ನವದೆಹಲಿ : ಸೂಡಾನ್ ರಾಜಧಾನಿ ಖಾರ್ಟೂಮ್‌ನಲ್ಲಿ ಸಾವಿರಾರು ಭಾರತೀಯರು ಜೀವವನ್ನು ಪಣಕ್ಕಿಟ್ಟಿರುವ ಬಿಕ್ಕಟ್ಟಿನ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಮಹತ್ವದ ಸಭೆಯ ಅಧ್ಯಕ್ಷತೆ ವಹಿಸಿ ತತ್ ಕ್ಷಣ ಭಾರತೀಯರ ಸ್ಥಳಾಂತರಕ್ಕೆ ಯೋಜನೆಗಳನ್ನು ತಯಾರಿಸಲು ಸೂಚನೆ ನೀಡಿದ್ದಾರೆ.
ಬಿಕ್ಕಟ್ಟಿನ ಪೀಡಿತ ದೇಶದಲ್ಲಿ ಪ್ರಸ್ತುತ 4,000 ಭಾರತೀಯರು ಸಿಲುಕಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಮಹತ್ವದ ಸಭೆಯಲ್ಲಿ ವಿದೇಶಾಂಗ ಸಚಿವ ಎಸ್ ಜೈಶಂಕರ್, ಕಾರ್ಯದರ್ಶಿ ಸಿಪಿವಿ ಔಸಫ್ ಸಯೀದ್ ಮತ್ತು ಭಾರತೀಯರನ್ನು ಸ್ಥಳಾಂತರಿಸುವಲ್ಲಿ ಪ್ರಮುಖ ಪಾತ್ರ ವಹಿಸಬಹುದಾದ ಗಲ್ಫ್ ರಾಷ್ಟ್ರಗಳ ರಾಯಭಾರಿಗಳು ಭಾಗವಹಿಸಿದ್ದರು.
ಸಭೆಯಲ್ಲಿ, ಪ್ರಧಾನಿಯವರು ಸೂಡಾನ್ ನಲ್ಲಿನ ಇತ್ತೀಚಿನ ಬೆಳವಣಿಗೆಗಳನ್ನು ಮೌಲ್ಯಮಾಪನ ಮಾಡಿ ದೇಶದಾದ್ಯಂತದ ಭಾರತೀಯರ ಸುರಕ್ಷತೆಯ ಮೇಲೆ ನಿರ್ದಿಷ್ಟವಾಗಿ ಗಮನಹರಿಸುವುದರೊಂದಿಗೆ ನೆಲದ ಪರಿಸ್ಥಿತಿಗಳ ಮೊದಲ ವರದಿಯನ್ನು ಪಡೆದರು ಎಂದು ಪ್ರಧಾನ ಮಂತ್ರಿ ಕಚೇರಿ (PMO) ತಿಳಿಸಿದೆ.
ಕಳೆದ ವಾರ ಗುಂಡು ತಗುಲಿ ಭಾರತೀಯನೊಬ್ಬ ಸಾವನ್ನಪ್ಪಿದ್ದಕ್ಕೆ ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದಾರೆ. ಜಾಗರೂಕರಾಗಿರಲು, ಬೆಳವಣಿಗೆಗಳನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡಲು ಮತ್ತು ಸೂಡಾನ್‌ನಲ್ಲಿರುವ ಭಾರತೀಯರ ಸುರಕ್ಷತೆಯನ್ನು ನಿರಂತರವಾಗಿ ಮೌಲ್ಯಮಾಪನ ಮಾಡಲು ಮತ್ತು ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡುವಂತೆ ಪಿಎಂ ಎಲ್ಲಾ ಸಂಬಂಧಿತ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಸೂಡಾನ್ ಕಳೆದ ಏಳು ದಿನಗಳಿಂದ ದೇಶದ ಸೇನೆ ಮತ್ತು ಅರೆಸೇನಾ ಗುಂಪಿನ ನಡುವೆ ಭೀಕರ ಕಾಳಗಕ್ಕೆ ಸಾಕ್ಷಿಯಾಗುತ್ತಿದ್ದು, 200ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.