Advertisement

ಇಷ್ಟದ ಕಲಿಕೆ, ಸ್ವಪ್ರಯತ್ನ, ದೇವರ ಅನುಗ್ರಹ ಯಶಸ್ಸಿನ ಕೀಲಿ

09:16 AM May 03, 2019 | Sriram |

ಉಡುಪಿ: ವಿದ್ಯಾರ್ಥಿಗಳು ಇಷ್ಟದ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಪ್ರಯತ್ನದ ಜತೆಗೆ ದೇವರ ಅನುಗ್ರಹ ಸೇರಿದಾಗ ಯಶಸ್ಸು ಸಾಧ್ಯ ಎಂದು ಪರ್ಯಾಯ ಶ್ರೀ ಪಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥ ಶ್ರೀಪಾದರು ಹೇಳಿದರು.


“ಉದಯವಾಣಿ’ ಪತ್ರಿಕೆ ಬುಧವಾರ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಆಯೋಜಿಸಿದ “ಪಿಯುಸಿ ಬಳಿಕ ಮುಂದೇನು’ ಮಾಹಿತಿ ಕಾರ್ಯಾ ಗಾರದಲ್ಲಿ ಪಾಲ್ಗೊಂಡು ಆಶೀರ್ವಚನ ನೀಡಿದ ಅವರು, ಇಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು ಉತ್ತಮ ಕೋರ್ಸ್‌ ಗಳನ್ನು ಆಯ್ಕೆ ಮಾಡಿಕೊಂಡು ಮುಂದೆ ಉಜ್ವಲ ಭವಿಷ್ಯವನ್ನು ಕಾಣಲು ಶ್ರೀಕೃಷ್ಣ ಮುಖ್ಯಪ್ರಾಣ ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದರು.

Advertisement

ಹಿಂದೆ ಪ್ರಪಂಚ ಬಹಳ ದೂರವಿತ್ತು. ಈಗ ಅಮೆರಿಕ, ಇಂಗ್ಲೆಂಡ್‌ನ‌ಂತಹ ದೇಶಗಳೂ ಹತ್ತಿರವಾಗಿವೆ. ಹಿಂದೆ ವಿವಿಧ ಕೋರ್ಸ್‌ಗಳನ್ನು ಕಲಿಯಲು ಕಷ್ಟವಿತ್ತು. ಈಗ ವಿಷಯಗಳೂ ವಿಸ್ತಾರವಾಗಿವೆ. ಆಯ್ಕೆಗೆ ಈಗ ಅವಕಾಶಗಳಿವೆ. ವಿದ್ಯಾರ್ಥಿಗಳು ಮುಂದೇನು ಎಂಬ ಚಿಂತೆಯನ್ನು ಬಿಟ್ಟು ತಮ್ಮ ಇಷ್ಟದ ವಿಷಯಗಳನ್ನು ಆಯ್ಕೆ ಮಾಡಿ ಸಂತೋಷದಿಂದ ಬಾಳುವೆ ನಡೆಸುವುದು ಮುಖ್ಯ. ಇದಕ್ಕಾಗಿ “ಉದಯವಾಣಿ’
ಯು ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ ಕಲ್ಪಿಸಿರುವುದು ಶ್ಲಾಘನೀಯ ಎಂದು ಅಭಿನಂದಿಸಿದರು.

ಕೆರಿಯರ್‌ ಬೇರೆ-
ಉದ್ಯೋಗ ಬೇರೆ
ಬಂಟಕಲ್ಲು ಶ್ರೀ ಮಧ್ವ ವಾದಿರಾಜ ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿಯ ಕಂಪ್ಯೂಟರ್‌ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ| ವಾಸುದೇವ ಅವರು ಕಾರ್ಯಾಗಾರವನ್ನು ಉದ್ಘಾಟಿಸಿ, ಕೆರಿಯರ್‌ ಬೇರೆ, ಉದ್ಯೋಗ ಬೇರೆ. ಮುಂದೆ ಯಾವ ಕಲಿಕೆಯನ್ನು ಆಯ್ದುಕೊಳ್ಳಬೇಕು, ಬದುಕು ನಡೆಸುವುದು ಹೇಗೆ, ಯಾವ ನಿರ್ಧಾರ ತಳೆಯಬೇಕು ಎಂಬ ಕುರಿತ ಭವಿಷ್ಯ ಜೀವನದ ರೂಪುರೇಖೆಯೇ ಕೆರಿಯರ್‌. ಪಿಯುಸಿ ಆದ ಬಳಿಕ ಸೂಕ್ತ ನಿರ್ಧಾರವನ್ನು ವಿದ್ಯಾರ್ಥಿಗಳು ತಳೆಯಬೇಕು. ಆಸಕ್ತಿ ಇರುವ ವಿಷಯಗಳನ್ನು ಆಯ್ದುಕೊಳ್ಳಬೇಕು ಎಂದರು.

ಬೆಳಗ್ಗೆ ನಡೆದ ಮೂರು ಸೆಶನ್‌ಗಳಲ್ಲಿ ಪಿಯು ಬಳಿಕದ ಮಾರ್ಗದರ್ಶನ ನೀಡಲಾದರೆ, ಮಧ್ಯಾಹ್ನ ಬಳಿಕ ಎಸೆಸೆಲ್ಸಿ ಉತ್ತೀರ್ಣರಾಗಿ ಪದವಿಪೂರ್ವ ಕಲಿಕೆಯ ಆಯ್ಕೆ ಅವಕಾಶಗಳ ಬಗ್ಗೆ ತಿಳಿಸಲಾಯಿತು.

ಕಾರ್ಯಕ್ರಮವನ್ನು ಪೋಷಕರು ಮತ್ತು ವಿದ್ಯಾರ್ಥಿಗಳೇ ಮುಖ್ಯ ಅತಿಥಿಗಳೊಂದಿಗೆ ಉದ್ಘಾಟಿಸಿದ್ದು ವಿಶೇಷವಾಗಿತ್ತು. ಉಡುಪಿ ಜಿಲ್ಲೆಯ ಕುಂದಾಪುರ, ಕಾರ್ಕಳ, ಉಡುಪಿ, ಕಾಪು ಮತ್ತಿತರ ಭಾಗಗಳಿಂದ ವಿದ್ಯಾರ್ಥಿಗಳು ಭಾಗವಹಿಸಿದ್ದು ವಿಶೇಷ.

Advertisement

ಆಸಕ್ತಿ ಅಗತ್ಯ
ಶಿಕ್ಷಕ, ಪ್ರೊಫೆಸರ್‌, ಡಾಕ್ಟರ್‌ ಸಹಿತ ಯಾವುದೇ ಕೋರ್ಸ್‌ಗೆ ಸೇರುವ ಮುನ್ನ ಅದರಲ್ಲಿ ಆಸಕ್ತಿ ಇದೆಯೇ ಎಂದು ತಿಳಿದುಕೊಳ್ಳಿ. ಇನ್ನೊಬ್ಬರ ಮಾತಿಗೆ ಮರು ಳಾಗದೆ ತಮ್ಮ ಆಸಕ್ತಿಯ ಕ್ಷೇತ್ರದಲ್ಲಿ ಮುಂದುವರಿದರೆ ಒಳ್ಳೆಯದು ಎಂದವರು ವಿಜ್ಞಾನ ಶಿಸ್ತಿನ ಬಗ್ಗೆ ಮಾರ್ಗದರ್ಶನ ನೀಡಿದ ಡಾ| ವಾಸುದೇವ.

ಶಿಕ್ಷಣವೂ ಬಂಡವಾಳ
ವಾಣಿಜ್ಯ ಕ್ಷೇತ್ರದ ಆಯ್ಕೆಗಳ ಬಗ್ಗೆ ಸಿಎ ಮುರಳೀಧರ ಕಿಣಿ ಅವರು ಮಾತನಾಡಿ, ಶಿಕ್ಷಣವೂ ಒಂದು ಬಂಡವಾಳ. ಸುಲಭದ ವಿಷಯಗಳತ್ತ ವಾಲಿದರೆ ವೃತ್ತಿ ಜೀವನಕ್ಕೂ ತೊಂದರೆಯಾಗಬಹುದು. ತುಸು ಕಷ್ಟಕರವಾದರೂ ಅದನ್ನು ಬುದ್ಧಿವಂತಿಕೆಯಿಂದ ಬಗೆಹರಿಸುವ ಗುಣ ಬೆಳೆಸಿಕೊಳ್ಳಬೇಕು ಎಂದರು.

ಕವಲುದಾರಿಯಲ್ಲಿ ಇರುವವರಿಗೆ ದಾರಿ
ಪಿಯುಸಿ ಬಳಿಕ ವಿದ್ಯಾರ್ಥಿಗಳು ಕವಲು ದಾರಿಯಲ್ಲಿರುತ್ತಾರೆ. ಅವರಿಗೆ ಮುಂದಿನ ನಡೆ ಏನಿರಬೇಕೆಂಬ ಕುರಿತು ಮಾಹಿತಿ ಕೊರತೆ ಇರುತ್ತದೆ. ಕೋರ್ಸ್‌ಗಳ ಬಗ್ಗೆ ಆಳವಾದ ಜ್ಞಾನ ಇಲ್ಲದಿರುವುದರಿಂದ ಆಯ್ಕೆಯೂ ಕಷ್ಟ. ಪ್ರತಿ ಆಯ್ಕೆಯ ಹಿಂದೆ ಸಕಾರಾತ್ಮಕ ಕಾರಣಗಳಿರಬೇಕು. ಇದಕ್ಕಾಗಿಯೇ ಉದಯವಾಣಿ ವಿಷಯ ಪರಿಣಿತರನ್ನು ಆಹ್ವಾನಿಸಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುತ್ತಿದೆ. ಸುವರ್ಣ ಮಹೋತ್ಸವದ ಘಟ್ಟದಲ್ಲಿರುವ “ಉದಯವಾಣಿ’ ದೈನಿಕವು ಉದ್ಯಮಶೀಲ ಸಾಮಾಜಿಕ ಹೊಣೆಗಾರಿಕೆಯಡಿ ಕಾರ್ಯಾಗಾರವನ್ನು ಆಯೋಜಿಸಿದೆ ಎಂದು ಮಣಿಪಾಲ್‌ ಮೀಡಿಯ ನೆಟ್‌ವರ್ಕ್‌ ಲಿ. ಸಿಇಒ ವಿನೋದ್‌ಕುಮಾರ್‌ ಹೇಳಿದರು.

ಆಲೋಚಿಸಿ ಆರಿಸಿ
ಕೋರ್ಸ್‌ ಮತ್ತು ಆಯ್ಕೆಯ ಅವಕಾಶಗಳು ಹೆಚ್ಚುತ್ತಿವೆ. ಹಾಗಾಗಿ ಸೂಕ್ತವಾದುದನ್ನು ಆರಿಸಿಕೊಂಡರೆ ಭವಿಷ್ಯ ಉತ್ತಮವಾದೀತು. ಈ ನಿಟ್ಟಿನಲ್ಲಿ ಮಾಹಿತಿ ಪಡೆಯಬೇಕು.
-ಡಾ| ನಾಗರಾಜ ಕಾಮತ್‌

ಆರ್ಟ್ಸ್ನಲ್ಲೂ ಆಯ್ಕೆ
ಕಲಾ ವಿಷಯದಲ್ಲೂ ಸಾಕಷ್ಟು ಅವಕಾಶಗಳಿವೆ. ಕೆಎಎಸ್‌, ಐಎಎಸ್‌ ಪರೀಕ್ಷೆ ಬರೆದು ಸಾಧಿಸಬಹುದು. ಆ ವಿಷಯ, ಈ ವಿಷಯ ಎಂದು ಯೋಚಿಸಬೇಡಿ.
-ಪ್ರತಾಪ್‌ ಚಂದ್ರ ಶೆಟ್ಟಿ,

ಮಂಗಳೂರಿನಲ್ಲಿ
ಮೇ 4ರಂದು ಕಾರ್ಯಕ್ರಮ
ಉದಯವಾಣಿಯು ಇದೇ ತೆರನಾದ ಪಿಯುಸಿ ಬಳಿಕ ಮುಂದೇನು ಮಾಹಿತಿಪೂರ್ಣ ಕಾರ್ಯಕ್ರಮವನ್ನು ಮೇ 4 ರಂದು ಶನಿವಾರ ಮಂಗಳೂರಿನಲ್ಲಿ ಏರ್ಪಡಿಸಿದೆ.

ಡೊಂಗರಕೇರಿಯಲ್ಲಿರುವ ಕೆನರಾ ಹೈಸ್ಕೂಲ್‌ನ ಶ್ರೀ ಭುವನೇಂದ್ರ ಸಭಾ ಭವನದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ವಿವಿಧ ಕ್ಷೇತ್ರಗಳ ಪರಿಣತರು ಮಾರ್ಗದರ್ಶನ ನೀಡುವರು. ದ್ವಿತೀಯ ಪಿಯುಸಿ ಉತ್ತೀರ್ಣರಾಗಿ ಭವಿಷ್ಯದ ಶಿಕ್ಷಣದ ಕುರಿತು ಯೋಚಿಸುತ್ತಿರುವ ವಿದ್ಯಾರ್ಥಿಗಳು ಹಾಗೂ ಪೋಷಕರೂ ಪಾಲ್ಗೊಳ್ಳಬಹುದು.

ಇದುವರೆಗೆ ಹೆಸರು ನೋಂದಾಯಿಸದಿರುವವರು ಈ ಕೂಡಲೇ 8095192817 ನಂಬರ್‌ಗೆ ವಾಟ್ಸಪ್‌ ಮಾಡಿ ನೋಂದಾಯಿಸಬೇಕು.

Advertisement

Udayavani is now on Telegram. Click here to join our channel and stay updated with the latest news.

Next