Advertisement

ನಗರ ಸ್ವಚ್ಛತೆಗೆ ಇರಲಿ ಆದ್ಯತೆ

12:02 AM Jul 07, 2019 | mahesh |

ಸ್ಮಾರ್ಟ್‌ ಸಿಟಿಯಾಗಿ ಬೆಳೆಯುತ್ತಿರುವ ನಮ್ಮ ಮಂಗಳೂರಿನಲ್ಲಿ ಸ್ವಚ್ಛತೆಗೆ ವಿಶೇಷ ಆದ್ಯತೆ ನೀಡಲಾಗುತ್ತಿದೆ. ರಾಮಕೃಷ್ಣ ಮಿಷನ್‌ ಸಹಿತ ವಿವಿಧ ಸಂಘಸಂಸ್ಥೆಗಳು ನಗರಾದ್ಯಂತ ಸ್ವಚ್ಛತಾ ಅಭಿಯಾನ ನಡೆಸಿ ನೈರ್ಮಲ್ಯ ಕಾಪಾಡುವಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿವೆ. ಮಾತ್ರವಲ್ಲದೆ ಮಂಗಳೂರು ಮಹಾನಗರ ಪಾಲಿಕೆ ವತಿಯಿಂದಲೂ ಕಸ ಸಂಗ್ರಹ, ವಿಂಗಡಣೆಗೆ ವಿಶೇಷ ಆದ್ಯತೆ ನೀಡಲಾಗಿದೆ. ಆದರೆ ಕೆಲವೊಂದು ಕಡೆಗಳಲ್ಲಿ ನಗರದ ಜನತೆ ಇನ್ನೂ ನಗರ ನೈರ್ಮಲ್ಯ ಕಾಪಾಡುವಲ್ಲಿ ನಿರ್ಲಕ್ಷ್ಯ ವಹಿಸುತ್ತಿರುವುದು ಎದ್ದು ಕಾಣುತ್ತಿದೆ.

Advertisement

ಹಲವಾರು ರಸ್ತೆ ಬದಿಗಳು ಮಾತ್ರವಲ್ಲ ರಾಷ್ಟ್ರೀಯ ಹೆದ್ದಾರಿ ಸಮೀಪದಲ್ಲೂ ತ್ಯಾಜ್ಯಗಳನ್ನು ಬಿಸಾಡಿ ಹೋಗುತ್ತಿರುವುದು ಇವುಗಳ ವಿಲೇವಾರಿ ಆಡಳಿತಕ್ಕೆ ಸವಾಲಾಗುತ್ತಿರುವ ಬಗ್ಗೆ ಪತ್ರಿಕೆಗಳಲ್ಲಿ ಆಗಾಗ್ಗೆ ಪ್ರಕಟವಾಗುತ್ತಲೇ ಇರುತ್ತದೆ. ಹಾಗಾದರೆ ನಗರ ನೈರ್ಮಲ್ಯ ಸರಿಯಾಗಿ ಆಗದೇ ಇದ್ದರೆ ಅದಕ್ಕೆ ಯಾರು ಹೊಣೆ?

ನಮ್ಮ ಮನೆ ಪರಿಸರ ಸ್ವಚ್ಛವಾಗಿ ಇರಬೇಕು ಎಂದು ಬಯಸುವ ನಾವು ನಮ್ಮ ನಗರ ಸ್ವಚ್ಛವಾಗಿರಬೇಕು ಎಂದು ಯಾಕೆ ಬಯಸುವುದಿಲ್ಲ. ಮನೆಯ ತ್ಯಾಜ್ಯವನ್ನು ಮನೆಯ ಪರಿಸರದಲ್ಲೇ ವಿಲೇವಾರಿ ಮಾಡಲು ಯಾಕೆ ಕ್ರಮ ಕೈಗೊಳ್ಳಬಾರದು. ಹೀಗಾದರೆ ಮಾತ್ರ ನಮ್ಮ ನಗರ ಸುಂದರವಾಗಿರಲು ಸಾಧ್ಯವಿದೆ.

ನಗರದ ಕೆಲವೊಂದು ಭಾಗಗಳಲ್ಲಿ ತ್ಯಾಜ್ಯಗಳನ್ನು ರಸ್ತೆ ಬದಿ ಬಿಸಾಡಿಹೋಗುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಇದಕ್ಕೆ ಸ್ಥಳೀಯರೇ ಕಾರಣ ಎಂದು ಹೇಳುವಂತಿಲ್ಲ. ಯಾಕೆಂದರೆ ದೂರದಿಂದ ಬಂದು ಕಸ ಬಿಸಾಡುವವರೂ ಇರುತ್ತಾರೆ.

ಪದವಿನಂಗಡಿ ಸಮೀಪದ ಬೊಲ್ಪುಗುಡ್ಡೆ ಹಿಂಭಾಗದಿಂದ ಗುರುನಗರದ ಕಡೆ ಹಾದು ಹೋಗುವ ದಾರಿ ಬದಿಯಲ್ಲಿ ಕಸದ ರಾಶಿ ಬಹಳ ದಿನಗಳಿಂದ ಕಂಡು ಬರುತ್ತಿದೆ. ಮಳೆ ಬಂದರೆ ತ್ಯಾಜ್ಯ ರಾಶಿಯಲ್ಲಿ ನೀರು ನಿಂತು ದುರ್ನಾತ ಬೀರಲಾರಂಭಿಸುತ್ತದೆ ಮಾತ್ರವಲ್ಲ ಸಾಂಕ್ರಾಮಿಕ ರೋಗ ಹರಡುವ ಭೀತಿಯೂ ಹೆಚ್ಚಾಗಿರುತ್ತದೆ. ಇಲ್ಲಿ ಮಾತ್ರವಲ್ಲ ಇನ್ನೂ ಹಲವೆಡೆ ಮುಖ್ಯವಾಗಿ ಒಳ ರಸ್ತೆಗಳಲ್ಲಿ, ನಿರ್ಜನ ಪ್ರದೇಶಗಳಲ್ಲಿ ತ್ಯಾಜ್ಯ ರಾಶಿಗಳು ತುಂಬಿ ತುಳುಕುತ್ತವೆ. ಹೀಗಾಗಿ ಈ ಬಗ್ಗೆ ಸಂಬಂಧಪಟ್ಟವರು ಗಮನಹರಿಸಬೇಕಿದೆ. ಮಾತ್ರವಲ್ಲ ರಸ್ತೆ ಬದಿ ಕಸ ಬಿಸಾಡುವವರ ವಿರುದ್ಧ ಕಠಿನ ಕ್ರಮ ಕೈಗೊಂಡು ನಗರ ಸ್ವಚ್ಛತೆಗೆ ಆದ್ಯತೆ ಕೊಡಬೇಕಿದೆ.

Advertisement

•ಶ್ರಾವ್ಯಾ, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next