Advertisement

ಮಳೆ ವಿಪತ್ತು ನಿರ್ವಹಣೆಗೆ ಸಿದ್ಧತೆ

01:46 PM Jun 05, 2018 | |

ಮೈಸೂರು: ಮುಂಗಾರು ಮಳೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಮಳೆಯಿಂದಾಗಿ ಯಾವುದೇ ಸಂದರ್ಭದಲ್ಲಿ ವಿಪತ್ತು ಸಂಭವಿಸುವ ಸಾಧ್ಯತೆ ಇರುವುದರಿಂದ ಸಂಬಂಧಪಟ್ಟ ಅಧಿಕಾರಿಗಳು ಅತ್ಯಂತ ಜಾಗೃತಿಯಿಂದ ವಿಪತ್ತು ನಿರ್ವಹಣೆಗೆ ಸನ್ನದ್ಧರಾಗಿರಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹಾಗೂ ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಲಕ್ಷ್ಮೀನಾರಾಯಣ್‌ ತಿಳಿಸಿದರು.

Advertisement

ಮಳೆಯಿಂದ ಅವಘಡಗಳು ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ನಿರ್ದೇಶನದ ಮೇರೆಗೆ ಸೋಮವಾರ ಮೈಸೂರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆ ನಡೆಸಿ, ವಿಪತ್ತು ನಿರ್ವಹಣೆಗೆ ಜಿಲ್ಲಾಡಳಿತದ ಸಿದ್ಧತೆ ಪರಿಶೀಲಿಸಿದರು.

ಸುರಕ್ಷತಾ ಕ್ರಮ: ಮುಂಗಾರು ಆರಂಭವಾಗಿರುವ ಹಿನ್ನೆಲೆಯಲ್ಲಿ ಮಳೆ, ಗಾಳಿ, ಪ್ರವಾಹದಿಂದ ಯಾವುದೇ ರೀತಿಯಲ್ಲಿ ಜನರಿಗೆ ತೊಂದರೆಯಾಗಬಾರದು. ಎಲ್ಲೇ ಸಮಸ್ಯೆಗಳು ಕಂಡು ಬಂದರೂ ಕೂಡಲೇ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. ಅನಗತ್ಯ ದೂರುಗಳು ಬಾರದಂತೆ ಎಲ್ಲಾ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ತಂಡಗಳ ರಚನೆ: ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಇರುವಂತೆ ಇತರ ನಗರ ಸ್ಥಳೀಯ ಸಂಸ್ಥೆಗಳಲ್ಲೂ ರಾತ್ರಿ ವೇಳೆ ಸಂಭವಿಸುವ ವಿಪತ್ತು ನಿರ್ವಹಣೆಗೆ ತಂಡಗಳು ಸಿದ್ಧವಿರಬೇಕು. ಲೋಕೋಪಯೋಗಿ ರಸ್ತೆಗಳು, ಜಿಲ್ಲಾ ಪಂಚಾಯತಿ ರಸ್ತೆಗಳಲ್ಲೂ ಮರಗಳು ಉರುಳಿ ಸಂಚಾರಕ್ಕೆ ಧಕ್ಕೆಯಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಈ ಇಲಾಖೆಯಲ್ಲೂ ವುಡ್‌ಕಟರ್‌ ಮುಂತಾದ ಯಂತ್ರೋಪಕರಣಗಳನ್ನು ಸಿದ್ದಪಡಿಸಿಟ್ಟುಕೊಳ್ಳಬೇಕು ಎಂದರು. 

ವಿಶೇಷ ಎಚ್ಚರಿಕೆ: ಅಗ್ನಿಶಾಮಕ ಇಲಾಖೆ ಈ ಸಂದರ್ಭದಲ್ಲಿ ವಿಶೇಷ ಎಚ್ಚರಿಕೆ ವಹಿಸಬೇಕು. ಅಪಾರ್ಟ್‌ಮೆಂಟ್‌ ಸೇರಿದಂತೆ ಇನ್ನಿತರ ವಸತಿ ಪ್ರದೇಶಗಳ ತಗ್ಗು ಪ್ರದೇಶಗಳು ಜಲಾವೃತಗೊಂಡು ಸಮಸ್ಯೆ ಸೃಷ್ಟಿಯಾಗಬಹುದು. ಅಲ್ಲಿ ಸಕ್ಕಿಂಗ್‌ ಯಂತ್ರಗಳನ್ನು ಬಳಸಿ ಮಳೆ ನೀರನ್ನು ಚರಂಡಿ ಮೂಲಕ ಹೊರ ಹಾಕುವ ಕೆಲಸ ಆಗಬೇಕು ಎಂದು ತಿಳಿಸಿದರು. 

Advertisement

ಆರೋಗ್ಯ ಇಲಾಖೆ, ಸೆಸ್ಕ್ ಕೃಷಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌  ಇಲಾಖೆ  ಸೇರಿದಂತೆ ವಿವಿಧ ಇಲಾಖೆಗಳಲ್ಲಿ  ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸೂಚನೆ ನೀಡಿದರು.  ವಿಪತ್ತು ನಿರ್ವಹಣೆಗಾಗಿ ಕಾರ್ಯಪಡೆ ಮೂಲಕ ಕೈಗೊಳ್ಳುವ ಕೆಲಸಗಳಿಗಾಗಿ 2016ರ ಮಾರ್ಚ್‌ನಿಂದ 2017ರ ಏಪ್ರಿಲ್‌ ವರೆಗೆ 15.20 ಕೋಟಿ ರೂ.ಗಳ ಗುರಿಯಲ್ಲಿ 1319 ಕಾಮಗಾರಿಗಳನ್ನು ಕೈಗೊಳ್ಳಲಾಗಿತ್ತು.

ಈ ಪೈಕಿ 1312ಕಾಮಗಾರಿ ಪೂರ್ಣಗೊಂಡಿವೆ. 14.47 ಕೋಟಿ ರೂ. ಖರ್ಚಾಗಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. 2017-18ನೇ ಸಾಲಿನಲ್ಲಿ ಸಿಆರ್‌ಎಫ್ ಅನುದಾನದಲ್ಲಿ ಕುಡಿಯುವ ನೀರಿನ ಉದ್ದೇಶಕ್ಕಾಗಿ 209 ಕಾಮಗಾರಿಗಳನ್ನು 2.80 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲಾಗಿತ್ತು. ಈ ಪೈಕಿ 2.10 ಕೋಟಿ ರೂ.ಬಿಡುಗಡೆಯಾಗಿದ್ದು, 70 ಲಕ್ಷ ರೂ. ಬಾಕಿ ಬರಬೇಕಿದೆ ಎಂದು ಅಧಿಕಾರಿಗಳು ಮನವಿ ಮಾಡಿದರು. 

ಸಭೆಯಲ್ಲಿ ಜಿಲ್ಲಾಧಿಕಾರಿ ಅಭಿರಾಮ್‌ ಜಿ.ಶಂಕರ್‌, ನಗರ ಪೊಲೀಸ್‌ ಉಪ ಆಯುಕ್ತ ವಿಷ್ಣುವರ್ಧನ್‌, ಹೆಚ್ಚುವರಿ ಜಿಲ್ಲಾಧಿಕಾರಿ ಯೋಗೇಶ್‌, ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಕೆ.ಎಚ್‌.ಜಗದೀಶ್‌, ಮುಡಾ ಆಯುಕ್ತ ಕಾಂತರಾಜು, ಹೆಚ್ಚುವರಿ ಪೊಲೀಸ್‌ಅಧೀಕ್ಷಕ ಅಯ್ಯಪ್ಪ, ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕ ಕಿರಣ್‌ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next