ಧಾರವಾಡ: ಕಳೆದ ಎರಡು ವರ್ಷ ಕೋವಿಡ್ -19 ಹಿನ್ನಲೆಯಲ್ಲಿ ಕಳೆಗುಂದಿದ್ದ ಹೋಳಿ ಹಬ್ಬ ಈ ಸಲ ರಂಗೇರಲು ಸಜ್ಜಾಗಿದ್ದು, ಕೋವಿಡ್ ಪ್ರಮಾಣ ತಗ್ಗಿದ್ದರಿಂದ ಜಿಲ್ಲಾಡಳಿತ ನಿರ್ಬಂಧಗಳನ್ನು ತೆಗೆದು ಹಾಕಿರುವ ಕಾರಣ ಕಾಮದೇವರ ಉತ್ಸವಕ್ಕೆ ಭರದ ಸಿದ್ಧತೆ ಆರಂಭಗೊಂಡಿದೆ.
ಈ ಹಿನ್ನೆಲೆಯಲ್ಲಿ ಧಾರವಾಡ ತಾಲೂಕಿನಲ್ಲಿ ಅಷ್ಟೇ ಅಲ್ಲ ಜಿಲ್ಲೆಯಲ್ಲಿಯೇ ಪ್ರಸಿದ್ಧಿ ಪಡೆದಿರುವ ಮುಳಮುತ್ತಲ ಕಾಮದೇವರ ಉತ್ಸವದ ರಂಗು-ರಂಗಿನಾಟಕ್ಕೆ ಸಿದ್ಧತೆ ಜೋರಾಗಿ ಸಾಗಿದೆ. ಅದರಲ್ಲೂ ಈ ಬಾರಿ ಮಾ.16ರಂದು ಹೋಳಿ ಹಬ್ಬವನ್ನು ವಿಶಿಷ್ಟವಾಗಿ ಆಚರಿಸಲು ಗ್ರಾಮದ ಕಾಮದೇವ ಸದ್ಭಕ್ತ ಮಂಡಳಿ ನಿರ್ಧರಿಸಿದೆ. ಅದರಲ್ಲೂ ಗುರುವಾರ (ಮಾ.17) ಬೆಳಿಗ್ಗೆ 5:00 ಗಂಟೆಗೆ ಹುಬ್ಟಾ ನಕ್ಷತ್ರದಲ್ಲಿ ಕಾಮದಹನ ನೆರವೇರಲಿದೆ. ಈ ಉತ್ಸವದ ಸಂದರ್ಭದಲ್ಲಿ ಕಾಮದೇವರಿಗೆ ದೀಡ ನಮಸ್ಕಾರ, ಎತ್ತುಗಳ ಮೆರವಣಿಗೆ, ಭಜನಾ ಸೇವೆ ಮತ್ತು ಮಹಾಪ್ರಸಾದ ಆಯೋಜಿಸಲಾಗಿದೆ.
ನೆರೆಯ ರಾಜ್ಯಗಳ ಭಕ್ತರು ಸಹಿತ ರಾಜ್ಯದ ವಿವಿಧ ಮೂಲೆಗಳಿಂದ ಮುಳಮುತ್ತಲ ಕಾಮಣ್ಣನಿಗೆ ಪೂಜೆ ಸಲ್ಲಿಸಲು ಜನ ಬರುತ್ತಾರೆ. ಸಾವಿರಾರು ಜನ ಸೇರುವುದರಿಂದ ಊರಿನಲ್ಲಿ ಜಾತ್ರೆಯ ಸಿದ್ಧತೆಯ ಕಳೆ ಕಟ್ಟಿದೆ. ಗ್ರಾಮದ ಮುಂಭಾಗದಲ್ಲಿ 12ಅಡಿ ಎತ್ತರದ ಮಂಟಪ ನಿರ್ಮಿಸಿ, ಸುತ್ತಲೂ ಕಟ್ಟಿಗೆಯ ಗೋಪುರದ ಮೇಲೆ ಕಾಮದೇವರ ಮೂರ್ತಿ ಪ್ರತಿಷ್ಠಾಪಿಸಲಾಗುತ್ತದೆ. ಜಾತಿ, ಧರ್ಮ, ಅಂತಸ್ತಿನ ಭೇದವಿಲ್ಲದೆ ಪ್ರತಿಯೊಬ್ಬರೂ ಪಾಲ್ಗೊಂಡು ಇಲ್ಲಿ ಸೇವೆ ಸಲ್ಲಿಸುವುದು ವಿಶೇಷ.
ಕಾಮದೇವರ ಪಾದರಕ್ಷೆಗಳಿಗೆ ಗ್ರಾಮದ ಹರಿಜನಕೇರಿಯಲ್ಲಿ ಪೂಜೆ ಸಲ್ಲಿಸಿ ಅಲ್ಲಿಂದ ಮೆರವಣಿಗೆ ಮೂಲಕ ತರಲಾಗುತ್ತದೆ. ಕಾಮಣ್ಣನ ಮೂರ್ತಿ ರಕ್ಷಣೆಗೆ ಗ್ರಾಮಸ್ಥರು ಆಯುಧ ಸಹಿತ ನಿಲ್ಲುವುದು ಇಲ್ಲಿನ ಮತ್ತೂಂದು ವಿಶೇಷ. ಹಬ್ಬದ ಆರಂಭದಿಂದ ಪೂರ್ಣಗೊಳ್ಳುವವರೆಗೂ ಮದ್ಯಪಾನ ಸಂಪೂರ್ಣ ನಿಷೇಧಿಸಲಾಗಿದೆ. ಕಾಮದಹನ ದಿನದಂದು ಗ್ರಾಮಸ್ಥರು ಚಪ್ಪಲಿ ಧರಿಸುವಂತಿಲ್ಲ. ಇನ್ನು ಅಣ್ಣಿಗೇರಿಯಿಂದ ಕಾಮಣ್ಣನ ರುಂಡ ತಂದು, ಪ್ರಾಣ ತ್ಯಾಗ ಮಾಡಿದ ಮುಳಮುತ್ತಲ ಗ್ರಾಮದ ಯುವಕರ ಸ್ಮರಣೆಯಲ್ಲಿ ಸಂಪ್ರದಾಯದಂತೆ ಈ ವರ್ಷವೂ ಬಣ್ಣದೋಕುಳಿ ಇಲ್ಲದೇ ಹೋಳಿ ಆಚರಣೆ ನಡೆಯಲಿದೆ.
ಕೋವಿಡ್ ನಿಯಮ ಸಡಿಲಿಕೆಯಿಂದ ಈ ಬಾರಿ ಕಾಮದೇವರ ಉತ್ಸವದಲ್ಲಿ ಲಕ್ಷಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆ ಇದೆ. ಈ ನಿಟ್ಟಿನಲ್ಲಿ ತಯಾರಿ ನಡೆದಿದ್ದು, ಬರುವ ಭಕ್ತರೆಲ್ಲರಿಗೂ ಅನುಕೂಲವಾಗುವಂತೆ ವ್ಯವಸ್ಥೆ ಮಾಡಲಾಗುತ್ತಿದೆ. ಗ್ರಾಮದ ಅಕ್ಕಪಕ್ಕದಲ್ಲಿರುವ ಹೊಲಗಳನ್ನು ಸ್ವತ್ಛಗೊಳಿಸಿ ವಾಹನ ನಿಲ್ಲಿಸಲು ಸ್ಥಳಾವಕಾಶ ಕಲ್ಪಿಸಲಾಗಿದೆ. 30 ಕ್ವಿಂಟಲ್‌ನಲ್ಲಿ ಅನ್ನಪ್ರಸಾದ ಸೇವೆ ನಡೆಯಲಿದೆ. ಹರಕೆ ತೀರಿಸುವ ಭಕ್ತರಿಗೆ ಸೂಕ್ತ ವ್ಯವಸ್ಥೆ ಮಾಡಲಾಗುತ್ತಿದೆ. ಇನ್ನು ಉತ್ಸವದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯಬಾರದೆಂಬ ಉದ್ದೇಶದಿಂದ 50ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸುವಂತೆ ಗರಗ ಠಾಣಾ ಅಧಿಕಾರಿಗೆ ಮನವಿ ಸಲ್ಲಿಸಲಾಗಿದೆ ಎಂದು ಕಾಮದೇವ ಸದ್ಭಕ್ತ ಮಂಡಳಿ ತಿಳಿಸಿದೆ.
ಉಪ್ಪಿನಬೆಟಗೇರಿಯಲ್ಲಿ ಈ ವರ್ಷ ಬಣ್ಣ ಇಲ್ಲ: ಸರಕಾರಿ ಕಾಮಣ್ಣ ಎಂಬ ಖ್ಯಾತಿ ಪಡೆದಿರುವ ಉಪ್ಪಿನಬೆಟಗೇರಿಯ ಚೌಡಿ ಕಾಮಣ್ಣನ ದಹನವು ಮಾ.19ರಂದು ನೆರವೇರಲಿದ್ದು, ಆದರೆ ಈ ವರ್ಷ ಗ್ರಾಮದಲ್ಲಿ ಬಣ್ಣದಾಟವಿಲ್ಲ. ಕಳೆದ 22 ವರ್ಷಗಳ ನಂತರ ಮೇ ತಿಂಗಳಲ್ಲಿ ಗ್ರಾಮದ ದೇವಿಯರಾದ ದ್ಯಾಮವ್ವ-ದುರ್ಗವ್ವ ಜಾತ್ರಾ ಮಹೋತ್ಸವ ನೆರವೇರಲು ನಿರ್ಧರಿಸಲಾಗಿದ್ದು, ಹೀಗಾಗಿ ಜಾತ್ರಾ ಮಹೋತ್ಸವಕ್ಕೂ ಮುನ್ನ ಬಣ್ಣದಾಟಕ್ಕೆ ಅವಕಾಶವಿಲ್ಲದಂತಾಗಿದೆ. ಗ್ರಾಮದ ಮೂರು ಸಾವಿರ ವಿರಕ್ತಮಠದಲ್ಲಿ ಈ ಕುರಿತಂತೆ ಹಿರಿಯರು ಸಭೆ ಕೈಗೊಂಡು, ಗ್ರಾಮ ದೇವಿಯರ ಜಾತ್ರಾ ಮಹೋತ್ಸವಕ್ಕೂ ಮುನ್ನವೇ ಈ ಸಲ ಬಣ್ಣದಾಟವಿಲ್ಲದೇ ಹೋಳಿ ಆಚರಣೆ ಮಾಡಲು ನಿರ್ಧರಿಸಲಾಗಿದೆ.