ಮಧುಗಿರಿ: ದೊಡ್ಡೇರಿ ಹೋಬಳಿಯ ಗಡಿಗ್ರಾಮ ಸಜ್ಜೆಹೊಸಹಳ್ಳಿಯ ಸಕಲ ಅಭಿವೃದ್ಧಿಗಾಗಿ 50 ಲಕ್ಷ ರೂ. ವೆಚ್ಚದಲ್ಲಿ ಸುವರ್ಣಗ್ರಾಮ ಯೋಜನೆಯಡಿ ಕಾಮಗಾರಿ ಕೈಗತ್ತಿ ಕೊಂಡಿದ್ದು, ಗುಣಮಟ್ಟದ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದು ಶಾಸಕ ಎಂ.ವಿ.ವೀರಭದ್ರಯ್ಯ ಹೇಳಿದರು.
ತಾಲೂಕಿನ ದೊಡ್ಡೇರಿ ಹೋಬಳಿಯ ಸಜ್ಜೆಹೊಸಹಳ್ಳಿಯಲ್ಲಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಆಂಧ್ರಗಡಿಗೆ ಹೊಂದಿಕೊಂಡಿರುವ ಈ ಗ್ರಾಮದಲ್ಲಿ ಮೂಲಭೌತ ಸೌಕರ್ಯಕ್ಕಾಗಿ ಈ ಸುವರ್ಣಗ್ರಾಮ ಯೋಜನೆಯನ್ನು ಅನುಷ್ಠಾನಗೊಳಿಸಿದ್ದೇವೆ. ಇದು ಹೆಚ್ಚುವರಿ ಅನುದಾನದಿಂದ ತಂದಿದ್ದು, 6 ಸಿಸಿ ರಸ್ತೆ, 6 ಚರಂಡಿ ಒಳಗೊಂಡ ಕಾಮಗಾರಿಯನ್ನು ಕೆಆರ್ ಐಡಿಎಲ್ ಇಲಾಖೆಗೆ ನೀಡಿದ್ದು, ಗುಣಮಟ್ಟದ ಕಾಮಗಾರಿಯನ್ನು ಮಾಡಲು ಸೂಚಿಸಲಾಗಿದೆ ಎಂದರು.
ಈಗಾಗಲೇ 8 ಕೋಟಿ ವೆಚ್ಚದಲ್ಲಿ ಕವಣದಾಲ, ಪೂಜಾರಹಳ್ಳಿ, ಬಡವನಹಳ್ಳಿ ಬಳಿ ಸುವರ್ಣಮುಖೀ ನದಿಯ ಸೇತುವೆಯ ಎರಡೂ ಕಡೆ ಹಾಗೂ ತೆರಿಯೂರು ಗ್ರಾಮಗಳಲ್ಲಿ ಚೆಕ್‌ಡ್ಯಾಂ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿದ್ದು, ಕೆಲವೇ ದಿನದಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.
ಪಿಡಿಒ ಪ್ರಶಾಂತ್, ಬಾವಿಮನೆ ಕಾಂತಣ್ಣ, ವೆಂಕಟೇಶಗೌಡ, ಹನುಮಂತರಾಯಪ್ಪ, ಕುಮಾರ್, ಲೋಕೆಶ್, ಮಾಜಿ ಸದಸ್ಯರಾದ ಶೇಷಣ್ಣ, ಮಹದೇವಪ್ಪ, ಅಜೀಜ್‌ಖಾನ್, ಇಂಜಿನಿಯರ್ ಹನುಮಂತರಾಯಪ್ಪ ಹಾಗೂ ಇತರರು ಇದ್ದರು.
ವಿನಾಕಾರಣ ಕೆಲವರಿಂದ ಕೈಗಾರಿಕಾ ವಲಯಕ್ಕೆ ಅಡ್ಡಿ : ಮುಖ್ಯವಾಗಿ ಕ್ಷೇತ್ರದ ಹೆಣ್ಣುಮಕ್ಕಳಿಗೆ ಹಾಗೂ ನಿರುದ್ಯೋಗ ಯುವಕರಿಗೆ ಅನುಕೂಲವಾಗಲು ಕುಮಾರಸ್ವಾಮಿ ಅವಧಿಯಲ್ಲಿಕೈಗಾರಿಕಾ ವಲಯ ಮಂಜೂರಾಗಿದ್ದು,ಕೆಲವರು ವಿನಾಕಾರಣ ಅಡ್ಡಿಪಡಿಸುವಕೆಟ್ಟಕೆಲಸಕ್ಕೆಕೈಹಾಕಿದ್ದಾರೆ. ಈ ಯೋಜನೆಯನ್ನು ನಿಲ್ಲಿಸಲು ಯಾವುದೇ ಕಾರಣಕ್ಕೂ ಬಿಡಲ್ಲ. ಅಡ್ಡಿಪಡಿಸಿದವರು ಯಾರೆಂದು ಮುಂದೆ ಜನತೆಯ ಮುಂದೆ ಬಹಿರಂಗ ಮಾಡುತ್ತೇನೆ ಎಂದು ಶಾಸಕ ಎಂ.ವಿ.ವೀರಭದ್ರಯ್ಯ ತಿಳಿಸಿದರು.