Advertisement

ಮಾನ್ಸೂನ್‌ ಇರಲಿ ತಯಾರಿ

10:26 PM Jun 27, 2019 | mahesh |

ಮಳೆಗಾಲದಲ್ಲಿ ಚಾರಣಕ್ಕೆ ಹೊರಡುವುದೆಂದರೆ ಯಾರಿಗೆ ತಾನೇ ಇಷ್ಟವಿಲ್ಲ. ಇನ್ನು ಇಷ್ಟವಾದ ಜಾಗಕ್ಕೆ ಇಷ್ಟವಾದ, ಟ್ರೆಂಡಿ ಬೈಕ್‌ನೊಂದಿಗೆ ಹೊರಡುವುದೆಂದರೆ ಪುಣ್ಯ. ಇಂದು ಮಾರುಕಟ್ಟೆಯಲ್ಲಿ ಚಾರಣಕ್ಕೆಂದೆ ಕೆಲವೊಂದು ಬೈಕ್‌ಗಳನ್ನು ನೋಡಬಹುದು. ಚಾರಣಕ್ಕೆ ಹೊರಡುವ ಮುನ್ನ ಬೈಕ್‌ನ ಮುನ್ನೆಚ್ಚರಿಕೆ ಕ್ರಮಗಳು, ರೈಡರ್‌ ಗಮನ ಹರಿಸಬೇಕಾದ ಅಂಶಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗಿದೆ.

Advertisement

ಮಳೆ ಎಂದರೆ ಯಾರಿಗೆ ತಾನೇ ಇಷ್ಟ ಆಗಲ್ಲ. ಬಾಲ್ಯದ ನೆನಪುಗಳನ್ನು ಮತ್ತೆ ಕೆದಕುವ ಮಳೆಗಾಲ ಬಂತೆಂದರೆ ಅದೇನೋ ಸಂಭ್ರಮ. ಕಚೇರಿಗೆ ಹೊರಡು ಸಮಯದಲ್ಲಿ ಮಳೆ ಬಂದಾಗ ಮುಖ ಸಪ್ಪೆ ಮಾಡಿಕೊಂಡು ಒದ್ದೆಯಾಗಿ ಹೋದರೂ ಸಂಜೆಯಾಗುತ್ತಿದ್ದಂತೆ ಮನೆ ಮಂದಿ ಜತೆಯಾಗಿ ತಿಂಡಿಗಳನ್ನು ತಿನ್ನುತ್ತಾ ಹರಟುತ್ತೇವೆ.

ಅದರೊಂದಿಗೆ ಚಾರಣದ ಹವ್ಯಾಸ ಬೆಳೆಸಿಕೊಂಡವ ರಂತೂ ಮಳೆಗಾಲ ಬಂತೆಂದರೆ ಬ್ಯಾಗ್‌ ರೆಡಿ ಮಾಡಿಕೊಂಡು ತಿಂಗಳಿಗೆ ಎರಡಾದರೂ ಚಾರಣ ಪ್ಲಾನ್‌ ಮಾಡುತ್ತಾರೆ. ಇತರ ಎಲ್ಲ ಕಾಲಗಳಿಂತಲೂ ಮಳೆಗಾಲದಲ್ಲಿ ಚಾರಣ ಹೋಗುವುದೇ ಒಂದು ಖುಷಿ. ಅದರಲ್ಲೂ ಮಳೆಗಾದಲ್ಲಿ ಬೈಕ್‌ನಲ್ಲಿ ಪ್ರವಾಸ ಹೋಗುವ ಹವ್ಯಾಸ ಬೆಳೆಸಿಕೊಳ್ಳುವವರು ತುಂಬಾ ಜನ ಇರುತ್ತಾರೆ. ಬೇಸಗೆ ಕಾಲದಲ್ಲಿ ಪ್ರಕೃತಿ, ಝರಿ, ಇರುವ ಪ್ರದೇಶಗಳನ್ನು ಹುಡುಕಿಕೊಂಡು ಹೋಗಬೇಕಾಗುತ್ತದೆ. ಆದರೆ ಮಳೆಗಾಲದಲ್ಲಿ ಯಾವ ಸುಂದರ ಜಾಗವನ್ನು ಆಯ್ಕೆ ಮಾಡಿ ಕೊಂಡರೂ ಉಲ್ಲಾಸವೇ. ಮಳೆ ಹನಿ ಎಲ್ಲ ಬೆಟ್ಟ, ಗುಡ್ಡ ಗಳಿಗೂ ಹಸುರು ಮೇಕಪ್‌ ಮಾಡಿರುತ್ತದೆ. ಹಾಗಾಗಿ ಬೈಕ್‌ ಹಿಡಿದು ಹೋಗು ಖುಷಿಯೇ ಬೇರೆ. ಮಳೆಗಾಲದ ರೈಡ್‌ ನಲ್ಲಿ ಎಚ್ಚರ ಅಗತ್ಯ. ಮೊದಲ ಮಳೆಗೆ ರಸ್ತೆಗಳ ತೈಲದ ಅಂಶಕ್ಕೆ ಸ್ಕಿಡ್‌ ಅಗುವ ಸಾಧ್ಯತೆ ಇರುತ್ತದೆ. ಹಾಗಾಗಿ ರೈಡ್‌ ಮುನ್ನ ಎಚ್ಚರಿಕೆ ವಹಿಸಬೇಕಾಗುತ್ತದೆ.

ಮಳೆಗಾಲದ ರೈಡ್‌ಗೆ ಸ್ಪೆಷಲ್‌ ಸಿದ್ಧತೆ
ಬೈಕ್‌ ರೈಡ್‌ ಬಗ್ಗೆ ಕ್ರೇಜ್‌ ಇರುವ ಯುವಕರು ಮಳೆಗಾಲಕ್ಕೆ ರೈಡ್‌ ಹೋಗಲು ಹೆಚ್ಚಿನ ಆಸಕ್ತಿ ತೋರುತ್ತಾರೆ. ಆದರೆ ಬೈಕ್‌ ರೈಡ್‌ ಎಂದಾಗ ತುಂಬಾ ದೂರ ಪ್ಲಾನ್‌ ಮಾಡಿಕೊಳ್ಳುವುದು ಉತ್ತಮವಲ್ಲ. ಮಳೆಗಾಲವಾದ್ದರಿಂದ ಸ್ವಲ್ಪ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಿಕೊಳ್ಳಬೇಕಾಗುತ್ತದೆ. ಮಳೆಗಾಲದ ಬೈಕ್‌ ರೈಡಿಂಗ್‌ ಹೆಚ್ಚು ಅಪಾಯಕಾರಿ. ಅದಕ್ಕಾಗಿ ಹೆಚ್ಚಿನ ಪರಿಣತಿ ಅಗತ್ಯ. ಇತರ ಸಮಯದಂತೆ ಮಳೆಗಾಲದಲ್ಲಿ ಬೈಕ್‌ ಓಡಿಸುವುದು ಸಾಧ್ಯವಿಲ್ಲ. ಏಕಾಗ್ರತೆ, ವೇಗದ ಮಿತಿ ಬಹಳ ಮುಖ್ಯ. ಮಳೆಗಾಲದ ಬೈಕ್‌ ರೈಡಿಂಗ್‌ಗಾಗಿ ವಿಶೇಷ ಸಿದ್ಧತೆ ಬೇಕಾಗುತ್ತದೆ. ವಾಟರ್‌ ಪ್ರೂಫ್‌ ಜಾಕೆಟ್‌, ರೈನ್‌ ಕೋಟ್‌, ಬೂಟ್‌ಗಳು ಹೀಗೆ ಎಲ್ಲ ರೀತಿಯಲ್ಲೂ ಸನ್ನದ್ಧರಾಗಿ ಹೋಗಬೇಕಾಗುತ್ತದೆ. ಬೈಕ್‌ ಚಕ್ರಗಳು, ಎಂಜಿನ್‌ಗಳನ್ನು ವಿಶೇಷವಾಗಿ ಪರೀಕ್ಷಿಸಿಕೊಳ್ಳಬೇಕಾಗುತ್ತದೆ. ಅದೆಲ್ಲವೂ ಸರಿ ಇದೆ ಎಂದು ತಿಳಿದ ಬಳಿಕವಷ್ಟೇ ಮುಂದಿನ ಪ್ರಯಾಣ ಆರಂಭಿಸಬೇಕು ಎಂದು ಹೇಳುತ್ತಾರೆ ಬೈಕ್‌
ರೈಡರ್‌ ಕಿಶನ್‌.

ರೈಡ್‌ಗೆ ಫೇಮಸ್‌ ಬೈಕ್‌ಗಳು
ಮಳೆಗಾಲದ ರೈಡ್‌ಗಾಗಿ ಎಲ್ಲ ರೀತಿಯ ಬೈಕ್‌ಗಳಲ್ಲಿ ಲಾಂಗ್‌ ಪ್ರಯಾಣ ತುಸು ಕಷ್ಟ . ಅದಕ್ಕಾಗಿ ಆಯ್ದ ಕೆಲವು ಬೈಕ್‌ಗಳಲ್ಲಿ ಹೋಗುವುದು ಉತ್ತಮ. ಹೆಚ್ಚಿನ ಸಿಸಿ ಇರುವ ಉತ್ತಮ ಗುಣಮಟ್ಟದ ಬೈಕ್‌ಗಳನ್ನು ಆಯ್ಕೆ ಮಾಡಿಕೊಂಡರೆ ಒಳ್ಳೆಯದು. ಮಹೀಂದ್ರಾ ಕಂಪೆನಿಯ ಜಾವಾ, ಜಾವಾ 42 ಮತ್ತು ಜಾವಾ ಪೆರಿಕ್‌ ಸದ್ಯ ಇರುವ ಟ್ರೆಂಡ್‌. ಜಾವಾ ಮತ್ತು ಜಾವಾ 42 ಬೈಕ್‌ಗಳು ಬಿಎಸ್‌ 6 ಮಾನದಂಡ ಹೊಂದಿರುವ 293 ಸಿಸಿ ಸಿಂಗಲ್‌ ಸಿಲಿಂಡರ್‌ ಎಂಜಿನ್‌ ಹೊಂದಿದೆ. ಜಾವಾ ಪೆರಿಕ್‌ 334 ಸಿಸಿ ಸಿಂಗಲ್‌ ಸಿಲಿಂಡರ್‌ ಎಂಜಿನ್‌ ಹೊಂದಿದೆ. ರೋಯಲ್‌ ಎನ್‌ಫೀಲ್ಡ್‌ ಬುಲೆಟ್‌, ಬಜಾಜ್‌ ಅವೆಂಜರ್‌, ಸುಜುಕಿ ಇಂಟ್ರೋಡರ್‌ ಮೊದಲಾದ ಗಾಡಿಗಳು ಹೆಚ್ಚು ಸೇಫ್‌. ಆದರೆ ಈ ದ್ವಿಚಕ್ರ ವಾಹನಗಳ ನಿರ್ವಹಣೆ ಬಹಳ ಮುಖ್ಯ. ಪ್ರವಾಸ ಆರಂಭಕ್ಕೂ ಮುನ್ನ ಸರ್ವೀಸ್‌ ಮಾಡಿಸಿಕೊಳ್ಳುವುದು, ತಪಾಸಣೆ ಮಾಡುವುದು ಕಡ್ಡಾಯ.

Advertisement

ಮಾನ್ಸೂನ್‌ ರೈಡ್‌ಗೆಂದು ಬೈಕ್‌ ಖರೀದಿಸುವವರ ಸಂಖ್ಯೆ ಕಡಿಮೆ. ಆದರೆ ಬೈಕ್‌ ರೈಡ್‌ ಕ್ರೇಜ್‌ ಇರುವವರು ಹೆಚ್ಚು ಸಿಸಿ ಇರುವ ಬೈಕ್‌ಗಳ ಬಗ್ಗೆ ಒಲವು ತೋರುತ್ತಾರೆ. ಅದರ ರೈಡ್‌ ಕೂಡ ಸೇಫ್‌ ಇರುತ್ತದೆ ಎಂದು ಹೇಳುತ್ತಾರೆ ಬೈಕ್‌ ಶೋರೂಂನ ಸೇಲ್ಸ್‌ ಮ್ಯಾನ್‌ ಗಣೇಶ್‌.

ರೈಡ್‌ಗೂ ಮುನ್ನ
· ವಾಟರ್‌ ಫ್ರೂಫ್ ಜಾಕೆಟ್‌, ಕೈಗವಸು ಹಾಗೂ ರೇನಿ ಶೂ ಧರಿಸಿಕೊಳ್ಳಿ.
· ರೈಡ್‌ಗೂ ಮುನ್ನ ಮೊಣಕಾಲು ಮತ್ತು ಮುಂಗಾಲುಗಳಿಗೆ ರಕ್ಷಣಾತ್ಮಕ ಪ್ಯಾಡ್‌ ಧರಿಸಿದರೆ ಉತ್ತಮ.
· ಗುಣಮಟ್ಟದ ಹೆಲ್ಮೆಟ್‌ ಧರಿಸಲು ಮರೆಯದಿರಿ.
· ಹೆಲ್ಮೆಟ್‌ ವೈಸರ್‌ ಮೇಲೆ ವ್ಯಾಕ್ಸ್‌ ಹಚ್ಚಿದಲ್ಲಿ ಮಳೆ ನೀರು ಸುಲಭವಾಗಿ ಇಳಿದು ಹೋಗಿ ದಾರಿ ಸ್ಪಷ್ಟವಾಗಿ ಕಾಣಲು ಸಹಾಯ ಮಾಡುತ್ತದೆ.
· ಇವೆಲ್ಲಕ್ಕಿಂತಲೂ ಮುಖ್ಯವಾಗಿ ನಿಮ್ಮ ಬೈಕನ್ನು ಪರ್ಫೆಕ್ಟ್ ಫಿಟ್‌ ಆಗಿ ಇಟ್ಟುಕೊಳ್ಳಿ. ಸರಿಯಾದ ಸಮಯಕ್ಕೆ ಸರ್ವೀಸ್‌ ಮಾಡಿಸಿಕೊಳ್ಳುವುದನ್ನು ಮರೆಯಬಾರದು.

-   ಪ್ರಜ್ಞಾ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next