Advertisement

ನೀರಿನ ಸಮಸ್ಯೆ ಇರುವ ಗ್ರಾಮಗಳ ಪಟ್ಟಿ ಸಿದ್ದಪಡಿಸಿ

03:57 PM Apr 07, 2022 | Team Udayavani |

ಚಿತ್ರದುರ್ಗ: ಜಿಲ್ಲೆಯಲ್ಲಿ ಬೇಸಿಗೆ ಸಂದರ್ಭದಲ್ಲಿ ಕುಡಿಯುವ ನೀರಿನ ಸಮಸ್ಯೆ ಸೃಷ್ಟಿಯಾಗುವ ಹಳ್ಳಿಗಳ ಪಟ್ಟಿ ಸಿದ್ಧಪಡಿಸಬೇಕು. ಸರ್ಕಾರದ ನಿರ್ದೇಶನದಂತೆ ಗ್ರಾಪಂ ಮಟ್ಟದಲ್ಲಿ ವಿಪತ್ತು ನಿರ್ವಹಣಾ ಸಮಿತಿ ಸಭೆ ನಡೆಸಿ ಎಂದು ಜಿಲ್ಲಾಧಿಕಾರಿ ಕವಿತಾ ಎಸ್‌. ಮನ್ನಿಕೇರಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಅವರು ಮಾತನಾಡಿದರು. ಏಪ್ರಿಲ್‌ ಅಂತ್ಯದವರೆಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗುವುದಿಲ್ಲ. ಆದರೆ ಮುಂದಿನ ದಿನಗಳಲ್ಲಿ ಸಮಸ್ಯೆ ಉಲ್ಬಣಿಸಬಹುದು. ಸ್ಥಳೀಯ ಜನಪ್ರತಿನಿಧಿಗಳ ಜೊತೆ ಸಮನ್ವಯ ಸಾಧಿಸಿ ಖಾಸಗಿ ಕೊಳವೆಬಾವಿಗಳನ್ನು ಗುರುತಿಸಬೇಕು. ಮಾಲೀಕರಿಗೆ ತಿಳಿ ಹೇಳಿ ಸಂಕಷ್ಟದ ಸಂದರ್ಭದಲ್ಲಿ ಕೊಳವೆಬಾವಿಗಳನ್ನು ಸುಪರ್ದಿಗೆ ಪಡೆದುಕೊಂಡು ಕುಡಿಯುವ ನೀರಿನ ಕಾಮಗಾರಿಗಳನ್ನು ಪೂರ್ಣಗೊಳಿಸಲು ಆದ್ಯತೆ ನೀಡಿ ಸಮರ್ಪಕವಾಗಿ ಕುಡಿಯುವ ನೀರಿನ ಸರಬರಾಜಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.

ಬೇಸಿಗೆ ಹಂಗಾಮಿನಲ್ಲಿ ಕುಡಿಯುವ ನೀರು ಸಮಸ್ಯೆ ಉಂಟಾಗದಂತೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ವಿಪತ್ತು ನಿರ್ವಹಣಾ ಸಭೆ ನಡೆಸಬೇಕು. ನಂತರ ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದ ಸಭೆ ನಡೆಸಿ ಸಂಪೂರ್ಣ ಯೋಜನೆ ತಯಾರಿಸಬೇಕು. ಟಾಸ್ಕ್ಫೋರ್ಸ್‌ ಸಮಿತಿಗೆ ಅಗತ್ಯ ಅನುದಾನ ನೀಡಲಾಗುವುದು ಎಂದು ಹೇಳಿದರು.

ಕೆರೆ ಒತ್ತುವರಿ ತೆರವಿಗೆ ಕ್ರಮ ಕೈಗೊಳ್ಳಿ

ಕೆರೆ ಒತ್ತುವರಿ ತೆರವಿಗೆ ಸಂಬಂಧಪಟ್ಟ ತಹಶೀಲ್ದಾರ್‌ ಹಾಗೂ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಈ ಕುರಿತು ನ್ಯಾಯಾಲಯಗಳಲ್ಲಿ ವ್ಯಾಜ್ಯ ಬಾಕಿಯಿವೆ. ಈ ವಿಷಯದಲ್ಲಿ ಪ್ರಗತಿ ತೋರಿಸದ ಅಧಿಕಾರಿಗಳನ್ನು ನೇರವಾಗಿ ಹೊಣೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿಗಳು ಎಚ್ಚರಿಸಿದರು.

Advertisement

ಕೆರೆಗಳಿಗೆ ಕೊಳಚೆ ನೀರು ಸೇರಿದಂತೆ ನೋಡಿಕೊಳ್ಳಬೇಕು. ಕೆರೆ ಸುತ್ತಲಿನ ಹಸಿರು ವಲಯದಲ್ಲಿ ಗಿಡಮರಗಳನ್ನು ನೆಡಲು ಕ್ರಮ ಕೈಗೊಳ್ಳಬೇಕು. ಗ್ರಾಮಗಳಲ್ಲಿ ಜಾನುವಾರುಗಳಿಗೆ ಕುಡಿಯುವ ನೀರಿನ ಸಲುವಾಗಿ ಕಟ್ಟಿರುವ ತೊಟ್ಟಿಗಳಲ್ಲಿ ನೀರು ತುಂಬಿಸಬೇಕು. ಅನಾವಶ್ಯಕ ನೀರು ಪೋಲು ಆಗುವುದು ತಡೆಯಬೇಕು. ಜಿಲ್ಲಾ, ತಾಲೂಕು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಬೇಸಿಗೆ ಕಾಲದ ರೋಗಗಳಿಗೆ ಸೂಕ್ತ ವೈದ್ಯಕೀಯ ಸೌಲಭ್ಯ ನೀಡಬೇಕು ಎಂದರು.

ತಹಶೀಲ್ದಾರ್‌ಗಳು ಹಾಗೂ ತಾಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ತಾಲೂಕುಗಳ ಕುಡಿಯುವ ನೀರಿನ ಪರಿಸ್ಥಿತಿ ಕುರಿತು ಮಾಹಿತಿ ನೀಡಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಡಾ| ಕೆ. ನಂದಿನಿದೇವಿ, ಅಪರ ಜಿಲ್ಲಾಧಿಕಾರಿ ಇ. ಬಾಲಕೃಷ್ಣ, ಉಪವಿಭಾಗಾಧಿಕಾರಿ ಆರ್‌. ಚಂದ್ರಯ್ಯ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next