Advertisement

Yuva Nidhi ಯೋಜನೆ ಕಾರ್ಯಾನುಷ್ಠಾನಗೊಳಿಸಲು ಸಿದ್ಧತೆ: ಡಾ. ಶರಣಪ್ರಕಾಶ ಪಾಟೀಲ್

04:30 PM Jul 01, 2023 | Team Udayavani |

ಕಲಬುರಗಿ: 2022- 23 ರಲ್ಲಿ ವ್ಯಾಸಂಗ ಮಾಡಿ ಉತ್ತೀರ್ಣ ರಾದ ಪದವೀಧರರಿಗೆ ಮುಂದಿನ 24 ತಿಂಗಳ ಕಾಲ ನೀಡಲಾಗುವ ನಿರುದ್ಯೋಗ ಭತ್ಯೆಯ ಯುವನಿಧಿ ಯೋಜನೆ ಕಾರ್ಯಾನುಷ್ಠಾನಗೊಳಿಸಲು ಸಿದ್ದತೆಗಳು ನಡೆದಿವೆ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವ ಡಾ. ಶರಣಪ್ರಕಾಶ ಪಾಟೀಲ್ ತಿಳಿಸಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯುವನಿಧಿ ತಮ್ಮ ಕೌಶಲ್ಯಾಭಿವೃದ್ಧಿ ಇಲಾಖೆಯಡಿಯೇ ಜಾರಿಗೊಳ್ಳುತ್ತಿದೆ.ಪದವೀಧರರು ಹಾಗೂ ಡಿಪ್ಲೋಮಾ ಮಾಡಿ ಹೊರಬರುವರು 4.50 ಲಕ್ಷ ಎಂದು ಅಂದಾಜಿಸಲಾಗಿದೆ. ಸೇವಾ ಸಿಂಧು ಆ್ಯಪ್ ರೂಪಿಸಲಾಗುತ್ತಿದೆ. ಇಲಾಖೆ ಈಗಾಗಲೇ ಮಾಹಿತಿ ಸಂಗ್ರಹ ಕಾರ್ಯ ಶುರು ಮಾಡಿದೆ. ಒಟ್ಟಾರೆ ಮುಂದಿನ ಮರ‍್ನಾಲ್ಕು ತಿಂಗಳಲ್ಲಿ ಯೋಜನೆ ಜಾರಿಗೆ ತರುವ ಸಿದ್ಧತೆಗಳು ನಡೆದಿವೆ ಎಂದು ವಿವರಣೆ ನೀಡಿದರು.

ಒಮ್ಮೇಲೆ ಪದವೀದರರು ಹೊರ ಬರುವುದಿಲ್ಲ. ಕೆಲವೊಂದು ಪದವಿಗಳ ಶೈಕ್ಷಣಿಕ ವೇಳೆ ಬದಲು ಇದೆ. ಹೀಗಾಗಿ ಏಕಕಾಲಕ್ಕೆ ಎಲ್ಲ ವಿದ್ಯಾರ್ಥಿಗಳಿಗೆ ಸೌಲಭ್ಯ ದೊರಕಲು ಸಾಧ್ಯವಿಲ್ಲ. ಪದವಿ ಪಡೆದ ಆರು ತಿಂಗಳ ಕಾಲ ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ ಎಂದರು.

ರಾಯಚೂರಲ್ಲಿ ಏಮ್ಸ್ ಸ್ಥಾಪನೆಗೆ ಪತ್ರ

ರಾಯಚೂರಲ್ಲಿ ಏಮ್ಸ್ ಸ್ಥಾಪಿಸುವಂತೆ ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಆದರೆ ಇದನ್ನು ಸಹ ಹುಬ್ಬಳ್ಳಿ- ಧಾರವಾಡಕ್ಕೆ ತೆಗೆದುಕೊಂಡು ಹೋಗುವ ಯತ್ನಗಳು ನಡೆದಿದೆ. ಈಗಾಗಲೇ ಐಎಟಿ ಹೋಗಿದೆ ಎಂದ ಅವರು, ಈ ಭಾಗದಲ್ಲಿ ಏಮ್ಸ್ ಸ್ಥಾಪನೆ ಹಾಗೂ ಕಲಬುರಗಿಯಿಂದ ಬೆಂಗಳೂರಿಗೆ ಹೊಸ ರೈಲು ಓಡಿಸುವುದು ಸೇರಿದಂತೆ ಇತರ ಕಾರ್ಯಗಳನ್ನು ತ್ವರಿತ ಗತಿಯಲ್ಲಿ ಅನುಷ್ಠಾನಕ್ಕೆ ತರುವಂತೆ ಕೇಂದ್ರದ ಬಳಿ ನಿಯೋಗ ಸಹ ಹೋಗಲು ಉದ್ದೇಶಿಸಲಾಗಿದೆ ಎಂದು ಇದೇ ಸಂದರ್ಭದಲ್ಲಿ ಸಚಿವರು ತಿಳಿಸಿದರು.

Advertisement

ಸುಪರ್ ಸ್ಪೆಷಾಲಿಟಿ ಆಸ್ಪತ್ರೆ
ಕಲಬುರಗಿಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಸರ್ಕಾರ ಬದ್ದವಿದ್ದು, ಈ ಕುರಿತು ಬರುವ ಬಜೆಟ್‌ದಲ್ಲಿ ಅನುದಾನ ನಿಗದಿಯಾಗಲಿದೆ. ಐದು ವರ್ಷಗಳಿಂದ ನೆನೆಗುದಿಗೆ ಬಿದ್ದ ಈ ಕಾರ್ಯಕ್ಕೆ ಮತ್ತೆ ಮರುಜೀವ ನೀಡಲಾಗುತ್ತಿದೆ. ಅದೇ ರೀತಿ ಟ್ರಾಮಾ ಕೇಂದ್ರವನ್ನು ಸಹ ಬಲಪಡಿಸಲಾಗುತ್ತಿದೆ. ರಾಜ್ಯದಲ್ಲಿ 270 ಸರ್ಕಾರಿ ಐಟಿಐ ಕಾಲೇಜುಗಳ ಪೈಕಿ 150 ಕಾಲೇಜುಗಳನ್ನು ತಲಾ ೩೦ ಕೋ.ರೂ ವೆಚ್ಚದಲ್ಲಿ ಮೇಲ್ದರ್ಜೆಗೇರಿಸಲಾಗುತ್ತಿದೆ. ೯೦ರಷ್ಟು ಕೇಂದ್ರದ ನೆರವಿನಿಂದ ಐಟಿಐ ಕಾಲೇಜುಗಳನ್ನು ಸುಸಜ್ಜಿತಗೊಳಿಸಲಾಗುತ್ತಿದೆ ಎಂದು ಸಚಿವ ಡಾ. ಶರಣಪ್ರಕಾಶ ಪಾಟೀಲ್ ವಿವರಿಸಿದರು.

ನಿಗಾ: ಮಳೆ ಕೊರತೆಯುಂಟಾಗಿ ಕೃಷಿ ಕ್ಷೇತ್ರದ ಮೇಲೆ ಆಗುತ್ತಿರುವ ಪರಿಣಾಮದ ಕುರಿತಾಗಿ ಸರ್ಕಾರ ನಿಗಾ ವಹಿಸುತ್ತಿದ್ದು, ಈಗಾಗಲೇ ಕಂದಾಯ ಸಚಿವರು ಸಭೆ ನಡೆಸಿ ಪರಾಮರ್ಶಿಸಿದ್ದಾರೆ. ಕಲಬುರಗಿ ರಾಯಚೂರು ಜಿಲ್ಲೆಯಲ್ಲಿ ಮಳೆ ಅಭಾವ ಬಹಳಷ್ಟಿದೆ. ಬರಗಾಲ ಎಂಬುದನ್ನು ನಿರ್ಧರಿಸಲು ಇನ್ನೂ ಕಾಲಾವಕಾಶವಿದೆ ಎಂದು ಸಚಿವ ಡಾ. ಶರಣಪ್ರಕಾಶ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next