Advertisement
ನಿಖಿತಾಳ ಹೆರಿಗೆ ನಂತರ ತೀವ್ರ ರಕ್ತಸ್ರಾವವಾಗಿತ್ತು. ವೈದ್ಯರ ಸಲಹೆಯಂತೆ ಸುಮಾರು 16 ಬಾಟಲಿ ರಕ್ತ ತಂದು ಕೊಟ್ಟಿದ್ದೆವು. ಆದರೆ, ತಡರಾತ್ರಿ 3:00 ಗಂಟೆ ಸುಮಾರಿಗೆ ಬಾಣಂತಿ ನಿಖೀತಾ ಮೃತಪಟ್ಟಿದ್ದಾಳೆಂದು ಹೇಳಿದರು. ನಮ್ಮ ತೀವ್ರ ಆಕ್ಷೇಪದ ನಂತರ ಇನ್ನು ಜೀವಂತವಾಗಿದ್ದಾಳೆ. ತುರ್ತು ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡುವುದಾಗಿ ಹೇಳಿದರಾದರೂ, ಬೆಳಗಿನ ಜಾವ 4:00ಗಂಟೆಗೆ ಮೃತಪಟ್ಟಿದ್ದಾಗಿ ಹೇಳಿದರು. ವೈದ್ಯರ ನಿರ್ಲಕ್ಷ್ಯದಿಂದ ಈ ರೀತಿ ಆಗಿದೆ ಎಂಬುದು ನಿಖಿತಾ ಕುಟುಂಬಸ್ಥರ ಆರೋಪ. ಮೃತಳ ಪತಿ ಭರತ ಹಾಗೂ ತಂದೆ-ತಾಯಿ, ಸಹೋದರಿ ಸೇರಿದಂತೆ ಕುಟುಂಬಸ್ಥರ ಆಕ್ರಂದನ ಮನ ಕಲಕುವಂತ್ತಿತ್ತು. ಉಪನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿ ಪರಿಸ್ಥಿತಿ ತಿಳಿಗೊಳಿಸಿದರು.
ಬಾಣಂತಿ ಸಾವಿಗೆ ನಾವು ಕಾರಣವಲ್ಲ. ಅವರನ್ನು ಉಳಿಸಿಕೊಳ್ಳಲು ಬಹಳ ಶ್ರಮಿಸಿದೆವು. ಆದರೆ ಫಲಕಾರಿಯಾಗಲಿಲ್ಲ. ನಿಖೀತಾ ದೇಹ ಚಿಕಿತ್ಸೆಗೆ ಸ್ಪಂದಿಸಲಿಲ್ಲವೆಂದು ಸಿಟಿ ಕ್ಲಿನಿಕ್ ಆಸ್ಪತ್ರೆ ವೈದ್ಯೆ ಡಾ| ವಿದ್ಯಾ ಜೋಶಿ ಸ್ಪಷ್ಟಪಡಿಸಿದರು. ಅತಿಯಾದ ರಕ್ತಸ್ರಾವ ಉಂಟಾಗಿ ರಕ್ತದೊತ್ತಡ ಕುಸಿತವಾಯಿತು. ಸುಮಾರು 14 ಬಾಟಲ… ರಕ್ತ ಪೂರೈಸಿದರೂ ಬಿಪಿ ಕ್ಷೀಣಿಸುವುದು ನಿಲ್ಲಲಿಲ್ಲ. ಕೊನೆಗೆ ಗರ್ಭಕೋಶ ತೆಗೆದ ಮೇಲೂ ರಕ್ತಸ್ರಾವ ನಿಲ್ಲುತ್ತದೆ ಎಂದು ಭಾವಿಸಿದೆವು. ಆದರೂ ರಕ್ತಸ್ರಾವ ನಿಲ್ಲಲಿಲ್ಲ. ಬೆಳಿಗ್ಗೆ 9:10 ಗಂಟೆ ಸುಮಾರಿಗೆ ಮೃತಪಟ್ಟಿದ್ದಾರೆ. ನಿಖಿತಾಳಿಗೆ ಹೃದಯ ಸಂಬಂಧಿ ಸೇರಿದಂತೆ ದೈಹಿಕ ಸಮಸ್ಯೆ ಇರಲಿಲ್ಲ. ಸಂಪೂರ್ಣ ಆರೋಗ್ಯವಾಗಿದ್ದರು. ಹೆರಿಗೆಯಾದ ನಂತರ ಬಿಪಿ ಇಳಿತದಿಂದ ಸಮಸ್ಯೆಯಾಗಿದೆ. ಈ ಕುರಿತು ಪ್ರತಿ ಹಂತದಲ್ಲೂ ಚಿಕಿತ್ಸೆಗಳ ಬಗ್ಗೆ ಸಂಬಂಧಿಗಳನ್ನು ಐಸಿಯುಗೆ ಕರೆಯಿಸಿ ಸಂಪೂರ್ಣ ವಿವರ ನೀಡಲಾಗಿತ್ತು. ಪ್ರತಿ ಹಂತದ ಚಿಕಿತ್ಸೆ ವಿಧಾನಗಳ ವಿಡಿಯೋ ರಿಕಾರ್ಡಿಂಗ್ ದಾಖಲೆ ನಮ್ಮ ಬಳಿಯಿದೆ. ಅವರ ಒಪ್ಪಿಗೆ ಮೇರೆಗೆ ಚಿಕಿತ್ಸೆ ಮುಂದುವರಿಸಲಾಗಿತ್ತು. ಇಂಥ ಪ್ರಕರಣಗಳು ಲಕ್ಷಕ್ಕೆ 200 ಜನರಲ್ಲಿ ಕಂಡು ಬರುತ್ತದೆ. ಇವರನ್ನು ಉಳಿಸಿಕೊಳ್ಳಲಾಗಲಿಲ್ಲ ಎಂಬ ನೋವು ನಮಗಿದೆ. ಶವಪರೀಕ್ಷೆಯ ವರದಿ ನಂತರವೇ ಇದೆಲ್ಲ ಸ್ಪಷ್ಟವಾಗಲಿದೆ ಎಂದರು.