(ಎಕ್ಟೋಪಿಕ್ ಪ್ರಗ್ನೆನ್ಸಿ) ಎಂದರೇನು?
ಫಲಿತವಾದ ಅಂಡವು ನಿಗದಿತವಾದಂತೆ ಗರ್ಭಕೋಶದ ಒಳಭಾಗದಲ್ಲಿ ಬೆಳವಣಿಗೆಯಾಗದೆ, ಗರ್ಭಕೋಶದ ಹೊರಗೆ ಬೆಳವಣಿಗೆಯಾಗುವುದು.
Advertisement
2. ಸಹಜ ಗರ್ಭಧಾರಣೆಗಿಂತ ಗರ್ಭಕೋಶದ ಹೊರಗೆ ಗರ್ಭಧಾರಣೆ ಹೇಗೆ ಭಿನ್ನ?
ಸಹಜ ಗರ್ಭಧಾರಣೆಯಲ್ಲಿ ಮಹಿಳೆಯ ಅಂಡವು ಪುರುಷನ ವೀರ್ಯಾಣುವಿನೊಂದಿಗೆ ಸಂಯೋಗ ಹೊಂದಿ ಅಂಡವು ಫಲಿತವಾಗಿ ಭ್ರೂಣವು ರೂಪುಗೊಳ್ಳುತ್ತದೆ; ಈ ಭ್ರೂಣವು ಸಾಮಾನ್ಯವಾಗಿ ಗರ್ಭಕೋಶದ ಒಳಭಿತ್ತಿಯಾಗಿರುವ ಎಂಡೊಮೆಟ್ರಿಯಾಸಿಸ್‌ಗೆ ಅಂಟಿಕೊಂಡು ಬೆಳವಣಿಗೆ ಕಾಣುತ್ತದೆ.
ಆದರೆ ಎಕ್ಟೋಪಿಕ್ ಗರ್ಭಧಾರಣೆಯಲ್ಲಿ ಭ್ರೂಣವು ಗರ್ಭಕೋಶದ ಒಳಭಿತ್ತಿಯಲ್ಲಲ್ಲದೆ ಹೊರಗೆ ಎಲ್ಲಾದರೂ ಅಂಟಿಕೊಂಡು ಬೆಳೆಯುತ್ತದೆ.
Related Articles
Advertisement
3. ಎಕ್ಟೋಪಿಕ್ ಗರ್ಭಧಾರಣೆ ಏಕೆ ಅಪಾಯಕಾರಿ?ಎಕ್ಟೋಪಿಕ್ ಪ್ರಗ್ನೆನ್ಸಿಯು ಸಹಜವಾಗಿ ಬೆಳವಣಿಗೆಯಾಗುವುದು ಅಸಾಧ್ಯ. ಎಕ್ಟೋಪಿಕ್ ಗರ್ಭಧಾರಣೆಯಲ್ಲಿ ಭ್ರೂಣವು ಅಂಟಿಕೊಂಡ ಅಂಗಕ್ಕೆ ಹಾನಿಯಾಗುತ್ತದೆ. ಇದರಿಂದಾಗಿ ತೀವ್ರತರಹದ ಆಂತರಿಕ ರಕ್ತಸ್ರಾವ ಉಂಟಾಗಬಹುದು, ಆಘಾತವುಂಟಾಗಬಹುದು ಮತ್ತು ಅಪರೂಪಕ್ಕೆ ಮಹಿಳೆಯ ಸಾವಿಗೂ ಕಾರಣವಾಗಬಹುದು. ಆದ್ದರಿಂದ ಎಕ್ಟೋಪಿಕ್ ಗರ್ಭಧಾರಣೆಯನ್ನು ಆದಷ್ಟು ಬೇಗನೆ ಪತ್ತೆಹಚ್ಚಿ ಚಿಕಿತ್ಸೆ ನೀಡುವುದು ಬಹಳ ಮುಖ್ಯ. 4. ಯಾರಿಗೆ ಎಕ್ಟೋಪಿಕ್ ಗರ್ಭಧಾರಣೆಯಾಗುವಅಪಾಯವಿರುತ್ತದೆ? ಬಲವಾದ ಅಪಾಯಾಂಶಗಳು
– ಹಿಂದೆ ಉಂಟಾದ ಸೋಂಕುಗಳು/ ಶಸ್ತ್ರಚಿಕಿತ್ಸೆ/ ಜನನದ ಬಳಿಕ ಉಂಟಾದ ಅಸಹಜ ಬೆಳವಣಿಗೆಗಳಿಂದಾಗಿ ಫಾಲೊಪಿಯನ್ ಕೊಳವೆಯಲ್ಲಿ ಅಸಹಜತೆಗಳು.
– ಹಿಂದೆ ಎಕ್ಟೋಪಿಕ್ ಗರ್ಭಧಾರಣೆ ಆಗಿರುವುದು.ಮಧ್ಯಮ ತೀವ್ರತೆಯ ಅಪಾಯಾಂಶಗಳು
– ಹಿಂದೆ ಜನನಾಂಗ ಸೋಂಕಿಗೆ ತುತ್ತಾಗಿರುವುದು.
– ಬಂಜೆತನ
– ಒಬ್ಬರಿಗಿಂತ ಹೆಚ್ಚು ಲೈಂಗಿಕ ಸಂಗಾತಿಗಳಿರುವುದು.ಇತರ ಅಪಾಯಾಂಶಗಳು
– ಐವಿಎಫ್ ಚಿಕಿತ್ಸೆ (ಇನ್‌ವಿಟ್ರೊ ಫರ್ಟಿ ಲೈಸೇಶನ್ – ಕೃತಕ ಗರ್ಭಧಾರಣೆ ಚಿಕಿತ್ಸೆ.
– ಟ್ಯೂಬಲ್ ಲಿಗೇಶನ್ ಎಂಬ ಸಂತಾನಹರಣ ಶಸ್ತ್ರಚಿಕಿತ್ಸೆ ಆಗಿರುವುದು.
– ಗರ್ಭಕೋಶದ ಒಳಗೆ ಅಳವಡಿಸಲಾಗುವ ಗರ್ಭನಿರೋಧಕ ಸಾಧನಗಳು. 5. ಎಕ್ಟೋಪಿಕ್ ಗರ್ಭಧಾರಣೆಯ
ಲಕ್ಷಣಗಳೇನು?
ಸಾಮಾನ್ಯವಾಗಿ, ಗರ್ಭಧಾರಣೆ ಆರಂಭಿಕ ಹಂತದಲ್ಲಿಯೇ, ಕೆಲವೊಮ್ಮೆ ಮಹಿಳೆಗೆ ತಾನು ಗರ್ಭಿಣಿ ಎಂಬುದು ಅರಿವಿಗೆ ಬರುವುದಕ್ಕಿಂತ ಮುನ್ನವೇ ಇದರ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ತುಂಬ ಸಾಮಾನ್ಯವಾದ ಲಕ್ಷಣಗಳು ಎಂದರೆ,
– ಹೊಟ್ಟೆಯ ಭಾಗದಲ್ಲಿ ನೋವು.
– ಯೋನಿಯಿಂದ ರಕ್ತಸ್ರಾವ, ಕೆಲವೊಮ್ಮೆ ತೀರಾ ಸೂಕ್ಷ್ಮವಾಗಿ.
– ಗರ್ಭಧಾರಣೆಯ ಲಕ್ಷಣಗಳು (ಸ್ತನಗಳು ಮೃದುವಾಗುವುದು, ಪದೇಪದೇ ಮೂತ್ರಶಂಕೆ ಅಥವಾ ಹೊಟ್ಟೆ ತೊಳೆಸುವುದು).
ಆದರೆ, ಕೆಲವು ಮಹಿಳೆಯರಿಗೆ ಪಾಲೊಪಿಯನ್ ಕೊಳವೆಗೆ ಗಾಯ ಉಂಟಾಗುವ ವರೆಗೆ ಯಾವುದೇ ಲಕ್ಷಣಗಳು ಅನುಭವಕ್ಕೆ ಬರುವುದಿಲ್ಲ. ಇದಾದ ಬಳಿಕ ಮಹಿಳೆಗೆ ತೀವ್ರವಾದ ನೋವು, ಯೋನಿಯಿಂದ ರಕ್ತಸ್ರಾವ, ತಲೆ ಹಗುರವಾದಂತೆ ಅನಿಸುವುದು, ಬಳಿಕ ರಕ್ತದೊತ್ತಡ ಇಳಿಕೆ, ಮೂರ್ಛೆ ತಪ್ಪುವುದು ಮತ್ತು ಆಘಾತಗಳು ಉಂಟಾಗುತ್ತವೆ. 6. ನನಗೆ ಎಕ್ಟೋಪಿಕ್ ಗರ್ಭಧಾರಣೆ
ಆಗಿದೆಯೇ ಎಂದು ತಿಳಿಯುವುದು ಹೇಗೆ?
ಎಕ್ಟೋಪಿಕ್ ಗರ್ಭಧಾರಣೆಯನ್ನು ತಿಳಿಯಲು ಎರಡು ಪರೀಕ್ಷೆಗಳಿವೆ.
1. ಅಲ್ಟ್ರಾಸೌಂಡ್: ಭ್ರೂಣದ ಹೃದಯಬಡಿತದ ಚಿತ್ರಣ ಪಡೆಯಲು ಅಥವಾ ಗರ್ಭಕೋಶದ ಹೊರಗೆ ಭ್ರೂಣವು ಇದೆ ಎಂಬುದರ ಚಿತ್ರಣ ಪಡೆಯಲು ಟ್ರಾನ್ಸ್‌ವೆಜೈನಲ್ ಅಲ್ಟ್ರಾಸೌಂಡ್ ನಡೆಸಲಾಗುತ್ತದೆ.
2. ಸೀರಂ ಬೀಟಾ ಎಚ್‌ಸಿಜಿ: ಇದೊಂದು ರಕ್ತಪರೀಕ್ಷೆಯಾಗಿದ್ದು, ಗರ್ಭಧಾರಣೆಯ ಹಾರ್ಮೋನ್ ಆಗಿರುವ ಹ್ಯೂಮನ್ ಕೊರಿಯಾನಿಕ್ ಗೊನಾಡೊಟ್ರೊಪಿನ್ ಅನ್ನು ಅಳೆಯುತ್ತದೆ. ಬೆಳೆಯುತ್ತಿರುವ ಭ್ರೂಣ/ ತಾಯಿಮಾಸುವಿನಿಂದ ಇದು ಸ್ರಾವವಾಗುತ್ತದೆ. ರಕ್ತದಲ್ಲಿರುವ ಎಚ್‌ಸಿಜಿ ಮಟ್ಟವನ್ನು ಅಳೆಯುವುದರ ಮೂಲಕ ಗರ್ಭಧಾರಣೆಯನ್ನು ಖಚಿತಪಡಿಸಲಾಗುತ್ತದೆ ಮತ್ತು ಗರ್ಭದ ಬೆಳವಣಿಗೆಯ ಮೇಲೆ ನಿಗಾ ವಹಿಸಲಾಗುತ್ತದೆ. 7. ಎಕ್ಟೋಪಿಕ್ ಗರ್ಭಧಾರಣೆಗೆ ಚಿಕಿತ್ಸೆಗಳೇನು?
ತಪಾಸಣೆ ಮತ್ತು ಪರೀಕ್ಷೆಗಳ ಮೂಲಕ ಎಕ್ಟೋಪಿಕ್ ಗರ್ಭಧಾರಣೆಯನ್ನು ಖಚಿತಪಡಿಸಿಕೊಂಡ ಕೂಡಲೇ ಚಿಕಿತ್ಸೆಯನ್ನು ಆರಂಭಿಸಲಾಗುತ್ತದೆ, ಇದರಲ್ಲಿ ಔಷಧ ಚಿಕಿತ್ಸೆ ಅಥವಾ ಶಸ್ತ್ರಚಿಕಿತ್ಸೆ ಸೇರಿರುತ್ತದೆ. – ವೈದ್ಯಕೀಯ ನಿಭಾವಣೆ
ಭ್ರೂಣದ ಬೆಳವಣಿಗೆಯನ್ನು ಸ್ಥಗಿತಗೊಳಿಸುವ ಮೆಥೊಟ್ರೆಕ್ಸೇಟ್ ಎಂಬ ಔಷಧವನ್ನು ಸ್ನಾಯುವಿನ ಮೂಲಕ ನೀಡುವ ಇಂಜೆಕ್ಷನ್ ಆಗಿ ನೀಡಲಾಗುತ್ತದೆ. ಎಕ್ಟೋಪಿಕ್ ಗರ್ಭಧಾರಣೆ ಆಗಿದ್ದು, ಕನಿಷ್ಠ ಲಕ್ಷಣ (ಉದಾ.: ನೋವು)ಗಳನ್ನು ಹೊಂದಿರುವ ಹಾಗೂ ಎಚ್‌ಸಿಜಿ ಮಟ್ಟ ಮತ್ತು ಅಲ್ಟ್ರಾಸೌಂಡ್ ಪರೀಕ್ಷೆಯ ಫಲಿತಾಂಶಗಳು ನಿರ್ದಿಷ್ಟ ಮಿತಿಗಳಲ್ಲಿ ಇರುವ ಮಹಿಳೆಯರಿಗೆ ಈ ಚಿಕಿತ್ಸೆಯನ್ನು ಒದಗಿಸಲಾಗುತ್ತದೆ.
-ಮೆಥೊಟ್ರೆಕ್ಸೇಟ್ ಔಷಧ ಚಿಕಿತ್ಸೆಯು ಯಶಸ್ವಿಯಾಗದೆ ಇದ್ದಲ್ಲಿ ಗರ್ಭನಾಳಕ್ಕೆ ಗಾಯವಾಗಬಹುದು. ಸೂಕ್ಷ್ಮವಾಗಿ ನಿಗಾ ಇರಿಸುವುದು ಮತ್ತು ಅಗತ್ಯವಾದರೆ ಶಸ್ತ್ರಚಿಕಿತ್ಸೆ ನಡೆಸುವ ಮೂಲಕ ಈ ಕ್ಲಿಷ್ಟಕರ ಪರಿಸ್ಥಿತಿಯನ್ನು ದೂರಮಾಡಬಹುದು. – ಶಸ್ತ್ರಚಿಕಿತ್ಸೆಯ ಮೂಲಕ ನಿಭಾವಣೆ
ಶಸ್ತ್ರಚಿಕಿತ್ಸೆ ಅಗತ್ಯವಾಗಿರುವ ಲಕ್ಷಣಗಳಲ್ಲಿ ಈ ಕೆಳಕಂಡವುಗಳು ಒಳಗೊಂಡಿರುತ್ತವೆ:
-ಎಕ್ಟೋಪಿಕ್ ಗರ್ಭಧಾರಣೆಯಿಂದ ಗಾಯವಾಗಿರುವುದು; ಇಂಥ ಪ್ರಕರಣಗಳಲ್ಲಿ ಶಸ್ತ್ರಚಿಕಿತ್ಸೆಯನ್ನು ಕೂಡಲೇ ನಡೆಸಬೇಕಾಗಿರುತ್ತದೆ. ಅದರಲ್ಲೂ ಮಹಿಳೆಯ ರಕ್ತದೊತ್ತಡ ಕುಸಿದಿದ್ದು, ಆರೋಗ್ಯ ಸ್ಥಿತಿ ಅಸ್ಥಿರವಾಗಿದ್ದಲ್ಲಿ ತತ್‌ಕ್ಷಣ ನಡೆಸಬೇಕಿರುತ್ತದೆ.
– ಮೆಥೊಟ್ರೆಕ್ಸೇಟ್ ಚಿಕಿತ್ಸೆಯ ಬಳಿಕ ನಿಗಾವಣೆ ಅಸಾಧ್ಯವಾಗಿರುವ ಅಥವಾ ಇಚ್ಛೆಯಿಲ್ಲದ ಮಹಿಳೆಗೆ ಶಸ್ತ್ರಚಿಕಿತ್ಸೆ ನಡೆಸಬೇಕಾಗುತ್ತದೆ. 8. ಯಾವ ಶಸ್ತ್ರಚಿಕಿತ್ಸೆಯನ್ನು ನಡೆಸಲಾಗುತ್ತದೆ?
ಶಸ್ತ್ರಚಿಕಿತ್ಸೆಯನ್ನು ಲ್ಯಾಪರೊಸ್ಕೊಪಿಕ್ ವಿಧಾನದಲ್ಲಿ ಅಥವಾ ಹೊಟ್ಟೆಯನ್ನು ತೆರೆದು ನಡೆಸಲಾಗುತ್ತದೆ.
– ಲ್ಯಾಪರೊಸ್ಕೊಪಿ ವಿಧಾನದಲ್ಲಿ ಸಣ್ಣ ರಂಧ್ರದ ಮೂಲಕ ಉಪಕರಣಗಳನ್ನು ತೂರಿಸಿ ಶಸ್ತ್ರಚಿಕಿತ್ಸೆ ನಡೆಸಲಾಗುತ್ತದೆ. ಈ ಉಪಕರಣಗಳ ಮೂಲಕ ಎಕ್ಟೋಪಿಕ್ ಗರ್ಭಧಾರಣೆಯನ್ನು ಕಂಪ್ಯೂಟರ್ ಪರದೆಯ ಮೇಲೆ ನೋಡಲು ಮತ್ತು ತೆಗೆದುಹಾಕಲು ಸಾಧ್ಯವಾಗುತ್ತದೆ. ಹೊಟ್ಟೆಯಲ್ಲಿ ನಡೆಸುವ ತೆರೆದ ಶಸ್ತ್ರಚಿಕಿತ್ಸೆಗೆ ಹೋಲಿಸಿದರೆ ಲ್ಯಾಪರೊಸ್ಕೊಪಿ ವಿಧಾನದಲ್ಲಿ ನೋವು ಕಡಿಮೆ ಇರುತ್ತದೆ ಮತ್ತು ಮಹಿಳೆ ಬೇಗನೆ ಚೇತರಿಸಿಕೊಳ್ಳುತ್ತಾರೆ.
– ಹೊಟ್ಟೆಯ ತೆರೆದ ಶಸ್ತ್ರಚಿಕಿತ್ಸೆಯಲ್ಲಿ ಶಸ್ತ್ರಚಿಕಿತ್ಸಕರು ಎಕ್ಟೋಪಿಕ್ ಗರ್ಭಧಾರಣೆ ಹೊಂದಿರುವ ಮಹಿಳೆಯ ಹೊಟ್ಟೆಯನ್ನು ಶಸ್ತ್ರಚಿಕಿತ್ಸೆಯ ಮೂಲಕ ತೆರೆಯುತ್ತಾರೆ. ಇದರ ಮೂಲಕ ಎಕ್ಟೋಪಿಕ್ ಗರ್ಭಧಾರಣೆಯನ್ನು ಪ್ರತ್ಯಕ್ಷವಾಗಿ ವೀಕ್ಷಿಸಿ ತೆಗೆದುಹಾಕುತ್ತಾರೆ. 9. ಫಾಲೊಪಿಯನ್ ಕೊಳವೆಯನ್ನು ತೆಗೆದುಹಾಕಲಾಗುತ್ತದೆಯೇ?
– ಶಸ್ತ್ರಚಿಕಿತ್ಸೆಯ ವೇಳೆ ಕೆಲವೊಮ್ಮೆ ಎಕ್ಟೋಪಿಕ್ ಗರ್ಭಧಾರಣೆಯನ್ನು ತೆಗೆದುಹಾಕಿ, ಸಾಲ್ಪಿಂಗೆಕ್ಟೊಮಿ ಎಂಬ ಚಿಕಿತ್ಸೆಯ ಮೂಲಕ ಫಾಲೊಪಿಯನ್ ಕೊಳವೆಯನ್ನು ದುರಸ್ತಿಪಡಿಸುವುದು ಸಾಧ್ಯವಾಗುತ್ತದೆ.
– ಇತರ ಪ್ರಕರಣಗಳಲ್ಲಿ ಫಾಲೊಪಿಯನ್ ಕೊಳವೆಯನ್ನು ತೆಗೆದುಹಾಕುವುದು ಅಗತ್ಯವಾಗುತ್ತದೆ (ಸಾಲ್ಪಿಂಗೆಕ್ಟೊಮಿ). ಅನಿಯಂತ್ರಿತ ರಕ್ತಸ್ರಾವ, ಅದೇ ಕೊಳವೆಯನ್ನು ಎಕ್ಟೊಪಿಕ್ ಗರ್ಭಧಾರಣೆ ಮರುಕಳಿಸಿರುವುದು, ಕೊಳವೆಗೆ ತೀವ್ರತರಹದ ಹಾನಿ ಆಗಿರುವುದು ಅಥವಾ ಟ್ಯೂಬಲ್ ಗರ್ಭಧಾರಣೆ ದೊಡ್ಡದಾಗಿರುವಂತಹ ಪ್ರಕರಣಗಳಲ್ಲಿ ಹೀಗೆ ಮಾಡುವುದು ಅನಿವಾರ್ಯವಾಗುತ್ತದೆ.
ಸಂತಾನವೃದ್ಧಿಯನ್ನು ಸಂಪೂರ್ಣಗೊಳಿಸಿರುವ ಮಹಿಳೆಯರು ಇದನ್ನು ಸ್ವ ಇಚ್ಛೆಯಿಂದ ಆಯ್ಕೆ ಮಾಡಲೂ ಬಹುದು. 10. ಒಮ್ಮೆ ಎಕ್ಟೋಪಿಕ್ ಗರ್ಭಧಾರಣೆಯನ್ನು
ಹೊಂದಿದ ಮಹಿಳೆಯಲ್ಲಿ ಮತ್ತೂಮ್ಮೆ ಸಹಜ
ಗರ್ಭಧಾರಣೆಯ ಸಾಧ್ಯತೆ ಎಷ್ಟಿರುತ್ತದೆ?
ಉಳಿದುಕೊಂಡಿರುವ ಇನ್ನೊಂದು ಫಾಲೊಪಿಯನ್ ಕೊಳವೆಯು ಸಹಜವಾಗಿದ್ದಲ್ಲಿ ಸಹಜ ಗರ್ಭಧಾರಣೆಯ ಸಾಧ್ಯತೆಗಳು ಉತ್ತಮವಾಗಿರುತ್ತವೆ. -ಡಾ| ಸಮೀನಾ ಎಚ್.
ಕನ್ಸಲ್ಟಂಟ್ ಒಬಿಜಿ,
ಕೆಎಂಸಿ ಆಸ್ಪತ್ರೆ, ಮಂಗಳೂರು