ಶ್ರುತಿ ನಾಯ್ಡು – ಕಿರುತೆರೆಯಲ್ಲಿ ದೊಡ್ಡ ಹೆಸರು. ಹಲವಾರು ಧಾರಾವಾಹಿಗಳ ನಿರ್ಮಾಣ, ನಿರ್ದೇಶನದ ಮೂಲಕ ಮನೆಮಂದಿಯನ್ನು ತಲುಪಿದ್ದಾರೆ. ಇವತ್ತಿನ ಟ್ರೆಂಡ್‌ಗೆ ತಕ್ಕಂತಹ ಕಥೆಗಳ ಮೂಲಕ ಹೊಸತನವನ್ನು ನೀಡುತ್ತಾ ಬರುತ್ತಿರುವ ಶ್ರುತಿ ಈಗ ನಿರೀಕ್ಷೆ ಕಂಗಳೊಂದಿಗೆ ಎದುರು ನೋಡುತ್ತಿದ್ದಾರೆ. ಅದಕ್ಕೆ ಕಾರಣ “ಪ್ರೀಮಿಯರ್ ಪದ್ಮಿನಿ’. ಇದು ಶ್ರುತಿ ನಾಯ್ಡು ನಿರ್ಮಾಣದ ಮೊದಲ ಚಿತ್ರ. ಚಿತ್ರ ಇಂದು ಬಿಡುಗಡೆಯಾಗುತ್ತಿದೆ. ಈಗಾಗಲೇ ಸಿನಿಮಾದ ಹಾಡು, ಟ್ರೇಲರ್ ಹಿಟ್ ಆಗಿದ್ದು, ಸಿನಿಮಾವನ್ನು ಕೂಡಾ ಪ್ರೇಕ್ಷಕರು ಸ್ವೀಕರಿಸುತ್ತಾರೆಂಬ ವಿಶ್ವಾಸವಿದೆ.
ಎಲ್ಲಾ ಓಕೆ, ಇಷ್ಟು ವರ್ಷ ಕಿರುತೆರೆಯಲ್ಲಿ ಬಿಝಿಯಾಗಿದ್ದ ಶ್ರುತಿ, ಏಕಾಏಕಿ ಹಿರಿತೆರೆಗೆ ಬಂದು ಸಿನಿಮಾ ಮಾಡಲು ಕಾರಣವೇನು ಎಂದು ನೀವು ಕೇಳಬಹುದು. ಅದಕ್ಕೆ ಕಾರಣ, ಕಥೆ. “ಕೆಲವೊಮ್ಮೆ ಕನ್ನಡ ಚಿತ್ರಗಳು ಅರ್ಧಕ್ಕೆ ನಿಂತು ಹೋಗೋದನ್ನು ನೋಡಿ, ನಮಗ್ಯಾಕೆ ಸಿನಿಮಾ ಕೆಲಸ. ನಾವು ಸೀರಿಯಲ್‌ನಲ್ಲಿ ಸೇಫ್ ಆಗಿದ್ದೀವಿ ಎಂದು ಅನಿಸುತ್ತಿತ್ತು. ಆದರೆ, ರಮೇಶ್ ಇಂದಿರಾ ಅವರ ಕಥೆ ಕೇಳಿ ಖುಷಿಯಾಯಿತು. ನಮ್ಮ ಧಾರಾವಾಹಿಗಳು ಹೇಗೆ ಜನರಿಗೆ ಕನೆಕ್ಟ್ ಆಗುತ್ತವೋ, ಈ ಕಥೆ ಕೂಡಾ ಹಾಗೇ ಇದೆ. ಜೊತೆಗೆ ಸಿನಿಮಾ ಮಾಡಲು ದೊಡ್ಡ ಬಜೆಟ್ ಕೂಡಾ ಬೇಕಿರಲಿಲ್ಲ. ಈ ಕಾರಣದಿಂದ ಸಿನಿಮಾ ಮಾಡಲು ಮುಂದಾದೆ. ನನ್ನ ಈ ಪ್ರಯತ್ನಕ್ಕೆ ಜಗ್ಗೇಶ್‌ರಿಂದ ಹಿಡಿದು ಇಡೀ ತಂಡ ಬೆಂಬಲ ಕೊಟ್ಟಿತು. ಹಾಗಾಗಿಯೇ ಸಿನಿಮಾ ಚೆನ್ನಾಗಿ ಮೂಡಿಬಂದಿದೆ’ ಎನ್ನುವುದು ಶ್ರುತಿ ಮಾತು.
ಧಾರಾವಾಹಿ ಹಾಗೂ ಸಿನಿಮಾಕ್ಕೆ ಸಾಕಷ್ಟು ವ್ಯತ್ಯಾಸವಿದೆ ಎನ್ನುವುದು ಶ್ರುತಿ ಅವರಿಗೆ “ಪ್ರೀಮಿಯರ್ ಪದ್ಮಿನಿ’ಯಲ್ಲಿ ಗೊತ್ತಾಗಿದೆ. “ಧಾರಾವಾಹಿ ಮಾಡುವಾಗ ನಮಗೆ ಸಾಕಷ್ಟು ಸಮಯವಿರುತ್ತದೆ. ಒಂದು ವಾರ ರೇಟಿಂಗ್ ಬಿದ್ದರೆ ಕೂಡಲೇ ಬೇರೇನೋ ಸೀನ್ ಕ್ರಿಯೇಟ್ ಮಾಡಿ, ಮತ್ತೆ ಟ್ರ್ಯಾಕ್‌ಗೆ ತರಬಹುದು. ಅದೇ ಸಿನಿಮಾದಲ್ಲಿ ಒಮ್ಮೆ ಚಿತ್ರೀಕರಣವಾಗಿ ಥಿಯೇಟರ್‌ಗೆ ಬಂದ ಮೇಲೆ ಮುಗಿಯಿತು. ಹಾಗಾಗಿ, ತುಂಬಾ ಎಚ್ಚರಿಕೆಯಿಂದ ಕಥೆ ಮಾಡಬೇಕಾಗುತ್ತದೆ’ ಎನ್ನುವ ಶ್ರುತಿ ಅವರಿಗೆ ಸಿನಿಮಾ ನಿರ್ಮಾಣ ಕಷ್ಟವಾಗಲಿಲ್ಲವಂತೆ. “ನಾನು 12 ವರ್ಷಗಳಿಂದ ನಿರ್ಮಾಣ ಮಾಡುತ್ತಿದ್ದೇನೆ. ಹಾಗಾಗಿ, ಕಷ್ಟವಾಗಲಿಲ್ಲ. ಸಿನಿಮಾದಲ್ಲಿ ಯಾವುದಕ್ಕೂ ಕಾಂಪ್ರಮೈಸ್ ಆಗಿಲ್ಲ. ಅದ್ಧೂರಿಯಾಗಿಯೇ ಮಾಡಿದ್ದೇವೆ’ ಎನ್ನುತ್ತಾರೆ.
ಇನ್ನು, “ಪ್ರೀಮಿಯರ್ ಪದ್ಮಿನಿ’ ಚಿತ್ರ ಎಲ್ಲರಿಗೂ ಬೇಗನೇ ಕನೆಕ್ಟ್ ಆಗುತ್ತದೆ ಎನ್ನಲು ಅವರು ಮರೆಯುವುದಿಲ್ಲ. “ಈಗ ಫ್ಯಾಮಿಲಿ ಜೊತೆಯಾಗಿ ಕುಳಿತು ನೋಡುವ ಸಿನಿಮಾಗಳು ಅಪರೂಪವಾಗುತ್ತಿವೆ. ಆದರೆ, “ಪ್ರೀಮಿಯರ್ ಪದ್ಮಿನಿ’ ಪಕ್ಕಾ ಫ್ಯಾಮಿಲಿ ಡ್ರಾಮಾ. ಜೀವನದ ಪ್ರತಿ ಅಂಶಗಳನ್ನು ತುಂಬಾ ಮನರಂಜನಾತ್ಮಕವಾಗಿ ಹೇಳಿದ್ದೇವೆ’ ಎನ್ನುತ್ತಾರೆ.
ತಮ್ಮ ಬಣ್ಣದ ಲೋಕದ ಜರ್ನಿಯ ಬಗ್ಗೆ ಮಾತನಾಡುವ ಶ್ರುತಿ, “ನಾನು ಇವತ್ತು ಇಷ್ಟೊಂದು ಧಾರಾವಾಹಿಗಳನ್ನು ಮಾಡಲು ಕಾರಣ ಎಲ್ಲರ ಪ್ರೋತ್ಸಾಹ. ಪ್ರತಿ ಸನ್ನಿವೇಶಗಳು ನನಗೆ ಪೂರಕವಾಗಿದ್ದವು. ಜೊತೆಗೆ ವ್ಯಕ್ತಿಗಳು ಕೂಡಾ ಪ್ರೋತ್ಸಾಹ ಕೊಟ್ಟರು. ಆ ಕಾರಣದಿಂದ ಯಶಸ್ವಿಯಾಗಿ ಎಲ್ಲವನ್ನು ನಿಭಾಹಿಸಲು ಸಾಧ್ಯವಾಯಿತು’ ಎನ್ನುವುದು ಶ್ರುತಿ ಮಾತು.