Advertisement

ಸಪ್ತಪದಿ ಸಾಮೂಹಿಕ ವಿವಾಹಕ್ಕೆ ಸಿದ್ಧತೆ ಮಾಡಿಕೊಳ್ಳಿ

10:34 PM Jul 11, 2021 | Team Udayavani |

ಹಾವೇರಿ: ಜಿಲ್ಲೆಯಲ್ಲಿ ಸಪ್ತಪದಿ ಸಾಮೂಹಿಕ ಸರಳ ವಿವಾಹ ಕಾರ್ಯಕ್ರಮಕ್ಕೆ ಸಿದ್ಧತೆ ಮಾಡಿಕೊಳ್ಳುವಂತೆ ತಹಶೀಲ್ದಾರ್‌ಗಳಿಗೆ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಸೂಚನೆ ನೀಡಿದರು.

Advertisement

ನಗರದ ಜಿಲ್ಲಾಧಿ ಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಧಾರ್ಮಿಕ ಪರಿಷತ್‌ ಹಾಗೂ ಧಾರ್ಮಿಕ ದತ್ತಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕೋವಿಡ್‌ ಇಳಿಮುಖವಾದ ಹಿನ್ನೆಲೆಯಲ್ಲಿ ಮಾರ್ಗಸೂಚಿಯಂತೆ ಸಪ್ತಪದಿ ಸರಳ ವಿವಾಹ ಆಯೋಜನೆಗೆ ಜಿಲ್ಲೆಯ ಬೇರೆ ಬೇರೆ ದೇವಾಲಯಗಳನ್ನು ಗುರುತಿಸಿ ಸರ್ಕಾರದ ಆದೇಶದ ನಂತರ ಕಾರ್ಯಕ್ರಮ ಆಯೋಜಿಸಲಾಗುವುದು ಎಂದರು. ವಿಶೇಷ ಘಟಕ ಯೋಜನೆಯಡಿ ಜಿಲ್ಲೆಯ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳ ದೇವಾಲಯ ಜೀರ್ಣೋದ್ಧಾರಕ್ಕಾಗಿ ಯೋಜಿಸಲಾದ 1.50 ಕೋಟಿ ರೂ. ಕಾಮಗಾರಿಗಳಿಗೆ ಅನುಮೋದನೆ ನೀಡಿ, ತ್ವರಿತವಾಗಿ ಕಾಮಗಾರಿ ಕೈಗೊಳ್ಳಲು ಸೂಚನೆ ನೀಡಿದರು. ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ದೇವಾಲಯಗಳನ್ನು ಗುರುತಿಸಿ ಸರ್ಕಾರದ ಮಾರ್ಗಸೂಚಿಯಂತೆ ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಿ. ಹೊಸ ದೇವಾಲಯಗಳ ನಿರ್ಮಾಣ, ಸಭಾಭವನ, ದೇವಾಲಯಗಳಿಗೆ ರಸ್ತೆ, ಕುಡಿಯುವ ನೀರು, ಆವರಣ ಗೋಡೆ ಮೂಲ ಸೌಕರ್ಯಗಳನ್ನು ಕಲ್ಪಿಸುವಂತೆ ಕ್ರಿಯಾ ಯೋಜನೆ ತಯಾರಿಸಿ ಜಿಲ್ಲಾ ಸಮಿತಿಗೆ ಸಲ್ಲಿಕೆ ಮಾಡಿದರೆ ತಕ್ಷಣ ಅನುಮೋದನೆ ನೀಡುವುದಾಗಿ ಹೇಳಿದರು.

ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ದೇವಾಲಯಗಳ ನಿರ್ಮಾಣಕ್ಕೆ ಬಿಡುಗಡೆಯಾದ ಅನುದಾನವನ್ನು ತ್ವರಿತವಾಗಿ ವೆಚ್ಚ ಮಾಡದಿದ್ದರೆ ಕ್ರಮ ಕೈಗೊಳ್ಳುವುದಾಗಿ ನಿರ್ಮಾಣ ಏಜೆನ್ಸಿ ಜಿಲ್ಲಾ ಪಂಚಾಯತಿ ಎಂಜಿನಿಯರಿಂಗ್‌ ವಿಭಾಗದ ಅಭಿಯಂತರರಿಗೆ ಸೂಚನೆ ನೀಡಿದರು. ಸಮಿತಿ ರಚನೆ: ಜಿಲ್ಲೆಯಲ್ಲಿ ಅನು ಸೂಚಿತ ಬ ಹಾಗೂ ಸಿ ವರ್ಗದ ಏಳು ದೇವಾಲಯಗಳಿಗೆ ವ್ಯವಸ್ಥಾಪನಾ ಸಮಿತಿ ರಚಿಸುವ ಕುರಿತು ಚರ್ಚಿಸಲಾಯಿತು. ವ್ಯವಸ್ಥಾಪನಾ ಅರ್ಜಿ ಸಲ್ಲಿಸಿದವರ ವಿವರವಾದ ಮಾಹಿತಿ ಸಂಗ್ರಹಿಸಬೇಕು. ನಿಯಮಾನುಸಾರ ಯಾವುದೇ ಕ್ರಿಮಿನಲ್‌ ಹಿನ್ನೆಲೆ ಹೊಂದಿರಬಾರದು. ಈ ಕುರಿತು ತಹಶೀಲ್ದಾರ್‌ಗಳು ಸಮಗ್ರವಾಗಿ ಪರಿಶೀಲನೆ ನಡೆಸಿ ಜಿಲ್ಲಾ ಕೇಂದ್ರದ ಉಪವಿಭಾಗಾಧಿಕಾರಗಳ ಮೂಲಕ ಜಿಲ್ಲಾ ಧಾರ್ಮಿಕ ಪರಿಷತ್‌ ಸಮಿತಿ ಸಭೆಗೆ ಜು.16ರೊಳಗೆ ಸಲ್ಲಿಸುವಂತೆ ಸೂಚನೆ ನೀಡಿದರು.

ರಟ್ಟಿಹಳ್ಳಿ ತಾಲೂಕು ಕಡೂರ ಗ್ರಾಮದ ಹನುಮಂತ ದೇವಸ್ಥಾನ, ರಾಣಿಬೆನ್ನೂರು ತಾಲೂಕಿನ ಮೆಡ್ಲೆರಿ ಹಾಗೂ ಮಾಗೋಡ ಗ್ರಾಮದ ಮಾರುತಿ ದೇವಸ್ಥಾನ, ಹಿರೇಕೆರೂರು ತಾಲೂಕಿನ ಹಳ್ಳೂರ ಗ್ರಾಮದ ರಂಗನಾಥ ದೇವಸ್ಥಾನ, ಬಾಳಂಬೀಡ ವಿಷ ಪರಿಹಾರೇಶ್ವರ ದೇವಸ್ಥಾನ ಹಾಗೂ ಬ್ಯಾಡಗಿ ತಾಲೂಕು ಹೆಡಿಗ್ಗೊಂಡ ಕಲ್ಲೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ಸಲ್ಲಿಕೆಯಾದ ಅರ್ಜಿಗಳ ಕುರಿತು ಸಭೆಯಲ್ಲಿ ಪರಿಶೀಲನೆ ನಡೆಸಲಾಯಿತು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಎಸ್‌.ಯೋಗೇಶ್ವರ, ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್‌ ಕಾರ್ಯನಿರ್ವಾಹಕ ಅಭಿಯಂತರ ಚನ್ನವೀರಸ್ವಾಮಿ, ತಹಶೀಲ್ದಾರ್‌ ಗಿರೀಶ ಸ್ವಾದಿ, ಶಿರಸ್ತೇದಾರ ಎ.ಬಿ.ಪಾಟೀಲ, ಜಿಲ್ಲಾ ಧಾರ್ಮಿಕ ಪರಿಷತ್‌ ಸದಸ್ಯರಾದ ನಿಂಗಪ್ಪ ಹರಿಜನ, ಗುಡ್ಡಪ್ಪ ಮತ್ತೂರ, ನಿರಂಜನ ತಂಡೂರ, ಮರುಳಸಿದ್ಧಯ್ಯ ಮಠದ ಇತರರು ಇದ್ದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next