Advertisement

Government ಉಡುಪಿ ಜಿಲ್ಲೆಯಲ್ಲಿ ಚಪ್ಪಲಿ ಖರೀದಿಗೆ ಆದ್ಯತೆ

12:48 AM Oct 02, 2023 | Team Udayavani |

ಉಡುಪಿ: ಉಭಯ ಜಿಲ್ಲೆಯ 17 ಪ್ರೌಢಶಾಲೆಗಳನ್ನು ಹೊರತುಪಡಿಸಿ ಉಳಿದೆಲ್ಲ ಸರಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಶೂ, ಸಾಕ್ಸ್‌ ವಿತರಣೆ ಪೂರ್ಣಗೊಂಡಿದೆ.

Advertisement

ಈ ಬಾರಿ ಉಡುಪಿಯ ಬಹುತೇಕ ಶಾಲೆಗಳು ವಿದ್ಯಾರ್ಥಿಗಳಿಗೆ ಶೂ, ಸಾಕ್ಸ್‌ ಬದಲಿಗೆ ಸ್ಯಾಂಡಲ್ಸ್‌ (ಚಪ್ಪಲಿ) ವಿತರಿಸಿದರೆ, ದಕ್ಷಿಣ ಕನ್ನಡದಲ್ಲಿ ಶೂ, ಸಾಕ್ಸ್‌ ನೀಡಲಾಗಿದೆ.

ಶೈಕ್ಷಣಿಕ ವರ್ಷ ಆರಂಭದಲ್ಲಿ ಪಠ್ಯಪುಸ್ತಕ, ಸಮವಸ್ತ್ರದ ಜತೆಗೆ ಶೂ, ಸಾಕ್ಸ್‌ ನೀಡಬೇಕಿತ್ತು. ಆದರೆ ರಾಜ್ಯ ಸರಕಾರದಿಂದ ಅನುದಾನ ಬರುವಾಗ ಸ್ವಲ್ಪ ವಿಳಂಬವಾಗಿದೆ. ಕಿರಿಯ ಪ್ರಾಥಮಿಕ ಶಾಲೆಯ ಪ್ರತೀ ವಿದ್ಯಾರ್ಥಿಗೆ 265 ರೂ., ಹಿ.ಪ್ರಾ. ಶಾಲೆಯ ಪ್ರತೀ ವಿದ್ಯಾರ್ಥಿಗೆ 295 ರೂ. ಹಾಗೂ ಪ್ರೌಢಶಾಲೆಯ ಪ್ರತೀ ವಿದ್ಯಾರ್ಥಿಗಳಿಗೆ 320 ರೂ. ಮೌಲ್ಯದ ಶೂ, ಸಾಕ್ಸ್‌ ಅಥವಾ ಸ್ಯಾಂಡಲ್‌ ಒದಗಿಸಲು ಸರಕಾರ ಅನುದಾನ ಒದಗಿಸಿದೆ.

ವಿತರಣೆ ಹೇಗೆ?
ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿಯೇ ಶೂ, ಸಾಕ್ಸ್‌ ವಿತರಣೆ ಸಂಪೂರ್ಣ ನಿರ್ವಹಣೆ ಮಾಡಲಿದೆ. ಮುಖ್ಯಶಿಕ್ಷಕರು ಇದರ ಭಾಗವಾಗಿ ಇರುತ್ತಾರೆ. ಅನುದಾನವನ್ನು ಎಸ್‌ಡಿಎಂಸಿ ಹಾಗೂ ಶಾಲೆಯ ಜಂಟಿ ಖಾತೆಗೆ ಜಮಾ ಮಾಡಲಾಗುತ್ತದೆ. ಎಸ್‌ಡಿಎಂಸಿಯವರು ಸಭೆ ಸೇರಿ ಸರಕಾರದ ಅನುದಾನಕ್ಕೆ ಸರಿಯಾಗಿ ಸ್ಥಳೀಯವಾ ಗಿಯೇ ಖರೀದಿಸಿ ವಿತರಿಸುತ್ತಾರೆ.

ಚಪ್ಪಲಿ ಯಾಕೆ?
ಬಹುತೇಕ ಜಿಲ್ಲೆಗಳಲ್ಲಿ ವಿದ್ಯಾರ್ಥಿಗಳಿಗೆ ಶೂ ಮತ್ತು ಸಾಕ್ಸ್‌ ನೀಡಲಾಗುತ್ತದೆ. ಆದರೆ ಉಡುಪಿ ಸಹಿತ ಕರಾವಳಿ ಹಾಗೂ ಮಲೆನಾಡು ಜಿಲ್ಲೆಯಲ್ಲಿ ಸ್ಯಾಂಡಲ್‌ ವಿತರಿಸಲಾಗಿದೆ. ಈ ಭಾಗದಲ್ಲಿ ಮಳೆ ಜಾಸ್ತಿ ಇರುವುದರಿಂದ ವಿದ್ಯಾರ್ಥಿಗಳಿಗೆ ಚಪ್ಪಲಿಯೇ ಸೂಕ್ತ ಎಂಬ ಪಾಲಕ, ಪೋಷಕರ ಅಭಿಪ್ರಾಯದಂತೆ ಚಪ್ಪಲಿಯನ್ನೇ ನೀಡಲಾಗಿದೆ. ಇದಕ್ಕೆ ಸರಕಾರದ ಅನುಮತಿಯೂ ಇದೆ. ಆದರೆ ಏಕರೂಪತೆ ಕಾಯ್ದುಕೊಳ್ಳುವ ಸೂಚನೆ ನೀಡಿದೆ. ಆದರೆ
ದಕ್ಷಿಣ ಕನ್ನಡದ ಬಹುಪಾಲುಶಾಲೆಗಳಲ್ಲಿ ಶೂ, ಸಾಕ್ಸ್‌ ವಿತರಣೆ ಮಾಡಲಾಗಿದೆ.

Advertisement

17 ಶಾಲೆಗೆ ಅನುದಾನ ಕೊರತೆ
ಪ್ರಾಥಮಿಕ ಶಾಲೆಗಳ ಮಕ್ಕಳಿಗೆ ಪೂರ್ಣ ಪ್ರಮಾಣದಲ್ಲಿ ಚಪ್ಪಲಿ/ ಶೂ, ಸಾಕ್ಸ್‌ ವಿತರಿಸಲಾಗಿದೆ. ಉಡುಪಿಯ 6, ದಕ್ಷಿಣ ಕನ್ನಡದ 11 ಸೇರಿ 17 ಪ್ರೌಢಶಾಲೆಗಳಿಗೆ ಅನುದಾನ ಕೊರತೆ ಹಿನ್ನೆಲೆಯಲ್ಲಿ ಶೂ, ಸಾಕ್ಸ್‌ ವಿತರಿಸಿಲ್ಲ. ಹೆಚ್ಚುವರಿ ಅನುದಾನ ಒದಗಿಸಲು ಕೋರಿ ಈಗಾಗಲೇ ಜಿಲ್ಲಾ ಡಿಡಿಪಿಐ ಕಚೇರಿಯಿಂದ ಕೇಂದ್ರ ಕಚೇರಿಗೆ ಮನವಿ ಸಲ್ಲಿಸಲಾಗಿದೆ. ದ.ಕ.ಗೆ ಅನುದಾನವೂ ಬಂದಿದೆ.

ವಿದ್ಯಾರ್ಥಿಗಳು – ಅನುದಾನ
ಉಡುಪಿ ಜಿಲ್ಲೆಯ 571 ಪ್ರಾಥಮಿಕ ಶಾಲೆಯ 41,523 ವಿದ್ಯಾರ್ಥಿಗಳಿಗೆ ಶೂ, ಸಾಕ್ಸ್‌ ವಿತರರಿಸಲು 1,18,51,805 ರೂ. ಬಿಡುಗಡೆ ಮಾಡಲಾಗಿತ್ತು. ಇದರಲ್ಲಿ 1,15,54,710 ರೂ. ವ್ಯಯಿಸಲಾಗಿದ್ದು, 2,97,095 ರೂ. ಉಳಿಕೆಯಾಗಿದೆ. ಹಾಗೆಯೇ 105 ಪ್ರೌಢಶಾಲೆಗಳಲ್ಲಿ 99 ಪ್ರೌಢಶಾಲೆಯ 17,715 ವಿದ್ಯಾರ್ಥಿಗಳಿಗೆ ಶೂ, ಸಾಕ್ಸ್‌ ಖರೀದಿಗೆ 56,32,650 ರೂ. ಪ್ರಸ್ತಾವನೆ ಸಲ್ಲಿಸಲಾಗಿತ್ತು. ಸರಕಾರ 48,70,375 ರೂ. ಬಿಡುಗಡೆ ಮಾಡಿದ್ದು, ಆ ಹಣದಲ್ಲಿ 99 ಶಾಲೆಗಳ ವಿದ್ಯಾರ್ಥಿಗಳಿಗೆ ವಿತರಿಸಲಾಗಿದೆ. ಉಳಿದ 6 ಶಾಲೆಯ ಮಕ್ಕಳಿಗೆ ವಿತರಣೆ 7,62,275 ರೂ. ಆವಶ್ಯಕತೆಯಿದೆ ಎಂದು ಇಲಾಖೆಗೆ ಪತ್ರದ ಮೂಲಕ ತಿಳಿಸಲಾಗಿದೆ. ಒಟ್ಟಾರೆಯಾಗಿ ಈವರೆಗೆ ಬಂದಿರುವ 1,67,22,180 ರೂ.ಗಳಲ್ಲಿ 670 ಶಾಲೆಯ ಮಕ್ಕಳಿಗೆ ಸೌಲಭ್ಯ ವಿತರಿಸಲಾಗಿದೆ.

ದ.ಕ. ಜಿಲ್ಲೆಯ 908 ಪ್ರಾಥಮಿಕ ಶಾಲೆಯ 78,153 ವಿದ್ಯಾರ್ಥಿಗಳಿಗೆ 2,19,82,735 ರೂ.ಗಳಲ್ಲಿ ಶೂ, ಸಾಕ್ಸ್‌ ವಿತರಣೆ ಮಾಡಲಾಗಿದೆ. 170 ಪ್ರೌಢಶಾಲೆಗಳಲ್ಲಿ 153 ಪ್ರೌಢಶಾಲೆಗಳ 28,963 ವಿದ್ಯಾರ್ಥಿಗಳಿಗೆ 61,71,410 ರೂ.ಗಳಲ್ಲಿ ಶೂ, ಸಾಕ್ಸ್‌ ನೀಡಲಾಗಿದೆ. ಒಟ್ಟಾರೆಯಾಗಿ 1061 ಶಾಲೆಯ 1,07,116 ವಿದ್ಯಾರ್ಥಿಗಳಿಗೆ 2,81,54,145 ರೂ.ಗಳಲ್ಲಿ ಶೂ, ಸಾಕ್ಸ್‌ ವಿತರಿಸಲಾಗಿದೆ.

ಬಹುಪಾಲು ಸರಕಾರಿ ಶಾಲಾ ಮಕ್ಕಳಿಗೆ ಶೂ, ಸಾಕ್ಸ್‌ ವಿತರಣೆ ಮಾಡಲಾಗಿದೆ. ಕೆಲವೊಂದು ಶಾಲೆಗಳಲ್ಲಿ ಎಸ್‌ಡಿಎಂಸಿಯವರು ಆಯಾ ಪರಿಸರಕ್ಕೆ ಅನುಗುಣವಾಗಿ ಪಾಲಕ, ಪೋಷಕರ ಸಮ್ಮತಿಯ ಮೇರೆಗೆ ಸ್ಯಾಂಡಲ್‌ ವಿತರಣೆ ಮಾಡಿದ್ದಾರೆ. ಶಾಲೆ ನೀಡಿರುವ ನಿರ್ದಿಷ್ಟ ವೆಚ್ಚದಲ್ಲೇ ನೀಡಬೇಕು ಎಂಬುದನ್ನು ಸೂಚಿಸಿದ್ದೆವು.
– ಕೆ. ಗಣಪತಿ, ದಯಾನಂದ ಆರ್‌. ನಾಯಕ್‌,
ಡಿಡಿಪಿಐಗಳು, ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ, ಉಡುಪಿ, ದ.ಕ.

Advertisement

Udayavani is now on Telegram. Click here to join our channel and stay updated with the latest news.

Next