ಅವನ ಹೆಸರು ಸೂರ್ಯ. ಹೆಸರಿಗೆ ತಕ್ಕಂತೆ ಎಲ್ಲರೂ ಸೂರ್ಯನಿಗೆ ಆಕರ್ಷಿತರಾಗುತ್ತಾರೆ. ಇವಳ ಹೆಸರು ಭಾರ್ಗವಿ ನಡೆ-ನುಡಿಯಲ್ಲಿ ಭೂಮಿಯ ಗುಣದವಳು. ಇಷ್ಟು ಹೇಳಿದ ಮೇಲೆ ಸೂರ್ಯನಿಗೆ ಭೂಮಿ, ಭೂಮಿಗೆ ಸೂರ್ಯ ನೆರಳು-ಬೆಳಕಿನಂತೆ ಇರುವುದು ಪ್ರಕೃತಿಯ ನಿಯಮ. ಇದೇ ನಿಯಮದ ಜೊತೆಗೆ ಸೂರ್ಯ, ಭಾನು, ಭೂಮಿ, ಮಳೆ, ಪ್ರೀತಿ ಇವೆಲ್ಲದರ ಗುಣ ಸ್ವಭಾವವನ್ನು ಚಿತ್ರಕಥೆಯಲ್ಲಿ ಇಟ್ಟುಕೊಂಡು ತೆರೆಗೆ ಬಂದಿರುವ ಚಿತ್ರ “ಮಳೆಬಿಲ್ಲು’.
ಇನ್ನೂ ಹೈಸ್ಕೂಲ್‌ನಲ್ಲಿರುವ ಹರೆಯದ ಹುಡುಗ ಸೂರ್ಯ ಮತ್ತು ಹುಡುಗಿ ಭಾರ್ಗವಿ ಕ್ಲಾಸ್ ರೂಮ್‌ನಲ್ಲೇ ಲವ್ ಸಿಲೆಬಸ್ ಕೂಡ ಓದಲು ಶುರು ಮಾಡುತ್ತಾರೆ. ಕಣ್-ನೋಟ ಸ್ನೇಹಕ್ಕೆ, ಸ್ನೇಹ ಪ್ರೀತಿಗೆ ತಿರುಗಲು ಹೆಚ್ಚು ಸಮಯ ಹಿಡಿಯುವುದಿಲ್ಲ. ಎಲ್ಲವೂ ಸರಿಯಾಗಿ ನಡೆದುಕೊಂಡು ಹೋಗುತ್ತಿರುವಾಗಲೇ, ನಡೆದ ಘಟನೆಯೊಂದು ಸೂರ್ಯನನ್ನು ಭೂಮಿಯಿಂದ ದೂರ ಮಾಡುತ್ತದೆ. ಭೂಮಿಯ ನೆನಪಿನಲ್ಲೇ ಸೂರ್ಯನನ್ನು ಸುತ್ತುವಂತೆ ಮಾಡುತ್ತದೆ.
ಅಲ್ಲಿಯವರೆಗೆ ಮಿಂಚುತ್ತಿದ್ದ ಸೂರ್ಯನ ಪ್ರೀತಿಗೆ ಗ್ರಹಣದ ಛಾಯೆ ದುರಾಗುತ್ತದೆ. ಹಾಗಾದ್ರೆ ಸೂರ್ಯನ ಪ್ರೀತಿಗೆ ಹಿಡಿದಿರುವ ಗ್ರಹಣ ಮುಗಿಯುತ್ತಾ? ಭೂಮಿ ಮತ್ತೆ ಸೂರ್ಯನಿಗೆ ಸಿಗುತ್ತಾಳಾ? ಇವರಿಬ್ದರ ಪ್ರೀತಿಯಲ್ಲಿ ಕೊನೆಗೂ “ಮಳೆಬಿಲ್ಲು’ ಮೂಡಲಿದೆಯಾ? ಅನ್ನೋದೆ “ಮಳೆಬಿಲ್ಲು’ ಚಿತ್ರದ ಕ್ಲೈಮ್ಯಾಕ್ಸ್. ಇಷ್ಟೆಲ್ಲ ಹೇಳಿದ ಮೇಲೆ “ಮಳೆಬಿಲ್ಲು’ ಅನ್ನೋದು ಹರೆಯದ ಪ್ರೇಮ್ ಕಹಾನಿ ಅನ್ನೋದನ್ನ ಬಿಡಿಸಿ ಹೇಳಬೇಕಾಗಿಲ್ಲ.
ಹರೆಯದ ಮನಸ್ಸುಗಳ ಸ್ನೇಹ, ಪ್ರೀತಿ-ಪ್ರೇಮ ಪಿಸುಮಾತು ಈ ಚಿತ್ರದಲ್ಲೂ ಕೇಳಿಸುತ್ತದೆ. ಚಿತ್ರದ ಕಥೆಯ ಒಂದೆಳೆ ಚೆನ್ನಾಗಿದ್ದರೂ, ಅದನ್ನು ಇನ್ನಷ್ಟು ಪರಿಣಾಮಕಾರಿಯಾಗಿ ನಿರೂಪಿಸಬಹುದಿತ್ತು. ಚಿತ್ರಕಥೆ, ಸಂಭಾಷಣೆ ಮತ್ತು ಹೇಳುವ ಶೈಲಿ ಇನ್ನಷ್ಟು ಬಿಗಿಯಾಗಿದ್ದರೆ “ಮಳೆಬಿಲ್ಲು’ ಇನ್ನೂ ಶೈನಿಂಗ್ ಆಗಿ ಕಾಣಿಸುವ ಸಾಧ್ಯತೆಗಳಿದ್ದವು. ಇನ್ನು ಚಿತ್ರದ ನಾಯಕ ಶರತ್ ಅಭಿನಯದಲ್ಲಿ ಸಾಕಷ್ಟು ಪಳಗಬೇಕಿದೆ. ಉಳಿದಂತೆ ಸಂಜನಾ ಆನಂದ್ ತಮ್ಮ ಪಾತ್ರದಲ್ಲಿ ಗಮನ ಸೆಳೆಯುತ್ತಾರೆ.
ಮತ್ತೂಬ್ಬ ನಾಯಕಿ ನಯನಾ ಅಭಿನಯ ಪರವಾಗಿಲ್ಲ. ಉಳಿದ ಕಲಾವಿದರು ನಿರ್ದೇಶಕರು ಹೇಳಿದ್ದನ್ನ ಅಚ್ಚುಕಟ್ಟಾಗಿ ತೆರೆಮೇಲೆ ಒಪ್ಪಿಸಿದ್ದಾರೆ. ಇನ್ನು ಚಿತ್ರದಲ್ಲಿ ಬರುವ ಗಣೇಶ್ ನಾರಾಯಣ್ ಸಂಗೀತ ನಿರ್ದೇಶನದ ಎರಡು-ಮೂರು ಹಾಡುಗಳು ಗುನುಗುವಂತಿವೆ. ಹಿನ್ನೆಲೆ ಸಂಗೀತದ ಬಗ್ಗೆ ಹೆಚ್ಚು ಗಮನ ಕೊಟ್ಟಂತಿಲ್ಲ. ಛಾಯಾಗ್ರಹಣ ಚೆನ್ನಾಗಿದೆ. ಒಟ್ಟಾರೆ ಚಿತ್ರತಂಡ ಇನ್ನೂ ಸ್ವಲ್ಪ ಮುತುವರ್ಜಿ ವಹಿಸಿದ್ದರೆ “ಮಳೆಬಿಲ್ಲು’ ಎನ್ನುವ ಚಿತ್ರವನ್ನು ಇನ್ನಷ್ಟು ಕಲರ್‌ಫುಲ್ ಆಗಿ ತೋರಿಸಬಹುದಿತ್ತು.
ಚಿತ್ರ: ಮಳೆಬಿಲ್ಲು
ನಿರ್ಮಾಣ: ನಿಂಗಪ್ಪ ಎಲ್.
ನಿರ್ದೇಶನ: ನಾಗರಾಜ್ ಹಿರಿಯೂರು
ತಾರಾಗಣ: ಶರತ್, ಸಂಜನಾ ಆನಂದ್, ನಯನಾ, ಕಿರ್ಲೋಸ್ಕರ್ ಸತ್ಯ, ಶ್ರೀನಿವಾಸ ಪ್ರಭು, ಮೈಕೋ ನಾಗರಾಜ್, ಮಹದೇವ್, ಚಂದನ್ ಮತ್ತಿತರರು.
* ಕಾರ್ತಿಕ್