ಕೊಪ್ಪಳ/ಗಂಗಾವತಿ: ಜಿಲ್ಲೆಯ ವಿವಿಧ ಹೋಬಳಿಯಲ್ಲಿ ಸುರಿದ ಅಕಾಲಿಕ ಮಳೆಯಿಂದ ರೈತ ಕಂಗಾಲಾಗುವತೆ ಮಾಡಿದೆ. ಜಿಲ್ಲೆಯ ತಾವರಗೇರಾ ಹಾಗೂ ಗಂಗಾವತಿ ಭಾಗದಲ್ಲಿ ಮಳೆಯ ಆರ್ಭಟಕ್ಕೆ ರೈತರ ಬೆಳೆ ಸೇರಿ ಮೇವು ನೀರಿನಲ್ಲಿ ಸಂಪೂರ್ಣ ನೆನೆದು ಹೋಗಿದೆ.
ಅದರಲ್ಲೂ ಗಂಗಾವತಿ ಭಾಗದಲ್ಲಿ ಅಕಾಲಿಕ ಮಳೆಯಿಂದಾಗಿ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಬೆಳೆದು ನಿಂತ ಭತ್ತದ ಬೆಳೆ ನೆಲಕ್ಕುರುಳಿದೆ. ಕಟಾವು ಮಾಡಿದ ಭತ್ತದ ರಾಶಿಗೆ ಮಳೆ ನೀರು ನುಗ್ಗಿದ ಪರಿಣಾಮ ನೂರಾರು ಎಕರೆ ಪ್ರದೇಶದಲ್ಲಿ ಬೆಳೆದ ಭತ್ತ ನಷ್ಟವಾಗಿದೆ.
ಆನೆಗೊಂದಿ ಭಾಗದಲ್ಲಿ ಮುಂಚಿತವಾಗಿ ನಾಟಿ ಮಾಡಿದ್ದ ಭತ್ತವನ್ನು ರೈತರು ಕಟಾವು ಮಾಡುತ್ತಿದ್ದಾರೆ. ಕಟಾವು ಮಾಡುವ ಯಂತ್ರಗಳ ಕೊರತೆಯಿಂದ ಭತ್ತ ಕಟಾವು ಕಾರ್ಯ ವಿಳಂಭವಾಗಿದೆ. ಕೋವಿಡ್-19 ಲಾಕ್ ಡೌನ್ ಇಲ್ಲದಿದ್ದರೆ ಬಹುತೇಕ ಕಟಾವು ಕಾರ್ಯ ಮುಗಿದಿರುತ್ತಿತ್ತು. ಮರಳಿ, ಸಿದ್ದಾಪುರ, ಹೇರೂರು, ಬಸಾಪಟ್ಟಣ ಭಾಗದಲ್ಲಿ ಬೆಳೆದ ಭತ್ತದ ಬೆಳೆ ಕಟಾವಿನ ಬಂದಿದ್ದು ಅಕಾಲಿಕ ಮಳೆಗಾಳಿಯಿಂದ ಭತ್ತದ ಬೆಳೆ ನೆಲಕ್ಕುರುಳಿದೆ. ಕೊರೊನಾ ಕೊರೊನಾ ಹಿನ್ನೆಲೆಯಲ್ಲಿ ರೈತರು ಬೆಳೆದ ಬೆಳೆ ಮಾರಾಟವಾಗದೇ ಬೆಳೆಯನ್ನು ನಾಶ ಮಾಡಿದ ಬೆನ್ನಲ್ಲೇ ಅಕಾಲಿಕ ಮಳೆಗೆ ರೈತರು ಬೆಳೆದ ಭತ್ತ ಬೆಳೆ ನೆಲಕ್ಕುರುಳಿದೆ.
ರೈತರ ನೆರವಿಗೆ ಬರಬೇಕು: ಗಂಗಾವತಿ ತಾಲೂಕಿನಲ್ಲಿ ಸುರಿದ ಅಕಾಲಿಕ ಮಳೆಗಾಳಿಗೆ ಭತ್ತದ ಬೆಳೆ ನೆಲಕ್ಕುರುಳಿದ್ದು ಕಟಾವು ಮಾಡಿದ ಭತ್ತದ ರಾಶಿಗಳಿಗೆ ನೀರುನುಗ್ಗಿ ಭತ್ತ ರಾಶಿ ನೀರಿನ ಪಾಲಗಿದೆ. ಸರಕಾರ ರೈತರ ನೆರವಿಗೆ ಬರಬೇಕು ಎಂದು ಕಲ್ಗುಡಿ ಗ್ರಾಮದ ಜನತೆ ಒತ್ತಾಯ ಮಾಡಿದ್ದಾರೆ.
ಇನ್ನು ಬೇಸಿಗೆ ವೇಳೆ ಜಾನುವಾರುಗಳಿಗಾಗಿ ಮೇವಿನ ಬಣವೆ ಹಾಕಿಕೊಳ್ಳಲು ರೈತರು ಹೊಲದಲ್ಲಿನ ಮೇವಿನ ಗೂಡನ್ನು ಹಾಗೆ ಬಿಟ್ಟಿದ್ದರು. ಆದರೆ ಮಳೆ ಆರ್ಭಟದಿಂದ ಮೇವು ಸಂಪೂರ್ಣ ನೆನೆದು ಕೆಡುವಂತಾಗಿದೆ. ಇದರಿಂದ ರೈತ ಕಣ್ಣೀರಿಡುವಂತ ಸ್ಥಿತಿ ಬಂದಿದೆ.