Advertisement

ಜರ್ಮನಿಯಿಂದ ತಾಯ್ನಾಡಿಗೆ ಮರಳಿದ ಗರ್ಭಿಣಿ

09:07 AM May 31, 2020 | Suhan S |

ಅಳ್ನಾವರ: ಕೋವಿಡ್ ಲಾಕ್‌ಡೌನ್‌ ಪರಿಸ್ಥಿತಿಯಲ್ಲಿ ಜರ್ಮನಿಯಲ್ಲಿ ಸಿಲುಕಿ ಹೆರಿಗೆಗಾಗಿ ಮರಳಿ ತವರಿಗೆ ಬರಲು ಹಾತೊರೆಯುತ್ತಿದ್ದ ಮಹಿಳೆಯನ್ನು ಸ್ವದೇಶಕ್ಕೆ ಕರೆತರುವಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ನೆರವಾಗಿದ್ದಾರೆ.

Advertisement

ಹುಬ್ಬಳ್ಳಿಯ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಮಾಜಿ ಅಧ್ಯಕ್ಷ, ಪಟ್ಟಣದ ನಿವಾಸಿ ಎಂ.ಸಿ. ಹಿರೇಮಠ ಅವರ ಪುತ್ರಿ ವಿಜೇತಾ ಶಶಾಂಕ ಅವರು ಮಗಳು ನವ್ಯಾ ಜೊತೆಗೆ ತಾಯ್ನಾಡಿಗೆ ಮರಳಿದ್ದಾರೆ. ಶನಿವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ವಿಮಾನದಲ್ಲಿ ದೆಹಲಿಗೆ ಬಂದಿದ್ದು, ಮಧ್ಯಾಹ್ನ 3 ಗಂಟೆ ಸುಮಾರಿಗೆ ಅದೇ ವಿಮಾನದಲ್ಲಿ ಬೆಂಗಳೂರು ತಲುಪಿದ್ದಾರೆ.

ಜೋಶಿ ನೆರವು: ವಿಜೇತಾ ಅವರು ತಮ್ಮ ಪುತ್ರಿಯೊಂದಿಗೆ ಭಾರತಕ್ಕೆ ಬರಲು ಮಾ. 20ರಂದು ವಿಮಾನ ಟಿಕೆಟ್‌ ಕಾಯ್ದಿರಿಸಿದ್ದರು. ಅಷ್ಟರಲ್ಲಿಯೇ ಕೋವಿಡ್ ಸೋಂಕು ವ್ಯಾಪಕವಾಗಿ ಹರಡುತ್ತಾ ಎಲ್ಲೆಡೆ ಲಾಕ್‌ ಡೌನ್‌ ಆಗಿ ಹೊರರಾಷ್ಟ್ರದಿಂದ ಭಾರತಕ್ಕೆ ಬರುವ ವಿಮಾನ ಸಂಚಾರ ರದ್ದು ಮಾಡಲಾಯಿತು. ಇದರಿಂದ ಅವರು ಜರ್ಮನಿಯಲ್ಲಿಯೇ ತಂಗಬೇಕಾಗಿತ್ತು. ಗರ್ಭಿಣಿಯರಿಗೆ 32 ವಾರ ಮುಗಿದ ನಂತರ ವಿಮಾನಯಾನ ನಿಷೇಧ ಹೇರಿದ್ದರಿಂದ ಮಗಳ ಹೆರಿಗೆಗಾಗಿ ಹಿರೇಮಠ ಕುಟುಂಬ ಸಾಕಷ್ಟು ಚಿಂತೆಗೀಡಾಗಿತ್ತು. ಆದಷ್ಟು ಬೇಗ ವಿಜೇತಾರನ್ನು ಕರೆತರುವ ಪ್ರಯತ್ನ ಮಾಡುತ್ತಿದ್ದರು. ಸಕಾಲದಲ್ಲಿ ಅವರ ಸಹಾಯಕ್ಕೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರು ಬಂದಿದ್ದು, ಹಿರೇಮಠ ಅವರು ದೂರವಾಣಿ ಕರೆ ಮಾಡಿ ಅಳಲು ತೋಡಿಕೊಂಡ ತಕ್ಷಣವೇ ಸಹಾಯಕ್ಕೆ ಮುಂದಾದರು.

ಹಾರಿತು ವಿಮಾನ: ಕೇಂದ್ರ ಸರ್ಕಾರ ತಯಾರಿಸಿದ್ದ ಅನಿವಾಸಿ ಭಾರತೀಯರನ್ನು ತವರಿಗೆ ಕರೆತರುವ ದೇಶಗಳ ಪಟ್ಟಿಯಲ್ಲಿ ಜರ್ಮನಿ ಹೆಸರು ಇರಲಿಲ್ಲ. ಆದರೆ, ಪ್ರಹ್ಲಾದ ಜೋಶಿ ಅವರ ಸೂಚನೆ ಮೇರೆಗೆ ಹಿರೇಮಠ ಅವರು ನಿಗದಿತ ನಮೂನೆಯ ಅರ್ಜಿ ತುಂಬಿ ಭಾರತ ಸರ್ಕಾರಕ್ಕೆ ಸಲ್ಲಿಸಿದ್ದರು. ಇದಾದ ಮರುದಿನವೇ ನಿಗದಿತ ನಮೂನೆಯಲ್ಲಿ ಜರ್ಮನಿಯಲ್ಲಿರುವ ಭಾರತೀಯ ದೂತಾವಾಸ ಕಚೇರಿಯವರು ಕೂಡಾ ಅರ್ಜಿ ಸ್ವೀಕರಿಸಿದಾಗ ತವರಿನತ್ತ ಮುಖ ಮಾಡಲು ವಿಜೇತಾರಿಗೆ ಹೊಸ ಆಶಾಭಾವನೆ ಮೂಡಿತು.

ಭಾರತೀಯ ದೂತಾವಾಸ ಕಚೇರಿ ಬಿಡುಗಡೆ ಮಾಡಿದ ಜರ್ಮನಿಯಿಂದ ಭಾರತಕ್ಕೆ ಬರುವ ಪ್ರಥಮ ವಿಮಾನಯಾನಿಗರ ಪಟ್ಟಿಯಲ್ಲಿ ವಿಜೇತಾ ಮತ್ತು ಅವರ ಪುತ್ರಿ ನವ್ಯಾ ಅವರ ಹೆಸರು ಇತ್ತು. ಕೇಂದ್ರ ಸಚಿವ ಜೋಶಿ ಅವರ ಪ್ರಯತ್ನದ ಫಲವಾಗಿ ಲಾಕ್‌ಡೌನ್‌ ಬಳಿಕ ಜರ್ಮನಿಯಿಂದ ಭಾರತಕ್ಕೆ ಪ್ರಥಮ ವಿಮಾನ ಹಾರಾಟವೂ ಸಾಧ್ಯವಾಗಿದೆ. ವಿಜೇತಾರ ಜೊತೆ ಮತ್ತೆ ನಾಲ್ಕೈದು ಗರ್ಭಿಣಿಯರು ಕೂಡಾ ತವರಿಗೆ ಮರಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next