Advertisement
ಹಕೀಮಾ ಅವರ ಸಾವಿಗೆ ಪುತ್ತೂರು ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಎಸ್ ಡಿಪಿಐ ಹಾಗೂ ಪಿಎಫ್‌ಐ ನೂರಾರು ಕಾರ್ಯಕರ್ತರು ಪ್ರತಿಭಟನೆಗಿಳಿದರು. ಈ ಆಸ್ಪತ್ರೆಯಲ್ಲಿ ಪದೇ ಪದೇ ಇಂತಹ ಘಟನೆಗಳು ನಡೆಯುತ್ತಿದ್ದು, 15 ದಿನಗಳ ಹಿಂದೆಯಷ್ಟೇ ಕೆದಂಬಾಡಿ ಗ್ರಾಮದ ಮಹಿಳೆಯ ಸಾವು ಸಂಭವಿಸಿದೆ. ಇದೀಗ ಹಕೀಮಾ ಅವರು ವೈದ್ಯರ ನಿರ್ಲಕ್ಷ್ಯಕ್ಕೆ ಬಲಿಯಾಗಿದ್ದಾರೆ ಎಂದರು. ಪ್ರತಿಭಟನಕಾರರು ಆಸ್ಪತ್ರೆ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯನ್ನುದ್ದೇಶಿಸಿ ಎಸ್‌ಡಿಪಿಐ ಜಿಲ್ಲಾ ಕಾರ್ಯದರ್ಶಿ ಇಕ್ಬಾಲ್ ಬೆಳ್ಳಾರೆ ಮಾತನಾಡಿ, ಮಹಿಳೆಯ ಸಾವು ವೈದ್ಯರ ನಿರ್ಲಕ್ಷ್ಯದಿಂದಾಗಿ ಸಂಭವಿಸಿದೆ. ಇದರ ಹಿಂದೆ ಷಡ್ಯಂತ್ರವಿದೆ ಎಂದು ಆರೋಪಿಸಿದರು. ಮಹಿಳೆಯ ಸಾವಿಗೆ ಕಾರಣವಾದ ವೈದ್ಯ ರನ್ನು ವಜಾಗೊಳಿಸಬೇಕು ಮತ್ತು ವೈದ್ಯ ಪದವಿಯನ್ನು ಹಿಂಪಡೆಯಬೇಕು. ಯಾವುದೇ ಜಾತಿ, ಧರ್ಮ, ಪಂಗಡದವರಿಗೆ ಇಂತಹ ಅನ್ಯಾಯ ಆಗಬಾರದು. ಈ ವಿಚಾರದಲ್ಲಿ ಜಿಲ್ಲಾ ಆರೋಗ್ಯ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಮಧ್ಯೆ ಪ್ರವೇಶಿಸಬೇಕು ಎಂದು ಆಗ್ರಹಿಸಿದರು. ಪೊಲೀಸರಿಂದ ತಡೆ
ಆಸ್ಪತ್ರೆ ಆವರಣಕ್ಕೆ ನುಗ್ಗಲು ಯತ್ನಿಸಿದ ಪ್ರತಿಭಟನಕಾರರನ್ನು ಪೊಲೀಸರು ತಡೆದರು. ಪುತ್ತೂರು ನಗರ ಠಾಣೆ ಪಿಎಸ್‌ಐ ಅಜೇಯ್ ಕುಮಾರ್ ಪ್ರತಿಭಟನಕಾರರನ್ನು ಸಮಾಧಾನಪಡಿಸಿ, ಆಸ್ಪತ್ರೆಯ ಆಡಳಿತ ನಿರ್ದೇಶಕರು ಸ್ಪಷ್ಟನೆ ನೀಡುತ್ತಾರೆ. ವೈದ್ಯರ ನಿರ್ಲಕ್ಷ್ಯದಿಂದಲೇ ಸಾವು ಸಂಭವಿಸಿದೆ ಎಂದಾದರೆ ಕ್ರಮ ಕೈಗೊಳ್ಳುತ್ತೇವೆ ಎಂದರು.
Related Articles
Advertisement
ಜಿಲ್ಲಾ ಸರ್ವ ಕಾಲೇಜು ಒಕ್ಕೂಟದ ಕಾರ್ಯದರ್ಶಿ ಮಜೀದ್ ಕೊಡಿಪ್ಪಾಡಿ, ಪಿಎಫ್‌ಐ ಜಿಲ್ಲಾಧ್ಯಕ್ಷ ಅಬೂಬಕ್ಕರ್ ರಿಜ್ವಾನ್, ಎಸ್‌ಡಿಪಿಐ ಜಿಲ್ಲಾ ಸಮಿತಿಯ ಸದಸ್ಯ ಜಾಬೀರ್ ಅರಿಯಡ್ಕ, ಸುಳ್ಯ ಕ್ಷೇತ್ರ ಸಮಿತಿಯ ಅಧ್ಯಕ್ಷ ರಫೀಕ್ ಎಂ.ಎ., ಪ್ರಮುಖರಾದ ಹಮೀದ್, ಅಶ್ರಫ್ ಬಾವಾ, ಬಶೀರ್ ಕೂರ್ನಡ್ಕ ಇದ್ದರು.
ವೈದ್ಯರ ಸ್ಪಷ್ಟನೆ ಬನ್ನೂರಿನ ಮಹಿಳೆ ಎರಡನೇ ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದು, ಪ್ರಸೂತಿ ತಜ್ಞ ಡಾ| ಅನಿಲ್ ಅವರು ಸಾಮಾನ್ಯ ಹೆರಿಗೆ ಆಗುತ್ತದೆ ಎಂದು ತಿಳಿಸಿದ್ದರು. ಆದರೆ ಹೆರಿಗೆ ತಡವಾಗಿತ್ತು. ಹಸುಳೆ 4 ಕೆ.ಜಿ.ಗಿಂತ ಜಾಸ್ತಿ ತೂಕ ಹೊಂದಿದ್ದು, ಗಾತ್ರವೂ ಹೆಚ್ಚಿತ್ತು. ಹೆರಿಗೆಯ ಬಳಿಕ ರಕ್ತಸ್ರಾವ ನಿಲ್ಲದ ಹಾಗೂ ಗರ್ಭಕೋಶ ತಾನಾಗಿ ಸಣ್ಣದಾಗದ ಕಾರಣ, ರಕ್ತ ನೀಡಿ ರಕ್ತಸ್ರಾವ ತಡೆಯುವ ಪ್ರಯತ್ನವನ್ನು ಮಾಡಲಾಗಿತ್ತು. ಅದು ಫಲಿಸದ ಕಾರಣ ಅನಸ್ತೇಶಿಯಾ ನೀಡಿ ಗರ್ಭಕೋಶ ತೆರವುಗೊಳಿಸಿ ರಕ್ತಸ್ರಾವ ತಡೆಯಲಾಗಿತ್ತು. ರಾತ್ರಿ ವೇಳೆ ಉಸಿರಾಟದ ತೊಂದರೆ ಉಂಟಾದ ಕಾರಣ ಡಾ| ನಝೀರ್ ಅಹ್ಮದ್ ಅವರ ಸಲಹೆ ಪಡೆದು ಚಿಕಿತ್ಸೆ ಮುಂದುವರಿಸಿದರೂ ರಕ್ತದೊತ್ತಡ ಯಥಾಸ್ಥಿತಿಗೆ ಬಾರದ ಹಿನ್ನೆಲೆಯಲ್ಲಿ ಮಂಗಳೂರಿನ ಆಸ್ಪತ್ರೆಗೆ ಕೊಂಡೊಯ್ಯುವ ಸಲಹೆ ಕೊಟ್ಟಿದ್ದೇವೆ. ಅಪಾಯವಿದೆ ಎಂದು ಎಚ್ಚರಿಸಿದ್ದೇವೆ. ತಾವೂ ಸಹಿತ ಮೂವರು ವೈದ್ಯರೂ ಹೋಗಿದ್ದೇವೆ. ಚಿಕಿತ್ಸೆ ವಿಚಾರದಲ್ಲಿ ವೈದ್ಯರ ನಿರ್ಲಕ್ಷ್ಯ ಆಗಿಲ್ಲ ಎಂದು ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ| ಭಾಸ್ಕರ್ ಸ್ಪಷ್ಟನೆ ನೀಡಿದರು.