Advertisement

ಪ್ಲಾಸ್ಟಿಕ್‌ನಿಂದ ಮಾಲಿನ್ಯ ರಹಿತ ಇಟ್ಟಿಗೆ ತಯಾರಿ

10:28 PM Oct 18, 2019 | mahesh |

ಪುತ್ತೂರು: ಪ್ಲಾಸ್ಟಿಕ್‌ ಅನ್ನು ಮಾಲಿನ್ಯ ರಹಿತವಾಗಿ ಪರಿಷ್ಕರಿಸಿ ಅದನ್ನು ಮರುರಚನೆ ಮಾಡಬೇಕು ಎನ್ನುವ ಯೋಜನೆಯೊಂದಿಗೆ ಪುತ್ತೂರಿನ ವಿವೇಕಾನಂದ ಎಂಜಿನಿಯರಿಂಗ್‌ ಕಾಲೇಜಿನ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ವಿಭಾಗದ ವಿದ್ಯಾರ್ಥಿಗಳು “ಮುಖುರ’ ಎನ್ನುವ ಯಂತ್ರವೊಂದನ್ನು ಆವಿಷ್ಕರಿಸಿದ್ದು, ಮೆಚ್ಚುಗೆ ಗಳಿಸಿದೆ.

Advertisement

ಪ್ಲಾಸ್ಟಿಕ್‌ ತ್ಯಾಜ್ಯವನ್ನು ಸಂಗ್ರಹಿಸಿ ಮರುಬಳಕೆ ಮಾಡುವ ಕುರಿತು ಸಾಕಷ್ಟು ಚಿಂತನ ಮಂಥನ, ಸಂಶೋಧನೆಗಳು ಮುಂದುವರಿದಿವೆ ಮತ್ತು ಅನೇಕ ಯಂತ್ರಗಳ ಆವಿಷ್ಕಾರವಾಗಿವೆ. ಆದರೆ ಯಾವುದೇ ರೀತಿಯ ಮಾಲಿನ್ಯ ಇಲ್ಲದೆ ಪ್ಲಾಸ್ಟಿಕನ್ನು ಪರಿಷ್ಕರಣೆ ಮಾಡಿ ಮರು ಬಳಸುವ ಪ್ರಯತ್ನವನ್ನು ವಿದ್ಯಾರ್ಥಿಗಳು ಮಾಡಿದ್ದಾರೆ.

ಸಾಮರ್ಥ್ಯದ ಇಟ್ಟಿಗೆ
ಮನುಷ್ಯನಿಗೆ ಯಾವುದೇ ರೀತಿಯ ಬಿಸಿ ತಾಗದಂತೆ ಸಂಪೂರ್ಣ ಸುರಕ್ಷಿತವಾಗಿ ಬಳಸುವ ರೀತಿಯಲ್ಲಿ ಇದನ್ನು ವಿನ್ಯಾಸಗೊಳಿಸಲಾಗಿದೆ. ಈ ಯಂತ್ರದಿಂದ ಹೊಗೆ ಅಥವಾ ಮಾಲಿನ್ಯ ಉಂಟಾಗುವುದಿಲ್ಲ. ಇಲ್ಲಿ ತಯಾರಿಸಲಾದ ಇಟ್ಟಿಗೆಯು 120 ಕಿಲೋ ನ್ಯೂಟನ್‌ ಭಾರವನ್ನು ಹೊರುವ ಸಾಮರ್ಥ್ಯ ಹೊಂದಿದೆ. ಸಿಮೆಂಟಿನಿಂದ ತಯಾ ರಿಸಿದ ಇಂಟರ್‌ಲಾಕ್‌ಗಳ ಧಾರಣ ಸಾಮರ್ಥ್ಯ 30 ಕಿಲೋ ನ್ಯೂಟನ್‌ ಮಾತ್ರ ಇರುತ್ತದೆ ಎನ್ನುತ್ತಾರೆ ಸಂಶೋಧನೆಯ ಮಾರ್ಗದರ್ಶಕ ಮೆಕ್ಯಾನಿಕಲ್‌ ವಿಭಾಗದ ಸಹಾಯಕ ಪ್ರಾಧ್ಯಾಪಕ ಪ್ರೊ| ಸುದರ್ಶನ್‌ ಎಂ.ಎಲ್‌.

ಪ್ಲಾಸ್ಟಿಕ್‌ ಬಾಟಲಿ, ಚಾಕಲೆಟ್‌ ರ್ಯಾಪರ್‌ ಮುಂತಾದವುಗಳು ಥರ್ಮೋ ಸೆಟ್ಟಿಂಗ್‌ ಪ್ಲಾಸ್ಟಿಕ್‌ ಗಳಾಗಿದ್ದು, ಬಿಸಿ ಮಾಡಿದಂತೆ ಗಟ್ಟಿ ಯಾಗುತ್ತಾ ಹೋಗು ತ್ತವೆ. ಸಣ್ಣ ಮಾದರಿಗಳ ನಿರ್ಮಾಣ ಕಷ್ಟಸಾಧ್ಯ. ಆದರೆ ದೊಡ್ಡ ಇಟ್ಟಿಗೆಗಳನ್ನು ನಿರ್ಮಿಸಲು ಸಾಧ್ಯ. ಸದ್ಯ ಈ ಯಂತ್ರವನ್ನು ಕೈಯಿಂದಲೇ ನಿರ್ವಹಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಸಂಪೂರ್ಣ ಸ್ವಯಂ ಚಾಲಿತವಾಗಿ ಕಾರ್ಯ ನಿರ್ವಹಿಸುವಂತೆ ವಿನ್ಯಾಸವನ್ನು ರೂಪು ಗೊಳಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಮೆಚ್ಚುಗೆ, ವೆಚ್ಚಕ್ಕೆ ನೆರವು
ಈ ಯಂತ್ರಕ್ಕೆ 1.43 ಲಕ್ಷ ರೂ. ವೆಚ್ಚ ತಗುಲಿದೆ. ರೋಟರಿ ಕ್ಲಬ್‌ ಪುತ್ತೂರು ಮತ್ತು ಪುತ್ತೂರು ಡಾಕ್ಟರ್ಸ್‌ ಅಸೋಸಿಯೇಶನ್‌ ಹಣಕಾಸಿನ ಸಹಾಯವನ್ನು ಮಾಡಿ ವಿದ್ಯಾರ್ಥಿಗಳ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪುತ್ತೂರು ನಗರಸಭೆಯ ಪೌರಾಯುಕ್ತೆ ರೂಪಾ ಟಿ. ಶೆಟ್ಟಿ ಮತ್ತು ಅಧಿಕಾರಿ ವರ್ಗದವರು ಈ ಯಂತ್ರವನ್ನು ವೀಕ್ಷಿಸಿ ಕಾರ್ಯವಿಧಾನದ ಕುರಿತು ಪರಿಶೀಲನೆ ನಡೆಸಿ ಯಂತ್ರವನ್ನು ಅಭಿವೃದ್ಧಿಪಡಿಸುವ ಕುರಿತು ಆಡಳಿತ ಮಂಡಳಿಯೊಡನೆ ಮಾತುಕತೆ ನಡೆಸಿದ್ದಾರೆ. ಪ್ರಾಧ್ಯಾಪಕ ಪ್ರೊ| ಸುದರ್ಶನ್‌ ಎಂ.ಎಲ್‌. ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಾದ ರಾಕೇಶ್‌ ಹೆಗ್ಡೆ, ಎ.ಬಿ. ಮೊನೀಶ್‌, ಆಕರ್ಷ ವಿ.ಎಂ. ಮತ್ತು ಗಣೇಶ ಯಂತ್ರವನ್ನು ಅಭಿವೃದ್ಧಿಪಡಿಸಿದ್ದಾರೆ.

Advertisement

ಪ್ಲಾಸ್ಟಿಕ್‌ ಚೀಲ ಬಳಸಿ ಇಟ್ಟಿಗೆ ನಿರ್ಮಾಣ
ವಿದ್ಯಾರ್ಥಿಗಳ ಸಂಶೋಧನೆಯಲ್ಲಿ ಪ್ಲಾಸ್ಟಿಕ್‌ ಚೀಲಗಳನ್ನು ಬಳಸಿ ಸಣ್ಣ ಇಟ್ಟಿಗೆಗಳನ್ನಾಗಿ ಪರಿವರ್ತಿಸಲಾಗುತ್ತದೆ. ಈ ಯಂತ್ರವು 5 ಅಶ್ವಶಕ್ತಿಯ ಮೋಟಾರಿನ ಮೂಲಕ ಕಾರ್ಯನಿರ್ವಹಿಸುತ್ತದೆ. ಬಿಸಿ ಮಾಡುವುದಕ್ಕಾಗಿ 2 ಹೀಟರ್‌ಗಳನ್ನು ಬಳಸಲಾಗುತ್ತಿದೆ. ಯಂತ್ರವನ್ನು ಚಾಲೂಗೊಳಿಸಿ 180 ಡಿಗ್ರಿ ಉಷ್ಣಾಂಶವನ್ನು ನಿಗದಿ ಗೊಳಿಸಬೇಕು. ಅನಂತರ ಇದಕ್ಕೆ ಪ್ಲಾಸ್ಟಿಕ್‌ ಚೀಲಗಳನ್ನು ಹಾಕಬೇಕು. ಪ್ಲಾಸ್ಟಿಕ್‌ ಕರಗಿ ನೀರಾಗಿ ಅದು ನಿಗದಿ ಪಡಿಸಿದ ಅಚ್ಚಿಗೆ ತುಂಬುತ್ತದೆ. ಅಚ್ಚು ತುಂಬಿದಾಕ್ಷಣ ಅದನ್ನು ನೀರಿಗೆ ಹಾಕಿ ತಣಿಸಬೇಕು. ಈ ಯಂತ್ರದಲ್ಲಿ ಈಗ 90 ಗ್ರಾಂ. ತೂಕದ ಇಟ್ಟಿಗೆಗಳನ್ನು ತಯಾರಿಸಲಾಗುತ್ತದೆ. ಗಂಟೆಗೆ ಸುಮಾರು 2 ಕೆ.ಜಿ.ಯಂತೆ ದಿನಕ್ಕೆ 25 ಕೆಜಿ ಪ್ಲಾಸ್ಟಿಕ್‌ ತ್ಯಾಜ್ಯವನ್ನು ಇದರಲ್ಲಿ ಬಳಸಬಹುದು. ಸದ್ಯ ಇಡೀ ಕವರನ್ನು ಇದಕ್ಕೆ ತುಂಬಿಸಲಾಗುತ್ತಿದ್ದು, ಪುಡಿಮಾಡಿ ಹಾಕಿದರೆ ಹೆಚ್ಚಿನ ಪ್ಲಾಸ್ಟಿಕ್‌ ಬಳಸಬಹುದು.

ಕಾರ್ಯ ನಿರ್ವಹಿಸುವಾಗ ಬಿಸಿ ತಾಗದಂತೆ ವಿನ್ಯಾಸ ಭರವಸೆ ದೊರೆತಿದೆ  ಹೊಸ ಆವಿಷ್ಕಾರದ ಯಂತ್ರದ ಕುರಿತು ತಂತ್ರಜ್ಞರು ಮತ್ತು ಪರಿಸರಾಸಕ್ತರು ಮಾಹಿತಿ ಪಡೆದುಕೊಂಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಯಂತ್ರವನ್ನು ಇನ್ನಷ್ಟು ಅಭಿವೃದ್ಧಿಪಡಿಸಲು ಸಹಕಾರ ನೀಡುವ ಭರವಸೆಯನ್ನು ಸ್ಥಳೀಯಾಡಳಿತ ನಗರಸಭೆಯ ಅಧಿಕಾರಿಗಳು ನೀಡಿದ್ದಾರೆ.
– ಡಾ| ಎಂ.ಎಸ್‌. ಗೋವಿಂದೇ ಗೌಡ , ಪ್ರಾಂಶುಪಾಲ

Advertisement

Udayavani is now on Telegram. Click here to join our channel and stay updated with the latest news.

Next