Advertisement

“ಗಂಡುಗಲಿ ಮದಕರಿ ನಾಯಕ’ನಿಗೆ ತಯಾರಿ ಜೋರು

09:59 AM Nov 20, 2019 | Lakshmi GovindaRaj |

ಸದ್ಯ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅಭಿನಯದ “ಕುರುಕ್ಷೇತ್ರ’ ಚಿತ್ರ ನೂರನೇ ದಿನದತ್ತ ಅಡಿಯಿಟ್ಟಿದೆ. ಇದರ ಬೆನ್ನಲೇ ದರ್ಶನ್‌ ಅಭಿನಯದ “ಒಡೆಯ’ ಚಿತ್ರ ಕೂಡ ಡಿಸೆಂಬರ್‌ನಲ್ಲಿ ತೆರೆಗೆ ಬರೋದಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ. ಮತ್ತೊಂದೆಡೆ “ರಾಬರ್ಟ್‌’ ಚಿತ್ರದ ಪ್ರೊಡಕ್ಷನ್‌ ಕೆಲಸಗಳೂ ಭರದಿಂದ ನಡೆಯುತ್ತಿದೆ. ಈ ಎಲ್ಲ ಚಿತ್ರಗಳ ನಂತರ ದರ್ಶನ್‌ ಯಾವ ಚಿತ್ರ ಮಾಡಲಿದ್ದಾರೆ ಅನ್ನೋದು ಅಭಿಮಾನಿಗಳ ಮುಂದಿರುವ ಪ್ರಶ್ನೆ.

Advertisement

ಚಿತ್ರರಂಗದ ಮೂಲಗಳ ಪ್ರಕಾರ, “ರಾಬರ್ಟ್‌’ ಚಿತ್ರದ ನಂತರ ದರ್ಶನ್‌, “ಗಂಡುಗಲಿ ಮದಕರಿನಾಯಕ’ ಚಿತ್ರವನ್ನು ಕೈಗೆತ್ತಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಈಗಾಗಲೇ “ಗಂಡುಗಲಿ ಮದಕರಿನಾಯಕ’ ಚಿತ್ರದ ಬಹುತೇಕ ಪ್ರೀ-ಪ್ರೊಡಕ್ಷನ್‌ ಕೆಲಸಗಳು ಅಂತಿಮ ಹಂತದಲ್ಲಿದೆ. ಇದೇ ವಾರಾಂತ್ಯದಲ್ಲಿ ದರ್ಶನ್‌ ಅವರಿಗೆ ನಾಯಕಿ, ಚಿತ್ರದ ಇತರೆ ಕಲಾವಿದರು ಮತ್ತು ತಂತ್ರಜ್ಞರ ಪಟ್ಟಿ ಹೊರಬೀಳಲಿದ್ದು, ಚಿತ್ರತಂಡದ ಪ್ಲಾನ್‌ ಪ್ರಕಾರ ಎಲ್ಲವೂ ನಡೆದರೆ, ಡಿಸೆಂಬರ್‌ ಮೊದಲವಾರ “ಗಂಡುಗಲಿ ಮದಕರಿನಾಯಕ’ ಸೆಟ್ಟೇರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಇನ್ನು “ಗಂಡುಗಲಿ ಮದಕರಿನಾಯಕ’ ಐತಿಹಾಸಿಕ ಚಿತ್ರವಾಗಿದ್ದು, ಕಾದಂಬರಿಕಾರ ಬಿ.ಎಲ್‌ ವೇಣು ಅವರ ಕೃತಿಯನ್ನು ಆಧರಿಸಿ ಚಿತ್ರ ಮೂಡಿ ಬರುತ್ತಿದೆ. ಕನ್ನಡದ ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್‌ ಬಾಬು ಚಿತ್ರಕ್ಕೆ ಆಕ್ಷನ್‌-ಕಟ್‌ ಹೇಳಲಿದ್ದಾರೆ. ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಹಂಸಲೇಖ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ.  ಇವೆಲ್ಲದರ ನಡುವೆ “ಗಂಡುಗಲಿ ಮದಕರಿನಾಯಕ’ ಚಿತ್ರದ ಬಗ್ಗೆ ಗಾಂಧಿನಗರದಲ್ಲಿ ಒಂದಷ್ಟು ಅಂತೆ-ಕಂತೆಗಳು ಕೂಡ ಜೋರಾಗಿ ಹರಿದಾಡುತ್ತಿದೆ.

ಸ್ಯಾಂಡಲ್‌ವುಡ್‌ನ‌ ಮೋಹಕ ತಾರೆ ರಮ್ಯಾ “ಗಂಡುಗಲಿ ಮದಕರಿನಾಯಕ’ ಚಿತ್ರಕ್ಕೆ ನಾಯಕಿಯಾಗುವ ಮೂಲಕ ಮತ್ತೆ ಚಿತ್ರರಂಗಕ್ಕೆ ವಾಪಸ್‌ ಆಗುತ್ತಾರೆ ಎಂಬ ಸುದ್ದಿ ಕೂಡ ಹರಿದಾಡುತ್ತಿದೆ. ಇನ್ನು ಇತ್ತೀಚಿಗೆ ರಮ್ಯಾ ಕೂಡ ಚಿತ್ರರಂಗಕ್ಕೆ ಮರಳುವ ಬಗ್ಗೆ ಹೇಳಿಕೊಂಡಿದ್ದರಿಂದ, ಈ ಚಿತ್ರದ ಮೂಲಕವೇ ರಮ್ಯಾ ರಿಟರ್ನ್ ಆದರೂ, ಆಗಬಹುದು ಎಂಬ ಸುದ್ದಿ ಕೊಂಚ ಹೆಚ್ಚಾಗಿಯೇ ಹರಿದಾಡುತ್ತಿದೆ. ಆದರೆ ಇದ್ಯಾವುದರ ಬಗ್ಗೆಯೂ ಗುಟ್ಟು ಬಿಟ್ಟುಕೊಡದ ನಿರ್ದೇಶಕ ರಾಜೇಂದ್ರ ಸಿಂಗ್‌ ಬಾಬು, ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌ ಮತ್ತು ಚಿತ್ರತಂಡ ಮಾತ್ರ,

ಇದೇ ತಿಂಗಳ ಕೊನೆಗೆ “ಗಂಡುಗಲಿ ಮದಕರಿನಾಯಕ’ ಚಿತ್ರದ ಬಗ್ಗೆ ಎಲ್ಲ ಮಾಹಿತಿಯನ್ನು ಅಧಿಕೃತವಾಗಿ ಬಹಿರಂಗಪಡಿಸಲಿದ್ದೇವೆ ಎಂದಿದೆ. ಒಟ್ಟಾರೆ, ಈಗಾಗಲೆ “ಸಂಗೊಳ್ಳಿ ರಾಯಣ್ಣ’ ಚಿತ್ರದ ಮೂಲಕ ಐತಿಹಾಸಿಕ ಪಾತ್ರಗಳಿಗೂ ಸೈ ಎಂದಿದ್ದ ದರ್ಶನ್‌, ಈಗ “ಗಂಡುಗಲಿ ಮದಕರಿ ನಾಯಕ’ನಾಗಿ ದರ್ಬಾರ್‌ ಮಾಡೋದಕ್ಕೆ ರೆಡಿಯಾಗಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಮೈಲಿಗಲ್ಲು ನಿರ್ಮಿಸಲಿದೆ ಎಂದೇ ಹೇಳಲಾಗುತ್ತಿರುವ ಈ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿಗಳು ಇದೇ ತಿಂಗಳಾಂತ್ಯಕ್ಕೆ ಹೊರಬೀಳುವುದಂತೂ ಪಕ್ಕಾ ಎನ್ನಲಾಗುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next