Advertisement

Udupi: ಕೃಷ್ಣನೂರಿನಲ್ಲಿ ಶ್ರೀಕೃಷ್ಣಜನ್ಮಾಷ್ಟಮಿಗೆ ಸಿದ್ಧತೆ

05:39 PM Aug 17, 2024 | Team Udayavani |

ಉಡುಪಿ: ಕೃಷ್ಣನೂರು ಉಡುಪಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆ.26ರಂದು ನಡೆಯಲಿದ್ದು, ಆ.27 ರಂದು ಶ್ರೀಕೃಷ್ಣ ಲೀಲೋತ್ಸವ(ವಿಟ್ಲಪಿಂಡಿ)ನಡೆಯಲಿದೆ.

Advertisement

ಇದಕ್ಕಾಗಿ ರಥಬೀದಿಯಲ್ಲಿ ಸಿದ್ಧತೆ ಆರಂಭಗೊಂಡಿದ್ದು, ವಿಟ್ಲಪಿಂಡಿಯಂದು ಗೋವಳರು ಮೊಸರು ಕುಡಿಕೆಗಳನ್ನು ಒಡೆಯಲು ಗುರ್ಜಿಗಳ ಕಂಬವನ್ನು ನೆಡುವ ಕೆಲಸ ನಡೆಯುತ್ತಿದೆ.

15 ಗುರ್ಜಿಗಳನ್ನು ರಥಬೀದಿಯಲ್ಲಿ ನೆಡಲಾಗುತ್ತದೆ. ಇದರಲ್ಲಿ ಎರಡು ಮಂಟಪ ಮತ್ತು ಏಳು ಗುರ್ಜಿಗಳು ಕೃಷ್ಣಮಠಕ್ಕೆ ಸಂಬಂಧಿಸಿದವು.

ಏಳು ಗುರ್ಜಿಗಳು ಏಳು ಮಠಗಳಿಗೆ, ಎರಡು ಮಂಟಪಗಳು ಪರ್ಯಾಯ ಮಠ ಮತ್ತು ಶ್ರೀಕೃಷ್ಣಮಠಕ್ಕೆ ಸಂಬಂಧಿಸಿವೆ. ಚಂದ್ರಮೌಳೀಶ್ವರ ದೇವಸ್ಥಾನದ ಎದುರಿನ ಮೂರು, ರಥ ನಿಲ್ಲುವ ಮಂಟಪದ ಬಳಿಕದ ಮೂರು ಗುರ್ಜಿಗಳು ಹೀಗೆ ತಲಾ ಮೂರು ಗುರ್ಜಿಗಳು ಅನಂತೇಶ್ವರ ಮತ್ತು ಚಂದ್ರಮೌಳೀಶ್ವರ ದೇವಸ್ಥಾನಕ್ಕೆ ಸಂಬಂಧಿಸಿದವು.

ಉಳಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ, ಮುದ್ದುಕೃಷ್ಣ, ರಂಗೋಲಿ, ಚಿತ್ರಕಲೆ ಸಹಿತ ಮೊದಲಾದ ಸ್ಪರ್ಧೆಗಳನ್ನು ಕೃಷ್ಣಮಠದಲ್ಲಿ ಆಯೋಜಿಸಲಾಗುತ್ತಿದೆ. ಇದೇ ಮೊದಲ ಬಾರಿಗೆ ಪರ್ಯಾಯ ಮಠದ ವತಿಯಿಂದ ನಗದು ಬಹುಮಾನವನ್ನು ಪೌರಾಣಿಕ, ಹುಲಿವೇಷ, ಜಾನಪದ ನೃತ್ಯಗಳಿಗೆ ಕೊಡಲಾಗುತ್ತಿದೆ. ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಮಾಸೋತ್ಸವದ ನಿಮಿತ್ತ ಆ.1ರಿಂದಲೇ ವಿವಿಧ ಕಾರ್ಯಕ್ರಮ, ಸ್ಪರ್ಧೆ ಇತ್ಯಾದಿ ಆರಂಭಗೊಂಡಿದೆ.

Advertisement

ಕೃಷ್ಣಾಷ್ಟಮಿ ಸಂಭ್ರಮಕ್ಕೆ ಪ್ರತ್ಯೇಕ ಸಮಿತಿಗಳನ್ನು ರಚಿಸಿ ಪ್ರಮುಖರಿಗೆ ಜವಾಬ್ದಾರಿ ವಹಿಸಲಾಗಿದೆ. ಪರ್ಯಾಯ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಸಲಹೆ, ಮಾರ್ಗದರ್ಶನದಂತೆ ತಯಾರಿ ಕಾರ್ಯ ಆರಂಭಗೊಂಡು, ಈಗಾಗಲೆ ಹಲವು ಪೂರ್ವಭಾವಿ ಸಭೆಗಳು ನಡೆದಿದೆ.

ಹುಲಿವೇಷಕ್ಕೆ ತಂಡಗಳ ಸಜ್ಜು
ನಗರದಲ್ಲಿ ಹುಲಿ ವೇಷ ತಂಡಗಳು ಅಷ್ಟಮಿಗೆ ಹುಲಿ ಕುಣಿತ ಪ್ರದರ್ಶಿಸಲು ಸಜ್ಜುಗೊಳ್ಳುತ್ತಿವೆ. ನಗರ, ಗ್ರಾಮಾಂತರ ಭಾಗದ ಖ್ಯಾತ ಹುಲಿವೇಷಧಾರಿಗಳ ತಂಡದ ಪೋಸ್ಟರ್‌ಗಳು ರಾರಾಜಿಸುತ್ತಿದೆ. ವಿವಿಧ ಸಂಘ, ಸಂಸ್ಥೆಗಳು ಕೃಷ್ಣ ವೇಷ ಸ್ಪರ್ಧೆ ಮತ್ತು ಹುಲಿ ಕುಣಿತ ಸ್ಪರ್ಧೆ ಆಯೋಜಿಸಲು ತಯಾರಿ ನಡೆಸಿವೆ.

ಭಕ್ತರು, ಪ್ರವಾಸಿಗರು
ಶ್ರೀಕೃಷ್ಣ ಜನ್ಮಾಷ್ಟಮಿ, ವಿಟ್ಲಪಿಂಡಿ ಉತ್ಸವ ಕಣ್ತುಂಬಿಕೊಳ್ಳಲು ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು, ಪ್ರವಾಸಿಗರು ಆಗಮಿಸುವ ಸಾಧ್ಯತೆ ಇದೆ. 4ನೇ ಶನಿವಾರ, ರವಿವಾರ ರಜೆ ಇರುವುದರಿಂದ ಮತ್ತು ಆ.26-27 ಹೆಚ್ಚುವರಿ ರಜೆ ಇದ್ದಲ್ಲಿ ಸ್ಥಳೀಯರು ಸಹಿತ, ಹೊರ ಜಿಲ್ಲೆ, ರಾಜ್ಯಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ಸಾಧ್ಯತೆ ಇದೆ. ಈಗಾಗಲೆ ಬಹುತೇಕ ಹೊಟೇಲ್‌, ಛತ್ರ, ಲಾಡ್ಜ್ಗಳಲ್ಲಿ ದೂರದ ಊರಿನ ಭಕ್ತರು ಕೊಠಡಿಗಳನ್ನು ಕಾಯ್ದಿರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next