ಮಂಗಳೂರು: ಜಿಲ್ಲೆಯ 220 ಗ್ರಾಪಂಗಳ 3,222 ಸ್ಥಾನಗಳಿಗೆ ಎರಡು ಹಂತದಲ್ಲಿ ನಡೆಯುವ ಚುನಾವಣೆಗೆ ಸಿದ್ಧತೆ ನಡೆದಿದ್ದು, ಇಂದಿನಿಂದ ನಾಮಪತ್ರ ಸಲ್ಲಿಕೆ ಆರಂಭಗೊಂಡಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆವಿ ತಿಳಿಸಿದರು.
ತನ್ನ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊದಲ ಹಂತದಲ್ಲಿ 106 ಮತ್ತು ಎರಡನೆ ಹಂತದಲ್ಲಿ 114 ಗ್ರಾಪಂಗಳಿಗೆ ಚುನಾವಣೆ ನಡೆಯಲಿದೆ ಎಂದರು.
ಜಿಲ್ಲೆಯ 7 ತಾಲೂಕುಗಳಲ್ಲಿ 1527 ಮತಗಟ್ಟೆಗಳನ್ನು ತೆಗೆಯಲಾಗುವುದು. ಆ ಪೈಕಿ 397 ಸೂಕ್ಷ್ಮ ಮತ್ತು 198 ಅತಿ ಸೂಕ್ಷ್ಮ ಹಾಗೂ 931 ಸಾಮಾನ್ಯ ಮತಗಟ್ಟೆಗಳಿವೆ. ಮತದಾನಕ್ಕೆ ಇವಿಎಂ ಬಳಕೆ ಇಲ್ಲ. 2626 ಮತಪೆಟ್ಟಿಗೆಗಳನ್ನು ಅಳವಡಿಸಲಾಗುವುದು ಎಂದರು.
ಇದನ್ನೂ ಓದಿ:ಖ್ಯಾತ ರಂಗಕರ್ಮಿ, ಲೇಖಕ ಉದ್ಯಾವರ ಮಾಧವ ಆಚಾರ್ಯ ನಿಧನ
ಜಿಲ್ಲೆಯಲ್ಲಿ 5,12,808 ಪುರುಷರು ಮತ್ತು 5,26,288 ಮಹಿಳೆಯರ ಸಹಿತ ಒಟ್ಟು 10,39,096 ಮತದಾರರು ಮತದಾನ ಮಾಡಲು ಅರ್ಹತೆ ಹೊಂದಿದ್ದಾರೆ. ಅಲ್ಲದೆ 220 ಚುನಾವಣಾ ಅಧಿಕಾರಿ ಮತ್ತು 233 ಸಹಾಯಕ ಚುನಾವಣಾ ಅಧಿಕಾರಿಗಳನ್ನು ನಿಯುಕ್ತಿಗೊಳಿಸಲಾಗುವುದು. ಅಧಿಕಾರಿಗಳಿಗೆ ಸೂಕ್ತ ತರಬೇತಿ ನೀಡಲಾಗುವುದು ಎಂದು ಅವರು ಹೇಳಿದರು.
ಮತಪತ್ರಗಳ ಮುದ್ರಣಕ್ಕೆ ಸಂಬಂಧಿಸಿದಂತೆ ಸಹಾಯಕ ಆಯುಕ್ತರು ಮತ್ತು ತಹಶೀಲ್ದಾರರಿಗೆ ಜವಾಬ್ದಾರಿ ವಹಿಸಲಾಗಿದೆ. ಕೋವಿಡ್ ಹಿನ್ನೆಲೆಯಲ್ಲಿ ಸುರಕ್ಷಿತ ಅಂತರ ಕಾಪಾಡಲು ಕ್ರಮ ಜರುಗಿಸಲಾಗುವುದು. ಅಲ್ಲದೆ ಮತಗಟ್ಟೆಗಳ ಸಂಖ್ಯೆಯನ್ನೂ ಹೆಚ್ಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆವಿ ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ಎಡಿಸಿ ರೂಪಾ ಉಪಸ್ಥಿತರಿದ್ದರು.