ಬೆಂಗಳೂರು: ಕೋವಿಡ್ ಲಾಕ್‌ಡೌನ್ ಹಿನ್ನೆಲೆ ಗರ್ಭಿಣಿಯೊಬ್ಬರು 7 ಕಿ.ಮೀ ನಡೆದುಕೊಂಡು ಬಂದು ಕೊನೆಗೆ ಎಲ್ಲೂ ಆಸ್ಪತ್ರೆ ಸಿಗದೆ ಡೆಂಟಲ್ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿರುವ ಘಟನೆ ನಗರದ ದೊಡ್ಡ ಬೊಮ್ಮಸಂದ್ರದಲ್ಲಿ ನಡೆದಿದೆ. ನಗರದ ಲೊಟ್ಟೆಗೊಲ್ಲಹಳ್ಳಿಯಲ್ಲಿ ವಾಸವಿದ್ದ ಅಸ್ಸಾಂ ಮೂಲದ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಈ ವೇಳೆ ಆಸ್ಪತ್ರೆಗೆ ಹೋಗಲು ಯಾವುದೇ ವಾಹನ ಕೂಡ ಸಿಕ್ಕಿಲ್ಲ. ಆಸ್ಪತ್ರೆ ಸಿಗುತ್ತದೆ ಎಂಬ ನಂಬಿಕೆ ಮೇಲೆ ಹೆರಿಗೆ ನೋವಿನ ನಡುವೆಯೂ ಲೊಟ್ಟೆಗೊಲ್ಲಹಳ್ಳಿಯಿಂದ ತನ್ನ ಗಂಡನ ಸಹಾಯದಿಂದ ದೊಡ್ಡ ಬೊಮ್ಮಸಂದ್ರದವರೆಗೂ ನಡೆದುಕೊಂಡು ಬಂದಿದ್ದಾರೆ.
ಕೊನೆಯಲ್ಲಿ ಆಕೆ ಗಂಡ ಅಲ್ಲಿಯೇ ಇದ್ದ ದೊಡ್ಡ ಬೊಮ್ಮಸಂದ್ರದ ಡೆಂಟಲ್ ಆಸ್ಪತ್ರೆಯೊಂದಕ್ಕೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿನ ದಂತವೈದ್ಯರು ಡೆಂಟಲ್ ಆಸ್ಪತ್ರೆಯ ಪಕ್ಕದಲ್ಲೇ ಇದ್ದ ಖಾಲಿ ಜಾಗದಲ್ಲಿ ಹೆರಿಗೆ ಮಾಡಿಸಿದ್ದಾರೆ. ಇಂತಹ ತುರ್ತುಪರಿಸ್ಥಿತಿ ಸಮಯದಲ್ಲಿ ದಂತ ವೈದ್ಯೆಯಾದರೂ ಹೆರಿಗೆ ಮಾಡಿಸಿದ ವೈದ್ಯೆ ರಮ್ಯಾಗೆ ಸಾಮಾಜಿಕ ಜಾಲತಾಣದಲ್ಲಿ ಬಹಳ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈಗ ಮಗು ಮತ್ತು ವೈದ್ಯೆಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ತುಂಬ “ಒಳ್ಳೆಯ ಕೆಲಸ ಮಾಡಿದ್ದೀರಿ. ನಿಮಗೆ ಧನ್ಯವಾದ’ ಎಂದು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಈ ವಿಚಾರವಾಗಿ ಮಾತನಾಡಿರುವ ಹೆರಿಗೆ ಮಾಡಿಸಿದ ದಂತ ವೈದ್ಯೆ ಡಾ. ರಮ್ಯಾ, ಹೆರಿಗೆ ನೋವಿನ ನಡುವೆಯೂ ಆಸ್ಪತ್ರೆ ಸಿಗುತ್ತೆ ಎಂಬ ನಂಬಿಕೆ ಮೇಲೆ ಸುಮಾರು 7 ಕಿ.ಮೀ ನಡೆದುಕೊಂಡು ಬಂದಿದ್ದಾರೆ. ಆದರೆ, ಅವರಿಗೆ ಯಾವುದೇ ಆಸ್ಪತ್ರೆ ಸಿಕ್ಕಿರಲಿಲ್ಲ. ನಂತರ ನಮ್ಮ ಆಸ್ಪತ್ರೆಗೆ ಬಂದು ಹೆಣ್ಣು ಮಗುವಿಗೆ ಜನ್ಮ ನೀಡಿದರು. ಹೆರಿಗೆ ನಂತರ ರಕ್ತದೊತ್ತಡ ಹೆಚ್ಚಾಗಿತ್ತು. ಜತೆಗೆ ಮಗು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಆದರೆ, ನಂತರ ಮಗು ಪ್ರತಿಕ್ರಿಯೆ ನೀಡಿತು. ಬಳಿಕ ಅವರನ್ನು ಆ್ಯಂಬುಲೆನ್ಸ್ ನಲ್ಲಿ ಕೆ.ಸಿ.ಜನರಲ್ ಆಸ್ಪತ್ರೆಗೆ
ಕಳುಹಿಸಿಕೊಟ್ಟೆವು ಎಂದು ಹೇಳಿದರು.
1 ಆಸ್ಪತ್ರೆ ಸಿಗದೆ ಡೆಂಟಲ್ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನನ
2 ದೊಡ್ಡ ಬೊಮ್ಮಸಂದ್ರದಲ್ಲಿ ಘಟನೆ
3 ಅಸ್ಸಾಂ ಮೂಲದ ಮಹಿಳೆಗೆ ಹೆರಿಗೆ ನೋವು
4 ಆಸ್ಪತ್ರೆಗೆ ಹೋಗಲು ಸಿಗದ ವಾಹನ
5 ದೊಡ್ಡ ಬೊಮ್ಮಸಂದ್ರದ ಡೆಂಟಲ್ ಆಸ್ಪತ್ರೆಗೆ ಕರೆದೊಯ್ದ ಪತಿ
6 ಆಸ್ಪತ್ರೆ ಖಾಲಿ ಜಾಗದಲ್ಲಿ ಹೆರಿಗೆ ಮಾಡಿಸಿದ ಡೆಂಟಲ್ ಡಾಕ್ಟರ್
7 ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್