Advertisement
ಕುರ್ನಾಡು ಗ್ರಾಮದ ಮುಡಿಪುವಿನ ಆರೋಗ್ಯ ಕೇಂದ್ರದಲ್ಲಿ ಮುಡಿಪು ಹೋಬಳಿಯ ಪ್ರಗತಿಯ ಬಗ್ಗೆ ಮಾತನಾಡಿದ ಅವರು, ಈ ಪ್ರದೇಶದಲ್ಲಿರುವ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ಶಾಶ್ವತ ಕುಡಿಯುವ ನೀರಿನ ಯೋಜನೆ ಪ್ರಗತಿಯಲ್ಲಿದ್ದು, ಶೀಘ್ರವೇ ಸಮಸ್ಯೆ ಬಗೆಹರಿಯಲಿದೆ. ತೊಕ್ಕೊಟ್ಟಿನಿಂದ ದೇರಳಕಟ್ಟೆ ಬಳಿಕ ಮುಡಿಪು ಸಂಪರ್ಕಿಸುವ ರಸ್ತೆ ದ್ವಿಪಥಗೊಳಿಸುವ ಕಾರ್ಯ ಭರದಿಂದ ಸಾಗುತ್ತಿದ್ದು, ಮುಡಿಪುವಿನಲ್ಲಿ ಇನ್ಫೋಸಿಸ್ ಸಂಸ್ಥೆಯ ಸಹಯೋಗದೊಂದಿಗೆ ಕಾಮಗಾರಿ ಪ್ರಗತಿಯಲ್ಲಿದೆ. ಒಟ್ಟಾಗಿ ಮುಡಿಪು ಪ್ರದೇಶವನ್ನು ಮಾದರಿ ನಗರವಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಯೋಜನೆಗಳು ರೂಪಿಸಲಾಗುತ್ತಿದೆ ಎಂದರು.
ಇರಾದ ಕೈಗಾರಿಕೆ ಪ್ರದೇಶಗಳಿಗೆ ಈ ಹಿಂದೆ ಅನೇಕ ಕಂಪೆನಿಗಳು ಕೈಗಾರಿಕೆ ಸ್ಥಾಪನೆಗೆ ಆಗಮಿಸಿದ್ದರೂ ಮೂಲಸೌಕರ್ಯಗಳಾದ ರಸ್ತೆ ಸಹಿತ ಇಲ್ಲಿನ ತಾಪಮಾನದ ಹವಾಗುಣದ ಕಾರಣದಿಂದ ಕೆಲವು ಕೈಗಾರಿಕೆ ಸಂಸ್ಥೆಗಳು ಕೈಗಾರಿಕೆ ಸ್ಥಾಪನೆಗೆ ಹಿಂದೇಟು ಹಾಕಿತ್ತಿದ್ದವು. ಈಗ ಸುಸಜ್ಜಿತ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಕೆಲವೊಂದು ಕಾರಣಗಳಿಂದ ವಿಳಂಬವಾಗಿ ಸ್ಥಳೀಯರಿಗೆ ಸಮಸ್ಯೆಯಾಗಿದ್ದರೂ ಮುಂದಿನ ದಿನಗಳಲ್ಲಿ ಕೈಗಾರಿಕೆ ಸಹಿತ ಸ್ಥಳೀಯರಿಗೆ ಈ ರಸ್ತೆಯಿಂದ ಸಹಕಾರಿಯಾಗಲಿದೆ ಎಂದ ಅವರು ಕೈಗಾರಿಕೋದ್ಯಮಿಗಳಿಂದ ಇರಾ ಕೈಗಾರಿಕೆ ಪ್ರದೇಶದಲ್ಲಿ ಜಾಗಕ್ಕೆ ಬೇಡಿಕೆ ಸಲ್ಲಿಸಿದ್ದರೂ ಪ್ರಸ್ತುತ ದಿನಗಳಲ್ಲಿ ಇರುವ ಕೈಗಾರಿಕೆಗಳೇ ಬಂದ್ ಆಗಿರುವುದರಿಂದ ಬಂಡವಾಳ ಹಾಕಲು ಜನ ಹಿಂದೇಟು ಹಾಕುತ್ತಿದ್ದಾರೆ, ಇದರಿಂದಾಗಿ ಇರಾ ಕೈಗಾರಿಕೆ ಪ್ರದೇಶಕ್ಕೂ ಅಡ್ಡಿಯಾಗಿದೆ ದೇಶದಲ್ಲೇ ಜಿಡಿಪಿ ತೀವ್ರ ಕುಸಿತ ಕಂಡಿರುವುದರಿಂದ ಇರಾದಲ್ಲಿ ಕೈಗಾರಿಕೆಗಳು ಆರಂಭಗೊಳ್ಳಲು ಇನ್ನಷ್ಟು ಸಮಯ ಬೇಕಾಗಬಹುದು ಎಂದರು. ಕೈಗಾರಿಕೆ ಪ್ರದೇಶದ ಪಕ್ಕದಲ್ಲಿರುವ 9 ಮನೆಗಳು ಕೈಗಾರಿಕೆ ವಲಯಕ್ಕೆ ಸೇರ್ಪಡೆಯಾಗಿದ್ದು ಇದನ್ನು ಡಿ-ನೋಟಿಫಿಕೇಶನ್ ಮಾಡಲು ಸರಕಾರದ ಮಟ್ಟದಲ್ಲಿ ಮಾತುಕತೆ ನಡೆಯುತ್ತಿದೆ. ಕೈಗಾರಿಕೆ ವಲಯದ ಸುಸಜ್ಜಿತ ರಸ್ತೆಯಲ್ಲಿ ಯುವಕರು ದ್ವಿಚಕ್ರ ವಾಹನ ಬಳಸಿ ಮೋಜು, ಮಸ್ತಿ ಮಾಡುತ್ತಿದ್ದಾರೆ ಎನ್ನುವ ದೂರುಗಳು ಬಂದಿವೆ. ಈ ಹಿನ್ನೆಲೆಯಲ್ಲಿ ರಸ್ತೆಯನ್ನು ಗೇಟ್ ಹಾಕಿ ಮುಚ್ಚುವ ಹಾಗೂ ಕಾವಲುಗಾರರನ್ನು ನೇಮಿಸಲು ಯೋಚಿಸಲಾಗಿದೆ. ಮುಡಿಪುವಿನಲ್ಲಿರುವ ಐಬಿ ತಾಲೂಕು ಮಟ್ಟದ್ದಾಗಿ ರೂಪಿಸಿ ಪ್ರವಾಸಿ ತಾಣವನ್ನಾಗಿ ಯೋಚಿಸಲಾಗಿದ್ದು ಈ ಬಗ್ಗೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದರು.
Related Articles
Advertisement
5 ಎಕ್ರೆ ಜಾಗ ಗುರುತಿಸಲಾಗಿದೆಉಳ್ಳಾಲ ತಾಲೂಕು ಆಗಿ ಘೋಷಿಸಲಾಗಿದ್ದು ಕಂದಾಯ, ಆರ್.ಟಿ.ಓ, ತಾ.ಪಂ. ಮತ್ತು ತಾಲೂಕು ಸಹಿತ ಹೆಚ್ಚಿನ ಕಚೇರಿಗಳು ಒಂದೇ ಕಡೆ ಸ್ಥಾಪಿಸಲು ಅಗತ್ಯವಿರುವ ಐದು ಎಕ್ರೆ ಜಾಗ ಗುರುತಿಸಲಾಗಿದೆ ಎಂದ ಅವರು ಮುಂದಿನ ದಿನಗಳಲ್ಲಿ ತಾಲೂಕು ಮಟ್ಟದ ಎಲ್ಲ ಸೌಲಭ್ಯಗಳು ಇಲ್ಲಿ ದೊರೆಯಲಿದ್ದು, ತಾಲೂಕು ಆಸ್ಪತ್ರೆ ನಿರ್ಮಾಣಕ್ಕೂ ಸ್ಥಳ ಪರಿಶೀಲನೆ ನಡೆಯುತ್ತಿವೆ ಎಂದು ಶಾಸಕ ಯು.ಟಿ. ಖಾದರ್ ಹೇಳಿದರು.