ ವಿಷಯ ತಿಳಿಯಬಹುದು. ಅಲ್ಲಿ ಎಲ್ಲವೂ ಮುಕ್ತವಾಗಿರುತ್ತೆ.
ಇನ್ನು, ಜಿಎಸ್‌ಟಿ ಬಗ್ಗೆಯೂ ನಮ್ಮ ಸಂಘ ಸರ್ಕಾರದ ಗಮನಸೆಳೆದಿದೆ. ಶೇ.9 ರಷ್ಟು ಜಿಎಸ್‌ಟಿ ನಾಲ್ಕು ತಿಂಗಳ ಬಳಿಕ ಅದು ನಿರ್ಮಾಪಕರಿಗೆ ಹಿಂದಿರುಗಬೇಕು ಎಂಬ ಬಗ್ಗೆ ಮಾತುಕತೆ ನಡೆದಿದೆ. ಈ ಎರಡು ವಿಷಯಗಳು ಮುಂದಿನ ತಿಂಗಳಲ್ಲಿ ಬಗೆಹರಿದು, ಆದೇಶ ಬರಲಿದೆ. ಒಟ್ಟಾರೆ, ಬುಕ್ ಮೈ ಶೋ ನಂಬಿ ಕೂರುವ ಯಾವುದೇ ಪರಿಸ್ಥಿತಿ ಎದುರಾಗದಂತೆಯೇ, “ನಮ್ಮ ಚಿತ್ರ ಡಾಟ್ ಕಾಮ್’ ಆ್ಯಪ್ ತಯಾರಾಗುತ್ತಿದೆ’ ಎಂದು ವಿವರ ಕೊಡುತ್ತಾರೆ ಪ್ರವೀಣ್‌ಕುಮಾರ್.
ಈ ಹಿಂದೆ ಬುಕ್ ಮೈ ಶೋನ ಧೋರಣೆ ಗಮನಿಸಿ, ಮಂಡಳಿಯಲ್ಲಿ ಕರೆಸಿ ಚರ್ಚಿಸಲಾಗಿತ್ತು. ಹಣ ಕೊಟ್ಟವರಿಗೊಂದು, ಕೊಡದವರಿಗೊಂದು ರೀತಿ ಪ್ರಚಾರ ಕೊಡುತ್ತಿತ್ತು. ಆಗ ನೀವು ವಿಮರ್ಶೆ ಬರೆಯೋ ಆಗಿಲ್ಲ. ಟಿಕೆಟ್ ಕ್ಲೋಸ್, ಹೌಸ್‌ಫುಲ್ ಅಂತ ಹಾಕುವಂತಿಲ್ಲ ಎಂದು ಹೇಳಲಾಗಿತ್ತು. ಆದರೂ, ಮಂಡಳಿಯ ಮಾತಿಗೆ ಬೆಲೆ ಕೊಡದೆ, ಪುನಃ ಕನ್ನಡ ಸಿನಿಮಾಗಳ ಪಾಲಿಗೆ ಸಮಸ್ಯೆಯಾಗಿದೆ. ಇದಕ್ಕೆ ಶೀಘ್ರ ಕಡಿವಾಣ ಹಾಕುತ್ತಿದ್ದೇವೆ. ಈ ಕುರಿತು ಮಾರ್ಚ್ ಎರಡನೇ ಶನಿವಾರ ನಿರ್ಮಾಪಕರ ಬೃಹತ್ ಸಭೆ ನಡೆಸಿ, ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತೇವೆ’ ಎಂದಿದ್ದಾರೆ.