ರಾಣಿಬೆನ್ನೂರ: ನಮ್ಮ ಸುತ್ತಮುತ್ತಲಿನ ಪರಿಸರ ಮತ್ತು ನೀರಿನ ಮೂಲಗಳ ರಕ್ಷಣೆ, ನಿರ್ವಹಣೆ ಹಾಗೂ ಗಿಡ-ಮರ ಬೆಳೆಸುವುದು, ಪರಿಸರ, ಪ್ಲಾಸ್ಟಿಕ್ ಬಳಕೆ ನಿಷೇಧ ಕುರಿತು ಪ್ರತಿಯೊಬ್ಬರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡಬೇಕು ಎಂದು ಬೆಳಗಾವಿಯ ಡಾ| ಪ್ರಾಣೇಶ ಜಾಗೀರದಾರ ಹೇಳಿದರು.
ಇಲ್ಲಿನ ರಾಷ್ಟ್ರೀಯ ಹೆದ್ದಾರಿಯ ಪಂಪಾಪತಿ ಸಭಾಭವನದಲ್ಲಿ ರೋಟರಿ ಮತ್ತು ಇನ್ನರ್‌ವೀಲ್ ಸಂಸ್ಥೆಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು. ನಿತ್ಯವೂ ನೆಲ, ಜಲ ಹಾಗೂ ವಾಯು ಮಾಲಿನ್ಯ ಹೆಚ್ಚುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ನಮ್ಮ ಜೀವನ ಶೈಲಿ ಬದಲಿಸಿಕೊಳ್ಳುವ ಅಗತ್ಯವಿದೆ. ಪರಿಸರ ಉಳಿಸಿ ಬೆಳೆಸಲು ಆಸಕ್ತಿ ತೋರಬೇಕು ಎಂದು ಹೇಳಿದರು.
ದಾವಣಗೆರೆ ರೋಟರಿ ಸಂಸ್ಥೆಯ ನಿಕಟ ಪೂರ್ವ ಅಧ್ಯಕ್ಷೆ ನಿರ್ಮಲಾ ಮಹೇಶ್ವರಪ್ಪ ಮಾತನಾಡಿದರು. ಡಾ| ಪ್ರಾಣೇಶ ಜಾಗೀರದಾರ ಅವರು ರೋಟರಿ ಸಂಸ್ಥೆಯ ನೂತನ ಅಧ್ಯಕ್ಷ ವೀರೇಶ ಹನಗೋಡಿಮಠ ಹಾಗೂ ಕಾರ್ಯದರ್ಶಿ ಉಮಾಪತಿ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ನಂತರ ಅವರ ತಂಡದ ಸದಸ್ಯರಿಗೆ ಪ್ರಮಾಣ ವಚನ ಬೋಧಿಸಿ, ರೋಟರಿ ಸಂಸ್ಥೆಗೆ ನೂತನವಾಗಿ ಸೇರ್ಪಡೆಯಾದ ಡಾ| ಕುಲಕರ್ಣಿ, ಡಾ| ವಿನಾಯಕ ಹಿರೇಗೌಡ್ರ, ಡಾ| ಸಂಗೊಳ್ಳಿ, ಡಿವೈಎಸ್‌ಪಿ ಟಿ.ವಿ.ಸುರೇಶ, ಅಕ್ಷಿಸ್ ಬ್ಯಾಂಕ್ ವ್ಯವಸ್ಥಾಪಕ ಬನ್ನಿಗಿಡದ ಅವರನ್ನ ಸ್ವಾಗತಿಸಿ ರೋಟರಿ ಪಿನ್ ವಿತರಣೆ ಮಾಡಿದರು.
ದಾವಣಗೆರೆ ರೋಟರಿ ಸಂಸ್ಥೆಯ ನಿಕಟ ಪೂರ್ವ ಅಧ್ಯಕ್ಷೆ ನಿರ್ಮಲಾ ಮಹೇಶ್ವರಪ್ಪ ಅವರು ಇನ್ನರ್ ವೀಲ್ ಸಂಸ್ಥೆಯ ಅಧ್ಯಕ್ಷೆ ರಾಜೇಶ್ವರಿ ಹನಗೋಡಿಮಠ ಹಾಗೂ ಕಾರ್ಯದರ್ಶಿ ಸುಮಾ ಹೊಟ್ಟಿಗೌಡ್ರ ಅವರಿಗೆ ಅಕಾರ ಹಸ್ತಾಂತರಿಸಿ ಪ್ರಮಾಣ ವಚನ ಬೋಧಿಸಿದರು.
ಎಎಸ್‌ಐ ಕೆ.ಸಿ.ಕೋಮಲಾಚಾರಿ ಅವರ ಪತ್ನಿ ಗಾಯತ್ರಿ ಈಚೆಗೆ ನಿಧನ ಹೊಂದಿದಾಗ ಅವರ ನೇತ್ರಗಳನ್ನು ಪ್ರೇರಣಾ ಅಂಧತ್ವ ಸಂಸ್ಥೆಗೆ ನೀಡಿದ್ದಕ್ಕೆ ಪ್ರೇರಣಾ ಅಂಧತ್ವ ಸಂಸ್ಥೆಯ ಅಧ್ಯಕ್ಷೆ ಜಯಾ ಶ್ರೀನಿವಾಸ ಮತ್ತು ಡಾ| ಚಂದ್ರಶೇಖರ ಕೇಲಗಾರ ಎಎಸ್‌ಐ ಕೋಮಲಾಚಾರಿ ಅವರನ್ನು ಸನ್ಮಾನಿಸಿದರು.
ಜಿಲ್ಲಾ ಸಹಾಯಕ ಗೌರ್ನರ್ ಪ್ರಕಾಶ ಗುಪ್ತರಾ, ನಿಕಟ ಪೂರ್ವ ಅಧ್ಯಕ್ಷ ವಾಲಾಜೀಭಾಯಿ ಪಾಟೇಲ, ಚೈತನ್ಯ ಮೆಹರವಾಡೆ, ಪ್ರತಿಭಾ ಪಟ್ಟಣಶೆಟ್ಟಿ, ಪೂಜಾ ವಿರುಪಣ್ಣನವರ, ವಜ್ರೇಶ್ವರಿ ಲದ್ವಾ, ಬಿ.ವಿ.ಪಾಟೀಲ, ರಾಜೇಂದ್ರ ಇರಕಲ್, ಪೃಥ್ವಿರಾಜ್ ಜೈನ್, ಕೆ.ವಿ.ಶ್ರೀನಿವಾಸ, ಡಾ| ಬಸವರಾಜ ಕೇಲಗಾರ, ಗುರುಪ್ರಕಾಶ ಜಂಬಗಿ, ಫಕ್ಕೀರಪ್ಪ ಹೊನ್ನಾಳಿ, ಈಶ್ವರಗೌಡ ಪಾಟೀಲ, ಶಂಕರಗೌಡ ಮಾಳಗಿ, ಪೂರ್ಣಚಂದ್ರ ಗುಪ್ತಾ, ಜಿ.ಜಿ.ಹೊಟ್ಟಿಗೌಡ್ರ, ವಿರೇಶ ಮೋಟಗಿ, ಡಾ| ಲತಾ ಕೇಲಗಾರ, ಭಾರತಿ ಜಂಬಗಿ ಇದ್ದರು.