Advertisement

ಪ್ರಮುಖ ದೇಗುಲಗಳಲ್ಲಿ ಸಾಮೂಹಿಕ ವಿವಾಹಕ್ಕೆ ಪೂರ್ವ ಸಿದ್ಧತಾ ಸಭೆ

11:25 PM Jan 24, 2020 | Sriram |

ಉಡುಪಿ: ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ಜಿಲ್ಲೆಯ ಪ್ರಮುಖ ದೇವಾಲಯಗಳಲ್ಲಿ ಎ. 26 ರಂದು ನಡೆಯುವ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಸಂಬಂಧಪಟ್ಟ ದೇವಾಲಯಗಳ ಮುಖ್ಯಸ್ಥರಿಗೆ ಜಿಲ್ಲಾಧಿಕಾರಿ ಜಿ. ಜಗದೀಶ್‌ ತಿಳಿಸಿದರು.

Advertisement

ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಎ. 26 ರಂದು ನಡೆಯುವ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸುವ ವಧುವಿಗೆ ನೀಡಬೇಕಾದ ಒಟ್ಟು 8 ಗ್ರಾಂ. ತೂಕದ ಚಿನ್ನದ ತಾಳಿ ಮತ್ತು ಚಿನ್ನದ ಗುಂಡುಗಳನ್ನು ಖರೀದಿಸಲು ಪಾರದರ್ಶಕ ನಿಯಮದಂತೆ ಟೆಂಡರ್‌ ಮೂಲಕ ಖರೀದಿಸುವಂತೆ ತಿಳಿಸಿದ ಜಿಲ್ಲಾಧಿಕಾರಿಗಳು, ಸ್ಥಳೀಯ ಸಂಪ್ರದಾಯಕ್ಕೆ ತಕ್ಕಂತೆ ತಾಳಿಯ ಮಾದರಿಯನ್ನು ವಿನ್ಯಾಸಗೊಳಿಸುವಂತೆ ತಿಳಿಸಿದರು. ಸರಬರಾಜು ಮಾಡುವ ಚಿನ್ನವು ಕಡ್ಡಾಯವಾಗಿ 22 ಕ್ಯಾರೆಟ್‌ (916 ಹಾಲ್‌ ಮಾರ್ಕ್‌) ಇರುವ ಬಗ್ಗೆ ದೃಢೀಕರಣ ಪತ್ರ ಪಡೆಯುವಂತೆ ಸೂಚಿಸಿದರು.

ವಿವಾಹ ಸಂದರ್ಭದಲ್ಲಿ ಸಹಾಯಧನ
ಸಾಮೂಹಿಕ ವಿವಾಹ ಕಾರ್ಯಕ್ರಮ ಕುರಿತಂತೆ ದೇವಾಲಯಗಳಲ್ಲಿ ಹೆಚ್ಚಿನ ಪ್ರಚಾರ ನೀಡುವಂತೆ ತಿಳಿಸಿದ ಅವರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ನೀಡುವ ಸಹಾಯಧನವನ್ನೂ ವಿವಾಹ ಸಂದರ್ಭದಲ್ಲಿ ವಿತರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ತಿಳಿಸಿದರು.

ಮಾ.27ರವರೆಗೆ ನೋಂದಣಿ
ಎ. 26 ರಂದು ನಡೆಯುವ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಮಾ.27ರ ವರೆಗೆ ವಧು-ವರರನ್ನು ನೋಂದಾಯಿಸಿಕೊಂಡು, ಎ. 1 ರಂದು ನೋಂದಾಯಿತ ವಧು-ವರರ ವಿವರಗಳನ್ನು ದೇವಾಲಯದಲ್ಲಿ ಪ್ರಕಟಿಸ ಬೇಕು. ಈ ಪಟ್ಟಿಗೆ ಎ. 6 ವರೆಗೆ ಆಕ್ಷೇಪ ಸಲ್ಲಿಸಲು ದಿನಾಂಕ ನೀಡಿ, ಅಂತಿಮ ವಧು-ವರರ ಪಟ್ಟಿಯನ್ನು ಎ. ರಂದು ಪ್ರಕಟಿಸುವಂತೆ ತಿಳಿಸಿದರು.

Advertisement

ಜಿಲ್ಲಾ ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತ ರವಿಕುಮಾರ್‌, ಇಲಾಖೆ ತಹಶೀಲ್ದಾರ್‌ ಸುಧಾಕರ್‌, ಜಿಲ್ಲೆಯಲ್ಲಿ ಸಾಮೂಹಿಕ ವಿವಾಹ ಏರ್ಪಡಿಸುವ ದೇವಾಲಯಗಳ ಕಾರ್ಯನಿರ್ವಹಣಾಧಿಕಾರಿಗಳು, ಆಡಳಿತಾ ಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next