ಶ್ರೀನಗರ/ಡೆಹ್ರಾಡೂನ್: ಕಣಿವೆ ರಾಜ್ಯದಲ್ಲಿ ಹಿಮ ಪರ್ವ ಆರಂಭವಾಗಿದೆ. ಜಮ್ಮು- ಕಾಶ್ಮೀರದಾದ್ಯಂತ ಅಕಾಲಿಕವಾಗಿ ಭಾರೀ ಹಿಮವರ್ಷ ಸುರಿಯುತ್ತಿರುವ ಕಾರಣ ರಸ್ತೆ, ವಿಮಾನಗಳ ಸಂಚಾರ ಸ್ಥಗಿತಗೊಂಡಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ವಿದ್ಯುತ್ ಸಂಪರ್ಕ ಕಡಿತಗೊಂಡ ಪರಿಣಾಮ, ಕಣಿವೆಯಲ್ಲಿ ಕಳೆದ 2 ದಿನಗಳಿಂದ ಸಂಪೂರ್ಣ ಕತ್ತಲು ಆವರಿಸಿದೆ. ಸೇಬು ಬೆಳೆಗಳಿಗೆ ಭಾರೀ ಪ್ರಮಾಣದಲ್ಲಿ ಹಾನಿಯಾಗಿದ್ದು, ಕುಲ್ಗಾಂ, ಪುಲ್ವಾಮಾ, ಶೋಪಿಯಾನ್, ಬಂಡಿಪೋರಾ ಮತ್ತಿತರ ಪ್ರದೇಶಗಳಲ್ಲಿ ಸಾವಿರಾರು ಆ್ಯಪಲ್ ಮರಗಳು ದಪ್ಪ ಹಿಮದಿಂದ ಆವರಿಸಿಬಿಟ್ಟಿವೆ.
ಅಕಾಲಿಕವಾಗಿ ಹಿಮ ಸುರಿಯಲು ಆರಂಭಿಸಿದ ಕಾರಣ ಜಿಲ್ಲಾಡಳಿತವೂ ಸಂಪೂರ್ಣ ಸಿದ್ಧಗೊಂಡಿರಲಿಲ್ಲ. ಹೀಗಾಗಿ ಜನರು ಸಂಕಷ್ಟಕ್ಕೆ ಸಿಲುಕುವಂತಾಗಿದೆ ಎಂದು ಮಾಜಿ ಸಿಎಂ ಒಮರ್ ಅಬ್ದುಲ್ಲಾ ಟ್ವೀಟ್ ಮಾಡಿದ್ದಾರೆ. ಅಲ್ಲದೆ, ಸೇಬು ಬೆಳೆಗಾರರಿಗೆ ಕೂಡಲೇ ಪರಿಹಾರ ಒದಗಿಸಬೇಕು ಎಂದು ರಾಜ್ಯಪಾಲರಿಗೆ ಮನವಿ ಮಾಡಿದ್ದಾರೆ.
ಒಮರ್ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ವಿದ್ಯುತ್ ಇಲಾಖೆ, ವಿದ್ಯುತ್ ಸಮಸ್ಯೆ ನೀಗಿಸಲು ಎಲ್ಲ ಪ್ರಯತ್ನಗಳನ್ನೂ ಮಾಡಲಾಗುತ್ತಿದೆ. 7 ಸಾವಿರ ಕಾರ್ಮಿಕರು ಈ ಕಾರ್ಯದಲ್ಲಿ ನಿರತರಾಗಿದ್ದಾರೆ ಎಂದಿದೆ.
42 ಯಾತ್ರಿಗಳು ಅತಂತ್ರ: ಇದೇ ವೇಳೆ, ಉತ್ತರಾಖಂಡದಲ್ಲೂ ಹಿಮದ ಮಳೆ ಸುರಿಯುತ್ತಿದ್ದು, ಒಡಿಶಾದಿಂದ ಬದ್ರಿನಾಥನ ದರ್ಶನಕ್ಕೆ ತೆರಳಿದ್ದ 42 ಯಾತ್ರಿಗಳು ಅತಂತ್ರರಾಗಿದ್ದಾರೆ. ಬದ್ರಿನಾಥ್‌ನಿಂದ ವಾಪಸಾಗುತ್ತಿದ್ದಾಗ ಹಿಮವರ್ಷ ತೀವ್ರಗೊಂಡ ಕಾರಣ, ಅವರು ಅಲ್ಲೇ ಉಳಿಯಬೇಕಾಯಿತು. ಆಹಾರವೂ ಇಲ್ಲದೆ ಅವರು ಪರದಾಡುತ್ತಿದ್ದಾರೆ ಎಂದು ಹೇಳಲಾಗಿದೆ. ಉತ್ತರಾಖಂಡ ಸರಕಾರಕ್ಕೆ ಈ ಕುರಿತು ಮಾಹಿತಿ ನೀಡಲಾಗಿದ್ದು, ಅಗತ್ಯ ಸಹಾಯ ಒದಗಿಸುವಂತೆ ಕೋರಲಾಗಿದೆ ಎಂದು ಒಡಿಶಾ ಸರಕಾರ ತಿಳಿಸಿದೆ.