ಬೆಂಗಳೂರು : ಈಗಿನಿಂದಲೇ ಬಿಬಿಎಂಪಿ ಚುನಾವಣೆ ತಯಾರಿ ಮಾಡಬೇಕು, ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ಚುನಾವಣೆ ನಡೆಯಲಿದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.
ಬಿಜೆಪಿ ಕಚೇರಿಯಲ್ಲಿಗುರುವಾರ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ನೇತೃತ್ವದಲ್ಲಿ ಬೆಂಗಳೂರು ಮಹಾನಗರದ ಶಾಸಕರು ಮತ್ತು ವಿಧಾನಪರಿಷತ್ ಸದಸ್ಯರ ಸಭೆಯ ಬಳಿಕ ಮಾತನಾಡಿ,ಇಂದು ಬಿಬಿಎಂಪಿ ಚುನಾವಣೆ ಕುರಿತು ಜಿಲ್ಲಾಧ್ಯಕ್ಷರು, ಶಾಸಕರುಗಳ ಜೊತೆ ಸಭೆ ನಡೆಸಿದೆವು.ಬಿಬಿಎಂಪಿ ಚುನಾವಣಾ ತಯಾರಿ ಬಗ್ಗೆ ಚರ್ಚೆ ಮಾಡಿದ್ದೇವೆ.ಈಗಿನಿಂದಲೇ ಬಿಬಿಎಂಪಿ ಚುನಾವಣೆ ತಯಾರಿ ಮಾಡಬೇಕು.
ಪಕ್ಷದ ವತಿಯಿಂದ ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆ ಮಾಡಲಾಗುವುದು.
ಅಭಿವೃದ್ಧಿ ಕಾಮಗಾರಿ ಈಗಿನಿಂದಲೇ ಮಾಡಬೇಕು.ಮಳೆಗಾಲ ಆರಂಭ ಆಗೋ ಮೊದಲೇ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಿದೆ.ವಿಷನ್ ಡಾಕ್ಯುಮೆಂಟ್ ಮಾಡಲು ನಿರ್ಧಾರ ಮಾಡಿದ್ದೇವೆ. ಪ್ರತೀ 15 ದಿನಗಳಿಗೊಮ್ಮೆ ಸಭೆ ಸೇರಲು ನಿರ್ಧಾರ ಮಾಡಲಾಗಿದೆ.ಚುನಾವಣೆ ವಿಚಾರದಲ್ಲಿ ಜನಾಭಿಪ್ರಾಯ ಪಡೆದು ವಿಷನ್ ಡಾಕ್ಯುಮೆಂಟ್ ಮಾಡಬೇಕು.ಶಾಸಕರು, ಸಚಿವರು ಈಗಾಗಲೇ ಅಭಿಪ್ರಾಯ ಸಲ್ಲಿಸಿದ್ದಾರೆ ಎಂದು ಸಿಎಂ ತಿಳಿಸಿದರು.
ಸಚಿವರಾದ ಆರ್. ಅಶೋಕ್, ವಿ. ಸೋಮಣ್ಣ ಪೂರ್ವ ನಿರ್ಧರಿತ ಕಾರ್ಯಕ್ರಮಗಳಿಗೆ ಹೋಗಿದ್ದಾರೆ.ಅನುಮತಿ ಪಡೆದೇ ಹೋಗಿದ್ದಾರೆ ಎಂದು ಸಿಎಂ ತಿಳಿಸಿದರು.
ಮೂಲಭೂತ ಸೌಕರ್ಯ ಎಲ್ಲವೂ ಸರಿಯಾಗಬೇಕಿದೆ.ಮಳೆಗಾಲ ಆರಂಭವಾಗಿದೆ. ಸಬ್ ಅರ್ಬನ್ ಕಾಮಗಾರಿ ಈಗಾಗಲೇ ಮುಗಿದಿದೆ.ಮೆಟ್ರೋ ಟೆಂಡರ್ ಒಂದು ವರ್ಷ ಮೊದಲೇ ಮಾಡಬೇಕು ಅಂತ ನಿರ್ಧಾರ ಮಾಡಿದ್ದೇವೆ.ಪಾರ್ಕ್ ಮತ್ತು ಲೇಕ್ ಅಭಿವೃದ್ಧಿ ಮಾಡಲು ನಿರ್ಧರಿಸಲಾಗಿದೆ ಎಂದರು.
ಪಠ್ಯ ಪುಸ್ತಕ ಪರಿಷ್ಕರಣೆ ವಿಚಾರವಾಗಿ ಸಾಹಿತಿಗಳ ರಾಜೀನಾಮೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಶಿಕ್ಷಣ ಸಚಿವರಿಂದ ವರದಿ ಪಡೆಯಬೇಕಿದೆ. ಸಚಿವ ಬಿ.ಸಿ ನಾಗೇಶ್ ಗುಜರಾತಿನಲ್ಲಿದ್ದಾರೆ. ಅವರು ಬಂದ ಬಳಿಕ ಮಾಹಿತಿ ಪಡೆಯುವುದಾಗಿ ಸ್ಪಷ್ಟನೆ ನೀಡಿದರು.