ಆಳಂದ: ಮಳೆಯ ಏರುಪೇರಾಗಿ ಹಾಗೂ ಶಂಖ ಹುಳದ ಬಾಧೆಯಿಂದ ಹಾಳಾದ ಬೆಳೆಗೆ ಸರ್ಕಾರ ಪರಿಹಾರ ಒದಗಿಸಬೇಕು ಎಂದು ಮಾಜಿ ಶಾಸಕ ಬಿ.ಆರ್. ಪಾಟೀಲ ಒತ್ತಾಯಿಸಿದರು.
ತಾಲೂಕಿನ ಮುನ್ನೊಳ್ಳಿ, ತಡಕಲ್, ಕಿಣ್ಣಿಸುಲ್ತಾನ ಗ್ರಾಮದ ಹೊಲಗಳಿಗೆ ಕಾರ್ಯಕರ್ತರೊಂದಿಗೆ ಭೇಟಿ ನೀಡಿದ ಅವರು, ಸಂಬಂಧಿತ ಅಧಿಕಾರಿಗಳು ಶಂಖದ ಹುಳ ನಿರ್ವಹಣೆಗೆ ಸ್ಥಳಕ್ಕೆ ಭೇಟಿ ಕೊಟ್ಟು ರೈತರಿಗೆ ಮಾರ್ಗದರ್ಶನ ನೀಡಬೇಕು ಎಂದು ಆಗ್ರಹಿಸಿದರು.
ತಡಕಲ್ ಹೊಲಗಳಿಗೆ ಪಾಟೀಲರು ಭೇಟಿ ನೀಡಿದಾಗ ರೈತ ಬಂಡೆವ್ವ ಎನ್ನುವವರು ಶಂಖದ ಹುಳದ ಕಾಟದಿಂದ ಬೆಳೆಯ ಕಾಂಡವನ್ನೇ ಕಡಿದುಹಾಕಿ ನಾಶ ಮಾಡುತ್ತಿವೆ. ಇದುವರೆಗೂ ಸಂಬಂಧಿತ ಅಧಿಕಾರಿಗಳು ಭೇಟಿ ನೀಡಿ ನಿರ್ವಹಣೆ ಮಾಹಿತಿ ನೀಡಿಲ್ಲ ಎಂದು ದೂರಿದರು.
ಈ ವೇಳೆ ಪಾಟೀಲರು ಮೊಬೈಲ್‌ನಿಂದ ಸಹಾಯಕ ಕೃಷಿ ನಿರ್ದೇಶಕರನ್ನು ಸಂಪರ್ಕಿಸಿ ಬಿತ್ತನೆಯಾದ ಸೋಯಾಬಿನ್, ಉದ್ದು, ಹೆಸರು ಬೆಳೆಗಳನ್ನು ಶಂಖದ ಹುಳುಗಳು ತಿಂದು ಬೆಳೆನಾಶ ಮಾಡಿವೆ. ಅಲ್ಲದೇ, ಮಳೆ ಏರುಪೇರಾಗಿ ಹಲವು ಕಡೆ ಬೆಳೆ ಬೆಳೆಯದೇ ನಷ್ಟವಾಗಿರುವ ಕುರಿತು ಸಮಗ್ರವಾಗಿ ಹಾನಿಯ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಿ ಎಂದು ಹೇಳಿದರು.
ಮಳೆ ಹೆಚ್ಚಾಗಿ ತೊಗರಿ ಹಾಳಾಗಿದೆ. ಬಿತ್ತನೆಯಾದ ಬೆಳೆ ಕೈಗೆ ಬಾರದೆ ಮರು ಬಿತ್ತನೆಗೆ ಮುಂದಾಗಿರುವ ರೈತರಿಗೆ ಆರ್ಥಿಕ ಹೊರೆಯಾಗಿದೆ. ಬೆಳೆ ವಿಮೆ ಹಾಗೂ ಪರಿಹಾರ ಒದಗಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಗುರುಶರಣ ಪಾಟೀಲ ಕೊರಳ್ಳಿ, ಕೆಪಿಸಿಸಿ ಸದಸ್ಯ ರಾಜಶೇಖರ ಪಾಟೀಲ ಚಿತಲಿ, ಮಲ್ಲಪ್ಪ ಹತ್ತರಕಿ, ಗಣೇಶ ಪಾಟೀಲ, ತಡಕಲ್ ಗ್ರಾಪಂ ಸದಸ್ಯ ವಿಶ್ವನಾಥ ಪವಾಡಶೆಟ್ಟಿ, ಲಿಂಗರಾಜ ಜಾನೆ, ಸಿದ್ಧು ವೇದಶೆಟ್ಟಿ ಮುನ್ನೊಳ್ಳಿ, ನಾಗಣ್ಣಾ ಗೌರೆ, ಕುಪ್ಪಣ್ಣ ನಾಮಣೆ ಬೆಳೆ ಹಾನಿ ವೀಕ್ಷಿಸಿದರು.