Advertisement

ರಾಜ್ಯದಲ್ಲೂ ಕೆಂಪು ದೀಪ ನಿಷೇಧಕ್ಕೆ ಸಿದ್ಧತೆ

12:22 PM May 03, 2017 | Team Udayavani |

ಬೆಂಗಳೂರು: ಅತಿಗಣ್ಯರ ವಾಹನಗಳ ಮೇಲೆ ಕೆಂಪುದೀಪ ಮತ್ತು ಸೈರನ್‌ಗಳ ಬಳಕೆಯನ್ನು ಮೇ 1ರಿಂದ ರದ್ದುಗೊಳಿಸಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದ್ದು, ಅದರ ಅನುಷ್ಠಾನಕ್ಕೆ ರಾಜ್ಯ ಸಾರಿಗೆ ಇಲಾಖೆ ಸಿದ್ಧತೆ ನಡೆಸಿದೆ.  

Advertisement

ಕೆಂಪುದೀಪ ಮತ್ತು ಸೈರನ್‌ಗಳ ಬಳಕೆ ನಿಷೇಧಕ್ಕೆ ಸಂಬಂಧಿಸಿದ ಅಧಿಸೂಚನೆ ಪ್ರತಿಯೊಂದಿಗೆ ನಿಯಮ ಅನುಸರಿಸುವಂತೆ ಕೋರಿ ಸರ್ಕಾರದ ಎಲ್ಲ ಇಲಾಖೆಗಳಿಗೆ ಸಾರಿಗೆ ಇಲಾಖೆ ಮನವಿ ಮಾಡಿದೆ. ಹಾಗೊಂದು ವೇಳೆ ಮನವಿಗೆ ಸ್ಪಂದಿಸದಿದ್ದರೆ, ಕೆಂಪುದೀಪದ ವಾಹನಗಳ ವಿರುದ್ಧ ಕಾರ್ಯಾಚರಣೆಗಿಳಿಯಲಿದೆ ಎಂದು ಹೇಳಲಾಗಿದೆ. 

ಈಗಾಗಲೇ ವೆಬ್‌ಸೈಟ್‌ ಮೂಲಕ ಅಧಿಸೂಚನೆ ಪ್ರತಿಯನ್ನು ಪಡೆದು, ಅದನ್ನು ಸರ್ಕಾರದ ಗಮನಕ್ಕೆ ತರಲಾಗಿದೆ. ಅದರ ಪ್ರಕಾರ ಮುಂದಿನ ದಿನಗಳಲ್ಲಿ ಸರ್ಕಾರದ ಸೂಚನೆಯಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಸಾರಿಗೆ ಆಯುಕ್ತ ದಯಾನಂದ್‌ ಸ್ಪಷ್ಟಪಡಿಸಿದರು. 

ರಾಜ್ಯದಲ್ಲಿ ರಾಜ್ಯಪಾಲ, ಮುಖ್ಯಮಂತ್ರಿ, ಸಭಾಪತಿ, ಸ್ಪೀಕರ್‌, ಎಲ್ಲ ಸಚಿವರು, ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳು ಮತ್ತು ನ್ಯಾಯಮೂರ್ತಿಗಳ ವಾಹನಗಳಿಗೆ ಕೆಂಪುದೀಪ ಅಥವಾ ಸೈರನ್‌ ಬಳಕೆಗೆ ಅವಕಾಶ ಇದೆ. ಜತೆಗೆ ಕಾನೂನು ಮತ್ತು ಸುವ್ಯವಸ್ಥೆ ನೋಡಿಕೊಳ್ಳುತ್ತಿರುವ ಪೊಲೀಸ್‌ ಅಧಿಕಾರಿಗಳು, ಜಿಲ್ಲಾ ಮತ್ತು ತಾಲ್ಲೂಕು ದಂಡಾಧಿಕಾರಿಗಳ ವಾಹನಗಳಿಗೆ ಆ್ಯಂಬರ್‌ ಲೈಟ್‌ (ಬೇರೆ ಬಣ್ಣದ ದೀಪ) ಅಳವಡಿಸಲಾಗಿದೆ.

ಇದೆಲ್ಲವನ್ನೂ ಕೇಂದ್ರ ಸರ್ಕಾರ ಹೊರಡಿಸಿದ ಅಧಿಸೂಚನೆಯಲ್ಲಿ ರದ್ದುಪಡಿಸಲಾಗಿದ್ದು, ಅದರ ಅನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಸಾರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಮೇ 1ರಿಂದ ಅತಿಗಣ್ಯರ ವಾಹನಗಳ ಮೇಲೆ ಕೆಂಪುದೀಪ ಮತ್ತು ಸೈರನ್‌ಗಳ ಬಳಕೆ ರದ್ದುಪಡಿಸಲಾಗಿದೆ.

Advertisement

ಅದರಂತೆ ಈಗಾಗಲೇ ಕೆಲವರು ವಾಹನಗಳ ಮೇಲಿನ ವಿವಿಧ ಪ್ರಕಾರದ ದೀಪಗಳನ್ನು ತೆರವುಗೊಳಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಉಳಿದವರೂ ಅದನ್ನು ಪಾಲಿಸಲಿದ್ದಾರೆ. ಒಂದು ವೇಳೆ ಪಾಲನೆ ಆಗದಿದ್ದರೆ, ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಕ್ರಮ ಕೈಗೊಳ್ಳಲಿದ್ದಾರೆ ಎಂದು ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ಬಿ. ಬಸವರಾಜು ತಿಳಿಸಿದರು.

ಹೊಯ್ಸಳಕ್ಕೂ ಅನುಮತಿ ಕಡ್ಡಾಯ
ಗಸ್ತು ತಿರುಗುವ ಹೊಯ್ಸಳ ವಾಹನಗಳ ಮೇಲೆ ವಿವಿಧ ಬಣ್ಣದ ದೀಪಗಳ ಅಳವಡಿಕೆಗೆ ಅವಕಾಶ ಇದೆ. ಆದರೆ, ಅಧಿಸೂಚನೆ ಪ್ರಕಾರ ಅದಕ್ಕೂ ಸಾರಿಗೆ ಇಲಾಖೆಯಿಂದ ಅನುಮತಿ ಪಡೆಯುವುದು ಕಡ್ಡಾಯ ಎಂದು ಸಾರಿಗೆ ಆಯುಕ್ತ ದಯಾನಂದ್‌ ತಿಳಿಸಿದ್ದಾರೆ. ಆಂಬ್ಯುಲನ್ಸ್‌ ಮೇಲೆ ದೀಪ ಅಳವಡಿಕೆಗೆ ಅವಕಾಶ ಕಲ್ಪಿಸಲಾಗಿದೆ. ಹಾಗಾಗಿ, ಇದಕ್ಕೆ ಯಾವುದೇ ಸಮಸ್ಯೆ ಆಗದು.

Advertisement

Udayavani is now on Telegram. Click here to join our channel and stay updated with the latest news.

Next