ಬೆಂಗಳೂರು: ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಜಾರಿಗೆ ಬೇಕಿರುವ ಎಲ್ಲಾ ಆಡಳಿತಾತ್ಮಕ ಸುಧಾರಣೆಗಳು ಹಾಗೂ ಕಾನೂನು ತಿದ್ದುಪಡಿಗಳ ಬಗ್ಗೆ ರಾಜ್ಯ ಸರಕಾರ ತಯಾರಿ ಮಾಡಿಕೊಳ್ಳುತ್ತಿದೆ ಎಂದು ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಹೇಳಿದರು.
ಬೆಂಗಳೂರಿನಲ್ಲಿ ಸೋಮವಾರ ಬೆಂಗಳೂರು ವಿಶ್ವವಿದ್ಯಾಲಯ, “ರಾಷ್ಟ್ರೀಯ ಶಿಕ್ಷಣ ನೀತಿಯ ಮುಖ್ಯಾಂಶಗಳು ಮತ್ತು ಜಾರಿ” ಬಗ್ಗೆ ಹಮ್ಮಿಕೊಂಡಿದ್ದ ಐದು ದಿನಗಳ ಆನ್‌ಲೈನ್ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ನಿರ್ದಿಷ್ಟ ಗುರಿ ಹಾಗೂ ಸ್ಪಷ್ಟ ಕಾರ್ಯಸೂಚಿಯ ಮೂಲಕ ಸರಕಾರ ಎಲ್ಲ ಕಾರ್ಯಕ್ರಮಗಳನ್ನು ಹಾಕಿಕೊಳ್ಳುತ್ತಿದೆ. ಇಡೀ ದೇಶದಲ್ಲೇ ಈ ನೀತಿಯನ್ನು ಮೊತ್ತ ಮೊದಲಿಗೆ ಜಾರಿ ಮಾಡಿದ ರಾಜ್ಯವಾಗಿ ಕರ್ನಾಟಕ ಹೊರಹೊಮ್ಮಲಿದೆ ಎಂದು ಹೇಳಿದರು.
ರಾಷ್ಟ್ರೀಯ ಶಿಕ್ಷಣ ನೀತಿಯ ಬಗ್ಗೆ ರಾಜ್ಯವು ಮೊದಲಿನಿಂದಲೂ ಉತ್ಸುಕತೆಯನ್ನು ಹೊಂದಿದೆ. ನೀತಿಯ ಕರಡು ಪ್ರತಿ ಕೈಸೇರುತ್ತಿದ್ದಂತೆ, ನೀತಿಯ ಜಾರಿಗಾಗಿ ಉನ್ನತ ಮಟ್ಟದ ಕಾರ್ಯಪಡೆಯನ್ನು ರಚನೆ ಮಾಡಲಾಯಿತು. ನೀತಿ ಪ್ರಕಟವಾಗುವುದಕ್ಕೂ ಮೊದಲು, ಪ್ರಕಟವಾದ ನಂತರ ಕಾರ್ಯಪಡೆ ಜತೆ ಹತ್ತು ಹಲವು ಮಹತ್ವದ ಸಭೆಗಳನ್ನು ನಡೆಸಲಾಗಿದೆ ಎಂದರು.
ಇದನ್ನೂ ಓದಿ: ಕೈ ಪಾಳಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆ: ಕಾಂಗ್ರೆಸ್ ಮುಂದಿದೆ ನಾಲ್ಕು ದಾರಿಗಳು
ನೀತಿಯನ್ನು ಹಂತ ಹಂತವಾಗಿ ಜಾರಿ ಮಾಡುವ ಬಗ್ಗೆ ಈಗಾಗಲೇ ಕಾರ್ಯಪಡೆ ಅತ್ಯಮೂಲ್ಯ ಸಲಹೆಗಳನ್ನು ನೀಡಿದೆ. ಇನ್ನು ಅಂತಿಮ ಹಂತದ ಶಿಫಾರಸುಗಳನ್ನಷ್ಟೇ ನೀಡುವುದು ಬಾಕಿ ಇದೆ. ಆ ಶಿಫಾರಸುಗಳು ಬಂದ ಕೂಡಲೇ ಸರಕಾರ ನೀತಿಯ ಜಾರಿಯತ್ತ ಆಡಳಿತಾತ್ಮಕ ಹಾಗೂ ಕಾನೂನಾತ್ಮಕ ಹೆಜ್ಜೆಗಳನ್ನು ಇಡಲಿದೆ. ಇನ್ನೊಂದು ವರ್ಷದ ಅವಧಿಯಲ್ಲಿ ಇಡೀ ನೀತಿಯ ಬಗ್ಗೆ ಎಲ್ಲರಿಗೂ ಮಾಹಿತಿ ನೀಡುವುದು ಹಾಗೂ ಆಂದೋಲನದಂಥ ಕಾರ್ಯಕ್ರಮಗಳನ್ನು ಕೈಗೊಳ್ಳುವುದು ಸರಕಾರದ ಉದ್ದೇಶವಾಗಿದೆ ಎಂದು ಡಿಸಿಎಂ ಹೇಳಿದರು.
ಯುಜಿಸಿ ಅಧ್ಯಕ್ಷ ಪ್ರೊ. ಡಿ.ಪಿ.ಸಿಂಗ್, ಉಪಾಧ್ಯಕ್ಷ ಡಾ. ಭೂಷಣ್ ಪಟವರ್ಧನ್ ಮಾತನಾಡಿದರು. ಬೆಂಗಳೂರು ವಿಶ್ವವಿದ್ಯಾಲಯದ ಉಪ ಕುಲಪತಿ ಪ್ರೊ. ಕೆ.ಆರ್. ವೇಣುಗೋಪಾಲ್ ಪ್ರಾಸ್ತಾವಿಕ ಭಾಷಣ ಮಾಡಿದರು.