Advertisement

ಸಸಿಹಿತ್ಲು-ಕದಿಕೆ ಸೇತುವೆಗೆ ದಾರಿದೀಪ ವ್ಯವಸ್ಥೆಗೆ ತಯಾರಿ

10:55 PM Sep 14, 2019 | mahesh |

ಸಸಿಹಿತ್ಲು: ಅಂತಾರಾಷ್ಟ್ರೀಯವಾಗಿ ಗುರುತಿಸಿಕೊಂಡಿರುವ ಹಳೆಯಂಗಡಿ ಗ್ರಾ.ಪಂ.ನ ಸಸಿಹಿತ್ಲು ಮುಂಡ ಬೀಚ್ ಪ್ರದೇಶಕ್ಕೆ ಹಳೆಯಂಗಡಿ ಮೂಲಕ ಸಂಚರಿಸುವ ಕದಿಕೆಯಲ್ಲಿ ನಿರ್ಮಿಸಿರುವ ಸೇತುವೆ ಲೋಕಾರ್ಪಣೆಯಾಗಿ ಮೂರು ವರ್ಷದ ಬಳಿಕ ಈಗ ದಾರಿದೀಪದ ವ್ಯವಸ್ಥೆಗೆ ತೆರೆಮರೆಯಲ್ಲಿ ಪ್ರಯತ್ನ ಸಾಗಿದೆ.

Advertisement

ಸಸಿಹಿತ್ಲಿಗೆ ಪಡುಪಣಂಬೂರು- ಹೊಗೆಗುಡ್ಡೆಯಾಗಿ ಹಾಗೂ ಹಳೆಯಂಗಡಿ ಕದಿಕೆಯಾಗಿ ಎರಡೂ ರಸ್ತೆಯಾಗಿ ತೆರಳುವಾಗ ಸಿಗುವ ಈ ಸೇತುವೆ ಪ್ರಮುಖ ಸಂಪರ್ಕದ ಕೊಂಡಿಯಾಗಿದೆ. ಸುಮಾರು 300 ಮೀ. ಉದ್ದದ ಈ ಸೇತುವೆಯಲ್ಲಿ ದಾರಿದೀಪ ಇಲ್ಲದೇ ಕತ್ತಲಿನಲ್ಲಿ ಸಂಚರಿಸಬೇಕಾಗಿದೆ. ಸಮಸ್ಯೆಯ ಬಗ್ಗೆ ಈ ಹಿಂದೆ ಉದಯವಾಣಿ ಸುದಿನ ವರದಿ ಮೂಲಕ ಬೆಳಕು ಚೆಲ್ಲಿತ್ತು. ಹಳೆಯಂಗಡಿ ಗ್ರಾ. ಪಂ.ನ ಗ್ರಾಮಸಭೆಗಳಲ್ಲಿಯೂ ಈ ಬಗ್ಗೆ ಗ್ರಾಮಸ್ಥರು ಧ್ವನಿ ಎತ್ತಿದ್ದರು.

ಸಸಿಹಿತ್ಲು ಬೀಚ್ ಅಭಿವೃದ್ಧಿ ಸಮಿತಿಗೂ ಸಹ ಸ್ಥಳೀಯರು ಅನೇಕ ಬಾರಿ ಮನವಿ ಮಾಡಿಕೊಂಡಿದ್ದರು. ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನಕ್ಕೆ ರಾತ್ರಿ ಸಮಯದಲ್ಲಿ ವಿಶೇಷ ಪೂಜೆಗೆ ಆಗಮಿಸುವ ಭಕ್ತರಿಗೂ ತೊಡಕಾಗಿದೆ. ಸಸಿಹಿತ್ಲು ಬೀಚ್‌ನ ಪ್ರವಾಸಿಗರ ವಾಹನಗಳು ಅತ್ಯಾಧುನಿಕ ರೀತಿಯ ಲೈಟ್‌ಗಳನ್ನು ಅಳವಡಿಸಿ ಕೊಂಡು ವೇಗವಾಗಿ ಬರುವಾಗ ನಡೆದು ಕೊಂಡು ಹೋಗುವ ಪಾದ ಚಾರಿಗಳಿಗೆ ತೊಂದರೆಯಾಗುತ್ತಿದೆ. ಸೇತುವೆಯಲ್ಲಿ ರಾತ್ರಿ ಸಮಯದಲ್ಲಿ ಕಿಡಿಗೇಡಿಗಳ ಕಾಟವು ಸಹ ಇದೆ ಎಂದು ಪೊಲೀಸರಲ್ಲಿ ಸ್ಥಳೀಯರು ದೂರಿಕೊಂಡಿದ್ದರು. ಈ ಸಮಸ್ಯೆಯನ್ನು ಅರಿತು ಸೇತುವೆಯ ಎರಡೂ ಬದಿಗಳಲ್ಲಿ ಹೈಮಾಸ್ಟ್‌ ದಾರಿ ದೀಪ ಅಳವಡಿಕೆಗೆ ಯೋಜನೆಯನ್ನು ಸಿದ್ಧಪಡಿಸಲಾಗಿದೆ.

ದಾರಿದೀಪದ ವ್ಯವಸ್ಥೆ

ಕದಿಕೆ ಭಂಡಾರ ಮನೆಯಿಂದ ಸೇತುವೆಯವರೆಗೆ ,ಸೇತುವೆ ದಾಟಿ ಶ್ರೀ ಭಗವತೀ ದೇವಸ್ಥಾನಕ್ಕೆ ತೆರ ಳುವ ರಸ್ತೆಯಲ್ಲಿ 2.20 ಲಕ್ಷ ರೂ. ವೆಚ್ಚದಿಂದ ಪಂಚಾಯತ್‌ನಿಂದ ದಾರಿದೀಪ ಮತ್ತು ವಿ. ಪರಿಷತ್‌ ಸದಸ್ಯ ಐವನ್‌ ಡಿ’ಸೋಜಾ ಅವರ ಅನುದಾನ 2.20 ಲಕ್ಷ ರೂ. ವೆಚ್ಚದಲ್ಲಿ ಸೇತುವೆಯ ಎರಡೂ ಕಡೆಯ ಆರಂಭದಲ್ಲಿ ಹೈಮಾಸ್ಟ್‌ ದಾರಿ ದೀಪವನ್ನು ಅಳವಡಿಸುವ ಯೋಜನೆ ಸಿದ್ಧವಾಗಿದೆ.
– ಎಚ್. ವಸಂತ ಬೆರ್ನಾರ್ಡ್‌, ಅಧ್ಯಕ್ಷರು, ಬೀಚ್ ಅಭಿವೃದ್ಧಿ ಸಮಿತಿ,
ಲೋಕೋಪಯೋಗಿ ಇಲಾಖೆಯಿಂದ ಕ್ರಮ

ಕದಿಕೆ ಸೇತುವೆಯನ್ನು ಲೋಕೋಪಯೋಗಿ ಇಲಾಖೆಯು ನಿರ್ಮಿಸಿರುವುದರಿಂದ ಇಲಾಖೆಯೇ ಸೇತುವೆಯಲ್ಲಿ ದಾರಿದೀಪವನ್ನು ಅಳವಡಿಸಬೇಕು ಎಂದು ಇಲಾಖೆಗೆ ಅಂದಾಜು ಪಟ್ಟಿಯನ್ನು ತಯಾರಿಸಲು ಎಂಜಿನಿಯರ್‌ಗಳಲ್ಲಿ ಸೂಚಿಸಿದ್ದೇನೆ. ಇಲಾಖೆಯಿಂದಲೇ ದಾರಿ ದೀಪ ಅಳವಡಿಸಲು ಕ್ರಮ ಕೈಗೊಳ್ಳಲಾಗಿದೆ.
– ಉಮಾನಾಥ ಕೋಟ್ಯಾನ್‌,ಶಾಸಕರು

ನರೇಂದ್ರ ಕೆರೆಕಾಡು
Advertisement

Udayavani is now on Telegram. Click here to join our channel and stay updated with the latest news.

Next