ಹುಬ್ಬಳ್ಳಿ: ಕೋವಿಡ್ 19 ತಡೆ ನಿಟ್ಟಿನಲ್ಲಿ ತುರ್ತು ಸೇವೆಯಲ್ಲಿ ತೊಡಗಿರುವ ವೈದ್ಯಕೀಯ ವೃತ್ತಿಪರರಿಗೆ ಅನುಕೂಲವಾಗುವಂತೆ ನಗರದ ಕೆಎಲ್‌ಇ ತಾಂತ್ರಿಕ ವಿವಿ 3ಡಿ ಪ್ರಿಂಟೆಡ್ ಮುಖರಕ್ಷಾ ಸಾಧನ ತಯಾರು ಮಾಡಿದೆ.
ಕೋವಿಡ್ 19 ಸೋಂಕಿತರಿಗೆ ಚಿಕಿತ್ಸೆಯಲ್ಲಿ ತೊಡುವ ವೈದ್ಯಕೀಯ ಸಿಬಂದಿ ಸೋಂಕಿತರಿಂದ ಯಾವುದೇ ಅಪಾಯಕ್ಕೀಡಾಗುವುದನ್ನು ತಡೆಯುವ ನಿಟ್ಟಿನಲ್ಲಿ ಈ ಸಾಧನ ನೆರವಾಗಲಿದೆ.
ಕೋವಿಡ್-19ಗೆ ಚಿಕಿತ್ಸೆ ನೀಡುತ್ತಿರುವ ವೈದ್ಯ ಸಿಬಂದಿಗೆ ನೆರವಾಗುವ ಉದ್ದೇಶದಿಂದ ನಗರದ ಲೈಫ್ಲೈನ್ ಆಸ್ಪತ್ರೆಯ ಡಾ| ಶ್ರೀನಿವಾಸ ದೇಶಪಾಂಡೆ ಅವರು ಮಾಡಿಕೊಂಡ ಮನವಿಯಂತೆ ಪ್ರೊ|ಬಸವರಾಜ ಕೊಟ್ಟೂರಶೆಟ್ಟರ ಅವರ ನೇತೃತ್ವದಲ್ಲಿ ವಿವಿಯ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಬೋಧಕರು ಈ ವೈಯಕ್ತಿಕ ಸುರಕ್ಷತಾ ಸಾಧನವನ್ನು ಸಿದ್ಧಪಡಿಸಿದ್ದಾರೆ. ಈ ಸಾಧನ ತಯಾರಿಕೆಗೆ ಪ್ರಸ್ತುತ ಮೂರು 3ಡಿ ಪ್ರಿಂಟರ್ ಬಳಕೆ ಮಾಡಲಾಗುತ್ತಿದ್ದು, ಮುಂದಿನ ವಾರದ ಅಂತ್ಯದ ವೇಳೆಗೆ ಲಭ್ಯ ಕಚ್ಚಾ ಸಾಮಗ್ರಿ ಬಳಸಿ ಸುಮಾರು 500ರಷ್ಟು ಮುಖರಕ್ಷಾ ಸಾಧನ ತಯಾರು ಮಾಡಲಾಗುವುದು.
ಈಗಾಗಲೇ ಪ್ರಾಯೋಗಿಕವಾಗಿ ತಯಾರು ಮಾಡಿದ ಮುಖರಕ್ಷಾ ಸಾಧನಗಳನ್ನು ಡಾ| ಶ್ರೀನಿವಾಸ ದೇಶಪಾಂಡೆ ನೇತೃತ್ವದಲ್ಲಿ ಕೋವಿಡ್ 19 ವಿರುದ್ಧ ಕಾರ್ಯದಲ್ಲಿ ತೊಡಗಿರುವ ಸ್ವಯಂಸೇವಕ ತಂಡಕ್ಕೆ ನೀಡಲಾಗಿದೆ ಎಂದು ಕೆಎಲ್‌ಇ ತಾಂತ್ರಿಕ ವಿವಿ ಕುಲಪತಿ ಡಾ| ಅಶೋಕ ಶೆಟ್ಟರ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.