ಪಾಲ್ಘರ್: ಜಿಲ್ಲೆಯ ಹಳ್ಳಿಯೊಂದರಲ್ಲಿ ಸರಿಯಾದ ರಸ್ತೆ ಇಲ್ಲದ ಕಾರಣ ಗರ್ಭಿಣಿ ಬುಡಕಟ್ಟು ಮಹಿಳೆಯನ್ನು ತಾತ್ಕಾಲಿಕ ಸ್ಟ್ರೆಚರ್‌ನಲ್ಲಿ ಆಸ್ಪತ್ರೆಗೆ ಸಾಗಿಸುತ್ತಿದ್ದ ವೇಳೆ ಅವಳು ದಟ್ಟವಾದ ಕಾಡಿನಲ್ಲಿ ಮಧ್ಯದಲ್ಲಿ ಮಗುವಿಗೆ ಜನ್ಮ ನೀಡಿದಳು ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ಜವಾಹರ್ ತಾಲೂಕಿನ ಐನಾ ಗ್ರಾಮದ 21 ವರ್ಷದ ಮಹಿಳೆಗೆ ಶನಿವಾರ ಮಧ್ಯರಾತ್ರಿಯಲ್ಲಿ ಹೆರಿಗೆ ನೋವು ಕಾಣಿಸಿಕೊಂಡಿತು. ಹತ್ತಿರದ ಆಸ್ಪತ್ರೆಗೆ ಸರಿಯಾದ ರಸ್ತೆ ಸಂಪರ್ಕವಿಲ್ಲದ ಕಾರಣ, ಗ್ರಾಮಸ್ಥರು ಅವಳನ್ನು ‘ಧೋಲಿ’ (ತಾತ್ಕಾಲಿಕ ಸ್ಟ್ರೆಚರ್) ನಲ್ಲಿ ದಟ್ಟವಾದ ಕಾಡಿನ ಮೂಲಕ ಸಾಗಿಸಬೇಕಾಯಿತು. ಈ ವೇಳೆ ಮಹಿಳೆ ಕಾಡಿನ ಮಧ್ಯದಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ ಎಂದು ವೈದ್ಯಾಧಿಕಾರಿ ತಿಳಿಸಿದ್ದಾರೆ.
ರವಿವಾರ ಮುಂಜಾನೆ ತಾಯಿ ಮತ್ತು ಮಗುವನ್ನು ಜವಾಹರ್ ಪತಂಗಾಸ್ ಉಪ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಿಬ್ಬರೂ ಈಗ ಆರೋಗ್ಯವಾಗಿದ್ದಾರೆ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ|ರಾಮದಾಸ್ ಮರದ್ ತಿಳಿಸಿದ್ದಾರೆ.
ಕೆಲವರು ಮಹಿಳೆಯನ್ನು ಕಾಡಿನ ಮೂಲಕ ಹೊತ್ತೂಯ್ಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಗ್ರಾಮವು ದೂರದ ಪ್ರದೇಶದಲ್ಲಿರುವ ಕಾರಣ ಸರಿಯಾದ ರಸ್ತೆ ಸಂಪರ್ಕವನ್ನು ಹೊಂದಿಲ್ಲ. ಕಳೆದ ತಿಂಗಳು ಇಲ್ಲಿನ ಮೊಖಾಡ ತಾಲೂಕಿನ ಗ್ರಾಮವೊಂದರಲ್ಲಿ ಭಾರಿ ಮಳೆಯ ನಡುವೆಯೇ 26 ವರ್ಷದ ಗರ್ಭಿಣಿ ಆದಿವಾಸಿ ಮಹಿಳೆಯನ್ನು ತಾತ್ಕಾಲಿಕ ಸ್ಟ್ರೆಚರ್‌ನಲ್ಲಿ ಸಾಗಿಸಲಾಗಿತ್ತು. ವೈದ್ಯಕೀಯ ಕೇಂದ್ರವನ್ನು ತಲುಪಲು ವಿಳಂಬವಾದ ಪರಿಣಾಮವಾಗಿ ಆಕೆ ಹುಟ್ಟುವಾಗಲೇ ತನ್ನ ಅವಳಿ ಶಿಶುಗಳನ್ನು ಕಳೆದುಕೊಂಡಳು.
ಪಾಲ್ಘರ್ ಜಿಲ್ಲಾ ಪರಿಷತ್ ಅಧ್ಯಕ್ಷೆ ವೈದೇಹಿ ವಧನ್ ಸುದ್ದಿಗಾರರೊಂದಿಗೆ ಮಾತನಾಡಿ, ದೂರದ ಪ್ರದೇಶಗಳಲ್ಲಿನ ಹಳ್ಳಿಗಳಿಗೆ ಸರಿಯಾದ ರಸ್ತೆ ಸಂಪರ್ಕವಿಲ್ಲ ಇಂತಹ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸುವಂತೆ ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.