Advertisement

ಲಾಕ್‌ಡೌನ್‌ 5ಕ್ಕೆ ಸಿದ್ಧತೆ : ಬೆಂಗಳೂರು ಸೇರಿ 11 ನಗರಗಳಲ್ಲಿ ಮಾತ್ರ ಲಾಕ್‌ಡೌನ್‌?

07:04 AM May 28, 2020 | mahesh |

ಹೊಸದಿಲ್ಲಿ: ಬೆಂಗಳೂರು ಸಹಿತ ದೇಶದ 11 ನಗರಗಳಲ್ಲಿ ಲಾಕ್‌ಡೌನ್‌ ಮುಂದುವರಿಯುವ ಸಾಧ್ಯತೆ ದಟ್ಟವಾಗಿದೆ. ದೇಶದ 11 ನಗರಗಳಲ್ಲೇ ಶೇ.70
ಸೋಂಕಿತರು ಇರುವುದರಿಂದ ಇಲ್ಲಿ ಮಾತ್ರ ಲಾಕ್‌ಡೌನ್‌ 5 ಪ್ರಕಟಿಸುವ ಸಾಧ್ಯತೆ ಇದೆ. ರವಿವಾರ ಪ್ರಧಾನಿ ನರೇಂದ್ರ ಮೋದಿ ಅವರು ನಡೆಸಲಿರುವ ಮನ್‌ ಕಿ ಬಾತ್‌ ವೇಳೆಯಲ್ಲೇ ಈ ಬಗ್ಗೆ ಪ್ರಕಟವಾಗುವ ಸಂಭವವಿದೆ ಎಂದು ಮೂಲಗಳು ತಿಳಿಸಿವೆ.

Advertisement

ಮೇ 31ರಂದು 4ನೇ ಆವೃತ್ತಿಯ ಲಾಕ್‌ಡೌನ್‌ ಅಂತ್ಯಗೊಳ್ಳಲಿದೆ. ಆದರೆ ಉದ್ಯಾನನಗರಿಯೂ ಸೇರಿ ಆರು ಮೆಟ್ರೋ ನಗರಗಳನ್ನು ಒಳಗೊಂಡಂತೆ ಒಟ್ಟು 11 ನಗರಗಳಲ್ಲಿನ ಸೋಂಕಿನ ತೀವ್ರತೆ ಪರಿಗಣಿಸಿ ಜೂ.1ರಿಂದ ಮತ್ತೆ ಎರಡು ವಾರಗಳ ಕಾಲ ಲಾಕ್‌ಡೌನ್‌ ಮುಂದುವರಿಸಲು ಕೇಂದ್ರ ಸರಕಾರ ಚಿಂತನೆ ನಡೆಸಿದೆ. ಸಮಾಧಾನದ ವಿಷಯ ಅಂದರೆ, 5ನೇ ಆವೃತ್ತಿಯಲ್ಲಿ ನಿಯಮಗಳು ಇನ್ನಷ್ಟು ಸರಳವಾಗಲಿವೆ ಎಂದು ಮೂಲಗಳು ತಿಳಿಸಿವೆ.

ದೇಶದ ಪ್ರಮುಖ ಮೆಟ್ರೋ ನಗರಗಳಾಗಿರುವ ಬೆಂಗಳೂರು, ದಿಲ್ಲಿ, ಮುಂಬಯಿ, ಚೆನ್ನೈ, ಅಹ್ಮದಾಬಾದ್‌ ಮತ್ತು ಕೋಲ್ಕತಾ, ಜತೆಗೆ ಪುಣೆ, ಥಾಣೆ, ಜೈಪುರ, ಸೂರತ್‌ ಹಾಗೂ ಇಂದೋರ್‌ ನಗರಗಳು ದೇಶದ ಒಟ್ಟು ಸೋಂಕಿತರ ಪೈಕಿ ಮುಕ್ಕಾಲು ಭಾಗದಷ್ಟು ಮಂದಿಗೆ ಈಗಾಗಲೇ ಚಿಕಿತ್ಸೆ ನೀಡುತ್ತಿವೆ. ಈ ನಡುವೆ ಕಳೆದ 14 ದಿನಗಳಲ್ಲಿ ಸೋಂಕಿತರ ಪಟ್ಟಿಗೆ 1.5 ಲಕ್ಷ ಮಂದಿ ಹೊಸದಾಗಿ ಸೇರ್ಪಡೆಗೊಂಡಿದ್ದಾರೆ. ಹೀಗಾಗಿ ಈ ನಗರಗಳಲ್ಲಿ ಕಟ್ಟೆಚ್ಚರ ವಹಿಸುವ ಅಗತ್ಯವಿರುವ ಕಾರಣ ಲಾಕ್‌ಡೌನ್‌ ಮುಂದುವರಿಸುವುದು ಬಹುತೇಕ ಪಕ್ಕಾ ಆಗಿದೆ ಎಂದು ಸರಕಾರದ ಉನ್ನತ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಧಾರ್ಮಿಕ ಕೇಂದ್ರಗಳಿಗೆ ಅವಕಾಶ
ಹಾಲಿ ಜಾರಿಯಲ್ಲಿರುವ ನಾಲ್ಕನೇ ಆವೃತ್ತಿಯ ಲಾಕ್‌ಡೌನ್‌ನಲ್ಲಿ ಮಾರುಕಟ್ಟೆ, ಕಚೇರಿ, ಕೈಗಾರಿಕೆ ಮತ್ತು ಕೆಲವೆಡೆ ಬಸ್‌ಗಳ ಸಂಚಾರಕ್ಕೆ ಅವಕಾಶ ನೀಡಿರುವ ಕೇಂದ್ರ, ಮುಂಬರುವ ಲಾಕ್‌ಡೌನ್‌ 5ರ ವೇಳೆ ಮಂದಿರ, ಮಸೀದಿ, ಚರ್ಚ್‌ ಸೇರಿ ಧಾರ್ಮಿಕ ಕೇಂದ್ರಗಳು ಹಾಗೂ ಜಿಮ್‌ಗಳನ್ನು ತೆರೆಯಲು ಅನುಮತಿ ನೀಡಲಿದೆ. ಆದರೆ ಎಲ್ಲ ಕಡೆ ಸಾಮಾಜಿಕ ಅಂತರದ ನಿಯಮವನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಲಿದೆ. ಆದರೆ ಯಾವುದೇ ಧಾರ್ಮಿಕ ಉತ್ಸವ, ಸಮಾವೇಶ ಹಾಗೂ ಹಬ್ಬಗಳ ಆಚರಣೆಗೆ ಅವಕಾಶ ಇರುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಾಲ್‌ಗ‌ಳು ಬಂದ್‌
ಜೂ.1ರಿಂದ ದೇವಾಲಯಗಳಲ್ಲಿ ಪೂಜೆ, ಪುನಸ್ಕಾರ ಆರಂಭಿಸುವುದಾಗಿ ಹೇಳಿರುವ ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ಕೇಂದ್ರ ಸರಕಾರ ಅನುಮತಿ ಕೊಟ್ಟರೆ ರಾಜ್ಯದಲ್ಲೂ ಮಾಲ್‌ಗ‌ಳನ್ನು ಪುನರಾರಂಭಿಸುವುದಾಗಿ ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next