ಹಾನಗಲ್ಲ: ನಿಟ್ನೇತ ಹಾಗೂ ಸುಸಜ್ಜಿತವಾಗಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸಲು ಸಕಲ ಸಿದ್ಧತೆ ಮಾಡಿಕೊಂಡಿದ್ದು, ಹಾನಗಲ್ಲ ತಾಲೂಕಿನಲ್ಲಿ 3845 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎನ್.ಹುರಳಿ ತಿಳಿಸಿದರು.
ಗುರುವಾರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಪೂರ್ವ ಸಿದ್ಧತಾ ಪರೀಕ್ಷೆಗಳು, ಪ್ರತಿನಿತ್ಯ ವಿಶೇಷ ವರ್ಗಗಳು, ರವಿವಾರದ ರಜಾ ದಿನಗಳಲ್ಲೂ ವಿಶೇಷ ವರ್ಗಗಳನ್ನು ನಡೆಸಿರುವುದಲ್ಲದೇ, ಮಾದರಿ ಪ್ರಶ್ನೆ ಪತ್ರಿಕೆಗಳನ್ನು ನೀಡಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಭಯವಿಲ್ಲದಂತೆ ಸಂತೋಷದಿಂದ ಪರೀಕ್ಷೆ ಬರೆಯಲು ಮಾರ್ಗದರ್ಶನ ಮಾಡಲಾಗಿದೆ ಎಂದರು.
ವಿಶೇಷವಾಗಿ ವಿದ್ಯಾರ್ಥಿಗಳ ಮನೆಗಳಿಗೆ ಶಿಕ್ಷಕರು ಭೇಟಿ ನೀಡಿ ಮಾರ್ಗದರ್ಶನ ಮಾಡಿದ್ದಾರೆ. ಶಿಕ್ಷಕರು ಮಕ್ಕಳ ಪಾಲಕರೊಂದಿಗೆ ಮಾತನಾಡಿ, ಮಕ್ಕಳ ಶೈಕ್ಷಣಿಕ ಉನ್ನತಿಗೆ ಸಹಕರಿಸಬೇಕು. ಮಕ್ಕಳು ಹೆಚ್ಚು ಸಮಯವನ್ನು ಓದಿಗೆ ನೀಡುವಂತೆ ಪ್ರೋತ್ಸಾಹಿಸಬೇಕೆಂದು ಮನವಿ ಮಾಡಿದ್ದಾರೆ ಎಂದು ತಿಳಿಸಿದರು.
ಕೋವಿಡ್ ಕಾರಣದಿಂದ ಮಕ್ಕಳಿಗೆ 3 ಗಂಟೆಗಳಲ್ಲಿ ಪರೀಕ್ಷೆ ಬರೆಯುವ ತರಬೇತಿ ಇರಲಿಲ್ಲ. ಹೀಗಾಗಿ, ಎರಡು ಬಾರಿ ಪೂರ್ವ ಸಿದ್ಧತಾ ಪರೀಕ್ಷೆ ನಡೆಸಿದ್ದಲ್ಲದೇ, ವಾರ್ಷಿಕ ಪರೀಕ್ಷೆಯ ಮಾದರಿಯಲ್ಲಿಯೇ ಪ್ರಶ್ನೆ ಪತ್ರಿಕೆಗಳನ್ನು ನೀಡಿ, ಭಯ ಮುಕ್ತ ಪರೀಕ್ಷೆಗೆ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಲಾಗಿದೆ. ಈ ಬಾರಿಯಂತೂ ಎಲ್ಲ 66 ಪ್ರೌಢಶಾಲೆಗಳಲ್ಲಿ ಅತ್ಯಂತ ಕಾಳಜಿ ಹಾಗೂ ತರಬೇತಿ ನೀಡಿ ಮಕ್ಕಳಿಗೆ ಅಭ್ಯಾಸ ಮಾಡಿಸಲಾಗಿದೆ. ಕೊರೊನಾ ಭೀತಿ ಇಲ್ಲದ ಕಾರಣ ಮಕ್ಕಳು ಕೂಡ ಪರೀಕ್ಷೆಯನ್ನು ಯಾವುದೇ ಆತಂಕವಿಲ್ಲದೇ ಬರೆಯಲು ಸಿದ್ಧರಾಗಿದ್ದಾರೆ ಎಂದರು.
ಹಾನಗಲ್ಲ ತಾಲೂಕಿನ 66 ಪ್ರೌಢಶಾಲೆಗಳಲ್ಲಿ 38 ಸರಕಾರಿ, 18 ಅನುದಾನಿತ, 10 ಅನುದಾನ ರಹಿತ ಪ್ರೌಢಶಾಲೆಗಳಿವೆ. ಒಟ್ಟು 1829 ಗಂಡು ಮಕ್ಕಳು, 2016 ಹೆಣ್ಣು ಮಕ್ಕಳು ಸೇರಿ ಒಟ್ಟು 3845 ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಹಾಜರಾಗಲಿದ್ದಾರೆ. 346 ಖಾಸಗಿ ವಿದ್ಯಾರ್ಥಿಗಳು ಹಾನಗಲ್ಲ ತಾಲೂಕಿನಲ್ಲಿದ್ದು, ಅವರು ಹಾವೇರಿ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯುವರು. ಈ ಬಾರಿ ಹಿಂದೆ ನಡೆದ ಪರೀಕ್ಷೆಗಳ ಫಲಿತಾಂಶಕ್ಕಿಂತ ಅತ್ಯಧಿಕ ಫಲಿತಾಂಶವನ್ನು ಹಾನಗಲ್ಲ ತಾಲೂಕಿನಿಂದ ನಿರೀಕ್ಷಿಸಿದ್ದೇವೆ ಎಂದು ತಿಳಿಸಿದರು.
ಪರೀಕ್ಷಾ ಸುರಕ್ಷತೆಗಾಗಿ ಕೋವಿಡ್ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಪೊಲೀಸ್, ಆರೋಗ್ಯ ಇಲಾಖೆ ಸಿಬ್ಬಂದಿಯನ್ನು ನಿಯೋಜಿಸಲು ಮನವಿ ಮಾಡಲಾಗಿದೆ. ಇಲಾಖೆಯ ನಿಯಮಗಳನ್ನು ಚಾಚೂ ತಪ್ಪದೆ ಪಾಲಿಸಿ ಪರೀಕ್ಷೆಗಳನ್ನು ವಿದ್ಯಾರ್ಥಿಗಳಿಗೆ ಭಯವಿಲ್ಲದಂತೆ ನಡೆಸಲು ವ್ಯವಸ್ಥೆ ಮಾಡಲಾಗಿದೆ. ತಹಶೀಲ್ದಾರ್ ಸಮ್ಮುಖದಲ್ಲಿ ಪರೀಕ್ಷಾ ಸಿಬ್ಬಂದಿಗಾಗಿ ಪೂರ್ವ ಸಿದ್ಧತಾ ಸಭೆ ಮಾಡಲಾಗಿದೆ ಎಂದರು.
ಹಾನಗಲ್ಲ ಪಟ್ಟಣದಲ್ಲಿ 4, ಅಕ್ಕಿಆಲೂರಿನಲ್ಲಿ 3, ಉಳಿದಂತೆ ಬೊಮ್ಮನಹಳ್ಳಿ, ಬೆಳಗಾಲಪೇಟೆ, ತಿಳವಳ್ಳಿ, ಮಕರವಳ್ಳಿ, ಕೂಸನೂರು, ಮಹಾರಾಜಪೇಟೆ, ಆಡೂರು, ಹೇರೂರು ನರೆಗಲ್ಲನಲ್ಲಿ ತಲಾ ಒಂದೊಂದು ಪರೀಕ್ಷೆ ಕೇಂದ್ರಗಳಿವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಆರ್. ಎನ್.ಹುರಳಿ ತಿಳಿಸಿದರು. ಈ ಸಂದರ್ಭದಲ್ಲಿ ನೋಡಲ್ ಅಧಿಕಾರಿ ಬಿ.ಉಮೇಶ್ ಇದ್ದರು.