ಹಾನಗಲ್ಲ : ಮುಂಗಾರು ಮಳೆಯ ಸುಳಿವೇ ಇಲ್ಲದೆ ರೈತ ಸಮುದಾಯ ಮುಗಿಲತ್ತ ಮುಖ ಮಾಡಿ ಮಳೆರಾಯನ ಆಗಮನಕ್ಕೆ ಕಾಯುತ್ತಿದ್ದರೆ, ಇತ್ತ ಮಳೆಗಾಲದಲ್ಲಾಗಬಹುದಾದ ಅನಾಹುತಗಳನ್ನು ತಡೆಯಲು ಸ್ಥಳೀಯ ಆಡಳಿತ ಮುಂಜಾಗ್ರತಾ ಕ್ರಮಕ್ಕೆ ಮುಂದಾಗಿದೆ.
ಮುಂಗಾರು ಪ್ರವೇಶಿಸುತ್ತಿದ್ದಂತೆ ಎದುರಾಗುವ ಮೊದಲ ಸಮಸ್ಯೆ ಎಂದರೆ ಚರಂಡಿಗಳೆಲ್ಲ ತುಂಬಿ ರಸ್ತೆ ಮೇಲೆ ನೀರು ಹರಿದು ಸಂಚಾರ ಅಸ್ತವ್ಯಸ್ತಗೊಳ್ಳುವುದು, ಅಂಗಡಿ, ಮನೆಗಳಿಗೆ ನೀರು ಹೊಕ್ಕು ಸಾರ್ವಜನಿಕರಿಗೆ ಕಿರಿಕಿರಿ ಮಾಡುವುದು ಸಾಮಾನ್ಯ. ಆದರೆ, ಈ ಬಾರಿ ಹಾನಗಲ್ಲ ಪಟ್ಟಣದಲ್ಲಿ ವಿಶೇಷ ಕಾರ್ಯಕ್ರಮದ ಮೂಲಕ ಗಟಾರಿನಲ್ಲಿ ನೀರು ಸರಾಗವಾಗಿ ಹರಿದು ರಸ್ತೆ ಮೇಲೆ ಹರಿಯದಂತೆ ಮಾಡಲು ಪುರಸಭೆ ಮುಂದಾಗಿದೆ. ಗಟಾರು ಸ್ವಚ್ಛತೆ ಜತೆಗೆ ಸಣ್ಣ ಗಟಾರುಗಳು ದೊಡ್ಡ ಗಟಾರಿಗೆ ಸಂಪರ್ಕ ಹೊಂದುವಲ್ಲಿ ಗ್ರಿಲ್ ಅಳವಡಿಸಿ, ಕಸಕಡ್ಡಿ ದೊಡ್ಡ ಗಟಾರಿನೊಳಗೆ ಹೋಗದಂತೆ ತಡೆಯುವ ಕೆಲಸ ಮಾಡುತ್ತಿದ್ದಾರೆ. ಯಾವುದೇ ತ್ಯಾಜ್ಯ ಹರಿದು ಬಂದರೂ ಅದು ಅಲ್ಲೆ ಸ್ಥಗಿತಗೊಳ್ಳುವಂತೆ ಮಾಡಲಾಗುತ್ತಿದೆ. ಗ್ರಿಲ್ ಬಳಿ ಸಂಗ್ರಹಗೊಳ್ಳುವ ಕಸ ತೆಗೆದುಬಿಟ್ಟರೆ ನೀರು ಸರಾಗವಾಗಿ ಹರಿದು ಹೋಗಲಿದೆ.
ಮುಂಗಾರಿನ ಮಳೆಗೆ ಗುಡುಗು-ಸಿಡಿಲು-ಬಿರುಗಾಳಿಗೆ ಮರ-ಗಿಡ ಹಾಗೂ ವಿದ್ಯುತ್ ಕಂಬಗಳು ಬಿದ್ದು ಹಾನಿಯಾಗುವ ಸಂಭವ ಹೆಚ್ಚಿರುತ್ತದೆ. ಈ ನಿಟ್ಟಿನಲ್ಲಿ ಹೆಸ್ಕಾಂ ಇಲಾಖೆ ಈಗಾಗಲೇ ಸಿಥಿಲಗೊಂಡಿರುವ ಮರ-ಗಿಡಗಳ ತೆರವುಗೊಳಿಸಲು ಮುಂದಾಗಿದೆ ಹಾಗೂ ಅಡ್ಡವಾಗಿ ಬೀಳುವ ಹಂತದಲ್ಲಿರುವ ವಿದ್ಯುತ್ ಕಂಬಗಳನ್ನು ದುರಸ್ತಿಗೊಳಿಸುವ ಕಾರ್ಯ ಕೈಗೆತ್ತಿಕೊಂಡಿದೆ.
ತಾಲೂಕು ಆಡಳಿತ ನೆರೆ ಬರುವ ಗ್ರಾಮಗಳಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಗಂಜಿ ಕೇಂದ್ರ ಸ್ಥಾಪಿಸುವ ಎಲ್ಲ ವ್ಯವಸ್ಥೆ ಮಾಡಿಕೊಂಡಿದೆ. ಸುಮಾರು 15 ಗ್ರಾಮಗಳ ಪಟ್ಟಿ ಮಾಡಿದ್ದು, ಗಂಜಿ ಕೇಂದ್ರಗಳನ್ನು ಎಲ್ಲೆಲ್ಲಿ ತೆರೆಯಬೇಕೆಂದು ಯೋಜನೆ ಹಾಕಿಕೊಂಡಿದೆ.
ಇನ್ನು ಕೃಷಿ ಇಲಾಖೆ ಮುಂಗಾರು ಹಂಗಾಮಿಗೆ ಈಗಾಗಲೇ ಬಿತ್ತನೆ ಬೀಜ, ರಸಗೊಬ್ಬರ ಸೇರಿದಂತೆ ಕೃಷಿ ಚಟುವಟಿಕೆಗಳಿಗೆ ಬೇಕಾಗುವ ಸಾಮಗ್ರಿಗಳ ದಾಸ್ತಾನು ಮಾಡಿಕೊಂಡಿದೆ. ಮಳೆ ಬಂದರೆ ಕೂಡಲೇ ಬೀಜ ವಿತರಣೆ ಮುಂದಾಗುವ ಎಲ್ಲ ವ್ಯವಸ್ಥೆ ಮಾಡಿಕೊಂಡಿದೆ.
Advertisement
ಗ್ರಾಮೀಣ ಭಾಗದಲ್ಲೂ ಇಂತಹ ಸಮಸ್ಯೆ ತಡೆಗಟ್ಟಲು ತಾಲೂಕು ಪಂಚಾಯಿತಿ ಕೂಡ ಹಿಂದೆ ಬಿದ್ದಿಲ್ಲ. ತಾಪಂ ಇಒಗಳೆಲ್ಲ ಪಿಡಿಒಗಳ ಜತೆಗೆ ಸಭೆ ನಡೆಸಿ, ಮಳೆ ಬರುವುದಕ್ಕೂ ಮುನ್ನ ಎಲ್ಲ ಗ್ರಾಮಗಳಲ್ಲಿನ ಚರಂಡಿ ಸ್ವಚ್ಛಗೊಳಿಸಿ ರಸ್ತೆಗೆ ನೀರು ಹರಿಯದಂತೆ ತಡೆಯಲು ಕ್ರಮ ಕೈಗೊಳ್ಳಲು ಸೂಚಿಸಿದ್ದು, ಈಗಾಗಲೇ ಸ್ವಚ್ಛತಾ ಕಾರ್ಯ ಭರದಿಂದ ಸಾಗಿದೆ.
Related Articles
Advertisement
•ರವಿ ಲಕ್ಷ್ಮೇಶ್ವರ