ಯಾವುದೇ ಹೀರೋ – ಹೀರೋಯಿನ್, ನಿರ್ಮಾಪಕ ಅಥವಾ ನಿರ್ದೇಶಕರಾಗಿರಲಿ ಅವರಿಗೆ ತಮ್ಮ ಮೊದಲ ಸಿನಿಮಾ, ಹತ್ತನೇ ಸಿನಿಮಾ, ಇಪ್ಪತ್ತೈದನೇ ಸಿನಿಮಾ ಇವು ಅವರ ಸಿನಿಮಾ ಕೆರಿಯರ್‌ನಲ್ಲಿ ತುಂಬ ಮುಖ್ಯವಾಗಿರುತ್ತದೆ. ಅದೆಷ್ಟೋ ಸಿನಿಮಾ ಮಂದಿ ಸಾಕಷ್ಟು ಸಮಯ ತೆಗೆದುಕೊಂಡು, ಅಳೆದು – ತೂಗಿ ತಮ್ಮ ವೃತ್ತಿಯಲ್ಲಿ ಮೈಲಿಗಲ್ಲಾಗುವಂಥ ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಈಗ ನಟ ಲವ್ಲಿ ಸ್ಟಾರ್ ಪ್ರೇಮ್ ಕೂಡ ತಮ್ಮ ವೃತ್ತಿ ಜೀವನದ 25ನೇ ಅಂಥದ್ದೇ ಬಹುನಿರೀಕ್ಷಿತ ಸಿನಿಮಾದ ಮೂಲಕ ಪ್ರೇಕ್ಷಕರ ಮುಂದೆ ಬರುವ ತಯಾರಿಯಲ್ಲಿದ್ದಾರೆ.
ಹೌದು, ಈ ವಾರ ಪ್ರೇಮ್ ಅಭಿನಯದ “ಪ್ರೇಮಂ ಪೂಜ್ಯಂ’ ಚಿತ್ರ ಕರ್ನಾಟಕ ಮಾತ್ರವಲ್ಲದೆ ವಿದೇಶಗಳಲ್ಲೂ ತೆರೆ ಕಾಣುತ್ತಿದೆ. ಮೊದಲೇ ಹೇಳಿದಂತೆ “ಪ್ರೇಮಂ ಪೂಜ್ಯಂ’ ಲವ್ಲಿ ಸ್ಟಾರ್ ಪ್ರೇಮ್ ಸಿನಿ ಕೆರಿಯರ್‌ನ 25ನೇ ಸಿನಿಮಾ. ಹೀಗಾಗಿ ಈ ಚಿತ್ರದ ಮೇಲೆ ಪ್ರೇಮ್ ಅವರಿಗೂ ನಿರೀಕ್ಷೆ ದುಪ್ಪಟ್ಟಿದೆ.
ಸುಮಾರು ಮೂರೂವರೆ ವರ್ಷಗಳ ಕಾಲ “ಪ್ರೇಮಂ ಪೂಜ್ಯಂ’ ಧ್ಯಾನದಲ್ಲಿದ್ದ ಪ್ರೇಮ್, ಚಿತ್ರಕ್ಕಾಗಿ ಸಾಕಷ್ಟು ಪರಿಶ್ರಮ ಹಾಕಿದ್ದಾರೆ. ಚಿತ್ರದ ಪಾತ್ರಕ್ಕಾಗಿ ತಮ್ಮ ದೇಹದ ತೂಕ ಇಳಿಸಿಕೊಂಡಿದ್ದಾರೆ, ಹಾಗೇ ಹೆಚ್ಚಿಸಿಕೊಂಡಿದ್ದಾರೆ. ಪಿಯುಸಿ ಹುಡುಗನಿಂದ ಮಧ್ಯ ವಯಸ್ಸಿನ ವ್ಯಕ್ತಿಯವರೆಗೆ ಪ್ರೇಮ್ ಮೊದಲ ಬಾರಿಗೆ ಒಂದೇ ಚಿತ್ರದಲ್ಲಿ ಏಳು ಡಿಫರೆಂಟ್ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ:ಒಂದು ಕಡೆ ಬಡತನ, ಇನ್ನೊಂದು ಕಡೆ ಕ್ರೀಡೆ: ಪ್ಯಾರಾ ಅಥ್ಲೀಟ್ ಗೆ ಕಾಡುತ್ತಿದೆ ಭವಿಷ್ಯದ ಚಿಂತೆ
ಈ ಬಗ್ಗೆ ಮಾತನಾಡುವ ಪ್ರೇಮ್, “ಈ ಸಿನಿಮಾದ ಕಥೆಯನ್ನು ಮೊದಲು ನಿರ್ದೇಶಕರು ಹೇಳಿದಾಗಲೇ ನನ್ನ ಪಾತ್ರ ಮತ್ತು ಅದಕ್ಕೆ ಮಾಡಿಕೊಳ್ಳಬೇಕಾದ ತಯಾರಿಯನ್ನು ವಿವರಿಸಿದ್ದರು. ನಾನು ಇಲ್ಲಿಯವರೆಗೆ ಮಾಡಿರುವುದು ಒಂದು ಥರದ ಸಿನಿಮಾಗಳಾದರೆ, ಇದು ಮತ್ತೂಂದು ಥರದ ಸಿನಿಮಾ. ನೀವು ಇಲ್ಲಿಯವರೆಗೆ ಯಾವ ಸಿನಿಮಾಗಳಲ್ಲೂ ನೋಡಿರದ ಪ್ರೇಮ್, ಈ ಸಿನಿಮಾದಲ್ಲಿ ಕಾಣಬಹುದು. ನನ್ನ ಒಂದೇ ಪಾತ್ರಕ್ಕೆ ಏಳು ಡಿಫರೆಂಟ್ ಗೆಟಪ್ ಗಳಿದ್ದರಿಂದ, ಪ್ರತಿ ಗೆಟಪ್ ಮಾಡಲೂ ಒಂದಷ್ಟು ತಿಂಗಳು ಸಮಯ ಹಿಡಿಯುತ್ತಿತ್ತು. ನನ್ನ ಲುಕ್ ಬದಲಾಗುವುದಕ್ಕಾಗಿಯೇ ಎಷ್ಟೋ ಸಮಯ ಇಡೀ ಚಿತ್ರತಂಡ ಕಾದು ಕುಳಿತಿರಬೇಕಾಗಿತ್ತು. ಹಿಮಾಚಲ ಪ್ರದೇಶ, ಧರ್ಮಶಾಲಾ, ಮುನ್ನಾರ್‌ನಂತಹ ಜಾಗಗಳಲ್ಲಿ ಒಂದೇ ಲೊಕೇಶನ್‌ನಲ್ಲಿ ಮೂರು ಬಾರಿ ಶೂಟಿಂಗ್ ಮಾಡಬೇಕಾಯ್ತು. ಸಿನಿಮಾವನ್ನ ಸ್ಕ್ರೀನ್ ಮೇಲೆ ನೋಡಿದಾಗ, ಇಷ್ಟು ಸಮಯ ತೆಗೆದುಕೊಂಡಿರುವುದು ಯಾಕೆ ಅಂಥ ಗೊತ್ತಾಗುತ್ತದೆ’ ಎನ್ನುತ್ತಾರೆ.
ಇನ್ನು “ಪ್ರೇಮಂ ಪೂಜ್ಯಂ’ ಚಿತ್ರಕ್ಕೆ ವೃತ್ತಿಯಲ್ಲಿ ವೈದ್ಯರಾಗಿರುವ ಡಾ. ರಾಘವೇಂದ್ರ ಬಿ.ಎಸ್.ಮೊದಲ ಬಾರಿಗೆ ಕಥೆ, ಚಿತ್ರಕಥೆ, ಸಾಹಿತ್ಯ, ಸಂಗೀತ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. “ನಿರ್ದೇಶಕರಿಗೆ ಇದು ಮೊದಲ ಸಿನಿಮಾವಾದರೂ, ಹತ್ತಾರು ಸಿನಿಮಾಗಳನ್ನು ನಿರ್ದೇಶನ ಮಾಡಿದ ಅನುಭವಿ ನಿರ್ದೇಶಕರಂತೆ, ಇಡೀ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ’ ಎಂಬುದು ಪ್ರೇಮ್ ಮಾತು.
“ತುಂಬ ವೃತ್ತಿಪರವಾಗಿ, ಅಚ್ಚುಕಟ್ಟಾಗಿ ಇಡೀ ಸಿನಿಮಾವನ್ನು ಮುಗಿಸಿದ್ದಾರೆ. ಸಣ್ಣಪುಟ್ಟ ಸಂಗತಿಗಳನ್ನು ಸೂಕ್ಷ್ಮವಾಗಿ ತೆರೆಮೇಲೆ ತೋರಿಸಿದ್ದಾರೆ. ಪ್ರೀತಿ, ಪ್ರೇಮ, ಸ್ನೇಹ, ಸಂಬಂಧ ಎಲ್ಲದಕ್ಕೂ ಸಿನಿಮಾದಲ್ಲಿ ಹೊಸ ವ್ಯಾಖ್ಯಾನವಿದೆ. ಇಡೀ ಚಿತ್ರತಂಡದ ಸಹಕಾರದಿಂದ ಇಂಥದ್ದೊಂದು “ಪ್ರೇಮಂ ಪೂಜ್ಯಂ’ ಸಿನಿಮಾ ಮಾಡೋದಕ್ಕೆ ಸಾಧ್ಯವಾಯ್ತು’ ಎಂದು ಮೆಚ್ಚುಗೆಯ ಮಾತುಗಳನ್ನಾಡುತ್ತಾರೆ ಪ್ರೇಮ್.
“ಪ್ರೇಮಂ ಪೂಜ್ಯಂ’ ಚಿತ್ರದಲ್ಲಿ ಪ್ರೇಮ್ ಅವರಿಗೆ ಬೃಂದಾ ಆಚಾರ್ಯ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಮಾಸ್ಟರ್ ಆನಂದ್, ಐಂದ್ರಿತಾ ರೇ, ಸಾಧುಕೋಕಿಲ, ಅವಿನಾಶ್, ಮಾಳವಿಕಾ, ಅನು ಪ್ರಭಾಕರ್ ಹೀಗೆ ಕಲಾವಿದರ ದೊಡ್ಡ ದಂಡೇ ಚಿತ್ರದಲ್ಲಿದೆ. ಇನ್ನೊಂದು ವಿಶೇಷವೆಂದರೆ, ಚಿತ್ರದಲ್ಲಿ ಬರೋಬ್ಬರಿ 12ಕ್ಕೂ ಹೆಚ್ಚು ಹಾಡುಗಳಿದ್ದು, ಚಿತ್ರಕಥೆಯಲ್ಲಿಯೇ ಹಾಡುಗಳು ಹಾಸುಹೊಕ್ಕಾಗಿದೆ ಎನ್ನುತ್ತಾರೆ ನಿರ್ದೇಶಕರು.
ಜಿ.ಎಸ್.ಕಾರ್ತಿಕ ಸುಧನ್