Advertisement

ಅರಮನೆಯತ್ತ ದಸರಾ ಗಜಪಯಣಕ್ಕೆ ಸಿದ್ಧತೆ

11:20 AM Aug 31, 2018 | Team Udayavani |

ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಜಂಬೂಸವಾರಿ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಗಜಪಡೆಯ ಆರು ಆನೆಗಳ ಮೊದಲ ತಂಡ ಸೆ.2ರಂದು ಮೈಸೂರಿಗೆ ಆಗಮಿಸಲಿದೆ. ಭಾನುವಾರ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಹೆಬ್ಟಾಗಿಲು ಹುಣಸೂರು ತಾಲೂಕು ವೀರನಹೊಸಹಳ್ಳಿ ಬಳಿಯಿಂದ ಮೊದಲ ತಂಡದಲ್ಲಿ ಬಳ್ಳೆ ಆನೆ ಶಿಬಿರದಿಂದ ಅರ್ಜುನ,

Advertisement

ಮತ್ತಿಗೋಡು ಆನೆ ಶಿಬಿರದಿಂದ ವರಲಕ್ಷ್ಮೀ, ದುಬಾರೆ ಆನೆ ಶಿಬಿರದಿಂದ ವಿಕ್ರಮ, ಧನಂಜಯ, ಗೋಪಿ, ಚೈತ್ರ ಆನೆಗಳನ್ನು ಸಾಂಪ್ರದಾಯಿಕ ಗಜಪಯಣ ಕಾರ್ಯಕ್ರಮದೊಂದಿಗೆ ಮೈಸೂರಿಗೆ ಕರೆತರಲಿದ್ದು, ಸೆ.3ರಂದು ಜಯಮಾರ್ತಾಂಡ ದ್ವಾರದಲ್ಲಿ ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸುವ ಮೂಲಕ ಗಜಪಡೆಯನ್ನು ಅರಮನೆಗೆ ಬರಮಾಡಿಕೊಳ್ಳಲಾಗುತ್ತದೆ.

ಗಜಪಯಣಕ್ಕೆ ಭರದ ಸಿದ್ಧತೆ: ಆ.23ರಂದೇ ಗಜಪಯಣ ಕಾರ್ಯಕ್ರಮಕ್ಕೆ ನಿರ್ಧರಿಸಲಾಗಿತ್ತಾದರೂ ಕೊಡಗಿನಲ್ಲಿ ಉಂಟಾದ ಜಲಪ್ರವಾಹದಿಂದಾಗಿ ಮುಖ್ಯಮಂತ್ರಿಯವರ ಸೂಚನೆ ಮೇರೆಗೆ ಗಜಪಯಣ ಕಾರ್ಯಕ್ರಮವನ್ನು ಮುಂದೂಡಲಾಗಿತ್ತು. ಮಂಗಳವಾರ ಮೈಸೂರಿನಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ದಸರಾ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ಸೆ.2ರಂದು ಗಜಪಯಣಕ್ಕೆ ದಿನಾಂಕ ನಿಗದಿಪಡಿಸಿದ್ದರಿಂದ ಸಿದ್ಧತೆಗಳು ಭರದಿಂದ ಸಾಗಿವೆ. 

ವೀರನಹೊಸಹಳ್ಳಿಯಿಂದ ಗಪಪಯಣ: ಈ ಹಿಂದೆ ಎಚ್‌.ವಿಶ್ವನಾಥ್‌, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಗಜಪಯಣಕ್ಕೆ ಚಾಲನೆ ನೀಡಲಾಗಿತ್ತು. ಈಗ ವಿಶ್ವನಾಥ್‌ ಅವರೇ ಹುಣಸೂರಿನ ಶಾಸಕರಾಗಿರುವುದರಿಂದ ಹೆಚ್ಚಿನ ಆಸಕ್ತಿವಹಿಸಿ, ನಾಗಾಪುರ ಗಿರಿಜನ ಆಶ್ರಮ ಶಾಲೆ ಬಳಿ ನಡೆಯುತ್ತಿದ್ದ ಗಜಪಯಣ ಕಾರ್ಯಕ್ರಮವನ್ನು ಮತ್ತೆ ವೀರನಹೊಸಹಳ್ಳಿ ಬಳಿಗೆ ಕೊಂಡೊಯ್ದಿದ್ದಾರೆ.

ಈ ವರ್ಷ ದಸರಾ ಮಹೋತ್ಸವದ ಜಂಬೂಸವಾರಿಗೆ ಆಯ್ಕೆ ಮಾಡಿರುವ 12 ಆನೆಗಳ ಪೈಕಿ ಅಂಬಾರಿ ಆನೆ ಅರ್ಜುನ ನೇತೃತ್ವದಲ್ಲಿ ಆರು ಆನೆಗಳು ಸೆ.2ರಂದು ಅರಮನೆ ನಗರಿಗೆ ಬರಲಿವೆ. ಆನೆಗಳ ಜೊತೆಗೆ ಆನೆಗಳ ಮಾವುತರು, ಕಾವಾಡಿಗಳು ಮತ್ತು ಅವರ ಕುಟುಂಬ ವರ್ಗ ಬಂದು ದಸರಾ ಮುಗಿಯುವವರೆಗೂ ಅರಮನೆ ಆವರಣದಲ್ಲಿ ವಾಸ್ತವ್ಯ ಹೂಡುವುದರಿಂದ ಶೆಡ್‌ಗಳನ್ನು ನಿರ್ಮಿಸಲಾಗುತ್ತಿದೆ. ಜೊತೆಗೆ ಅವರ ಮಕ್ಕಳಿಗಾಗಿ ಟೆಂಟ್‌ ಶಾಲೆ, ಆರೋಗ್ಯ ಕೇಂದ್ರವನ್ನು ತೆರೆಯಲು ಸಿದ್ಧತೆ ನಡೆದಿದೆ. 

Advertisement

ಆನೆಗಳ ಬದಲು: ಮೊದಲ ತಂಡದಲ್ಲಿ ಅಭಿಮನ್ಯು, ವಿಜಯ, ದ್ರೋಣ ಆನೆಗಳನ್ನು ಕರೆತರಲು ಉದ್ದೇಶಿಸಲಾಗಿತ್ತಾದರೂ ಹುಣಸೂರು ತಾಲೂಕಿನ ಹನಗೋಡು ಬಳಿಯ ತರಗನ್‌ ಎಸ್ಟೇಟ್‌ನಲ್ಲಿ ಕಾಣಿಸಿಕೊಂಡಿರುವ ಹುಲಿ ಸೆರೆ ಹಿಡಿಯುವ ಕಾರ್ಯಾಚರಣೆಗೆ ಈ ಆನೆಗಳನ್ನು ಬಳಸಿಕೊಂಡಿರುವುದರಿಂದ ದುಬಾರೆ ಆನೆ ಶಿಬಿರದಿಂದ ವಿಕ್ರಮ, ಧನಂಜಯ, ಗೋಪಿ ಆನೆಗಳನ್ನು ಕರೆತರಲಾಗುತ್ತಿದೆ. 

ದಸರಾ ಉನ್ನತಮಟ್ಟದ ಸಭೆ ತೀರ್ಮಾನದಂತೆ ಸೆ.2ರಂದು ಗಜಪಯಣ ಕಾರ್ಯಕ್ರಮಕ್ಕೆ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಬಳಿ ಸಿದ್ಧತೆ ನಡೆದಿದ್ದು, ಅರ್ಜುನ ಸೇರಿದಂತೆ ಆರು ಆನೆಗಳ ಮೊಲದ ತಂಡವನ್ನು ಸೆ.3ರಂದು ಅರಮನೆಗೆ ಬರಮಾಡಿಕೊಳ್ಳಲಾಗುವುದು.
-ಸಿದ್ರಾಮಪ್ಪ ಚಳಾಪುರೆ, ಉಪ ಅರಣ್ಯ ಸಂರಕ್ಷಣಾಧಿಕಾರಿ, ಮೈಸೂರು

* ಗಿರೀಶ್‌ ಹುಣಸೂರು

Advertisement

Udayavani is now on Telegram. Click here to join our channel and stay updated with the latest news.

Next