ಹಾವೇರಿ: ಬಸಾಪೂರ ಗ್ರಾಮ ಪಂಚಾಯಿತಿಯಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ರೋಜಗಾರ್ ದಿನ ಆಚರಿಸಲಾಯಿತು.
ಕೃಷಿ ಸಹಾಯಕ ನಿರ್ದೇಶಕ ಕರಿಯಲ್ಲಪ್ಪ ಡಿ.ಕೆ. ಮಾತನಾಡಿ, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಎಲ್ಲ ನೈಸರ್ಗಿಕ ಸಂಪನ್ಮೂಲ ಕಾಮಗಾರಿಗಳು, ಜಲಾಮೃತ ಕಾಮಗಾರಿಗಳು, ವೈಯಕ್ತಿಕ ಕಾಮಗಾರಿಗಳು, ತೋಟಗಾರಿಕೆ, ರೇಷ್ಮೆ, ಅರಣ್ಯ, ಕೃಷಿ ಇಲಾಖೆಗಳಿಗೆ ಸಂಬಂಧಿಸಿದ ವೈಯಕ್ತಿಕ ಭೂ ಅಭಿವೃದ್ಧಿ ಬದು ನಿರ್ಮಾಣ, ಕೃಷಿ ಹೊಂಡ, ನೀರು ಕೋಯಿಲು ಕಾಮಗಾರಿಗಳನ್ನು ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ತಾಲೂಕು ಮಾಹಿತಿ ಶಿಕ್ಷಣ ಮತ್ತು ಸಂವಹನ ಅಧಿಕಾರಿ ಗಿರೀಶ ಬೆನ್ನೂರ ಮಾತನಾಡಿ, ರೋಜಗಾರ ದಿವಸದ ಮಹತ್ವ ಮತ್ತು ಉದ್ದೇಶ ಕುರಿತು ಮಾತನಾಡಿದರು.
ರೋಜಗಾರ ದಿವಸವನ್ನು ವಾರ್ಡ್‌ನ ಶಾಲೆಗಳಲ್ಲಿ, ಗ್ರಾಮ ಪಂಚಾಯತ ಭವನಗಳಲ್ಲಿ, ರಾಜೀವ ಗಾಂಧಿ ಸೇವಾ ಕೇಂದ್ರಗಳಲ್ಲಿ ನಡೆಸಬಹುದಾಗಿದೆ. ನಿಗದಿತ ಸಂಖ್ಯೆಯಲ್ಲಿ ಉದ್ಯೋಗದ ಬೇಡಿಕೆ ಇರುವಂತೆ ನೋಡಿಕೊಳ್ಳುವುದು ಮತ್ತು ವಸತಿ ಯೋಜನೆ ಅಡಿ ಪ್ರತಿಯೊಬ್ಬ ಫಲಾನುಭವಿಗೆ 90 ಮಾನವ ದಿನಗಳ ಮೊತ್ತವನ್ನು ಸಂಬಂಧಪಟ್ಟ ಫಲಾನುಭವಿಗೆ ಪಾವತಿಸುವದರ ಬಗ್ಗೆ ತಿಳಿಸಿದರು. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೈಗೊಳ್ಳಬಹುದಾದ ಕಾಮಗಾರಿಗಳಾದ ಜಲ ಸಂರಕ್ಷಣೆ ರಚನೆಗಳು ಹಾಗೂ ಮಳೆ ನೀರು ತಡೆಗಟ್ಟುವ ರಚನೆಗಳು, ಅರಣ್ಯೀಕರಣ ಮತ್ತು ನೆಡುತೋಪುಗಳನ್ನೊಳಗೊಂಡ ಬರ ತಡೆಯುವ ಕಾಮಗಾರಿಗಳು, ರೈತರ ಕಣ, ಸ್ಮಶಾನ ಅಭಿವೃದ್ಧಿ, ಗ್ರಾಮೀಣ ಉದ್ಯಾನವನಗಳು, ಗ್ರಾಮೀಣ ಗೋದಾಮುಗಳು, ಕರೆ, ಬಾವಿ, ಗೋಕಟ್ಟೆಗಳು ಮುಂತಾದ ಸಾಂಪ್ರದಾಯಿಕ ಜಲಮೂಲಗಳ ಪುಶ್ಚೇತನ ಕಾಮಗಾರಿಗಳು, ಜಲ ಮರುಪೂರಣ ಗುಂಡಿಗಳ ಮೂಲಕ ಗ್ರಾಮೀಣ ಕುಡಿಯುವ ನೀರಿನ ಕಾಮಗಾರಿಗಳು, ಅಂಗನವಾಡಿ ಕಟ್ಟಡಗಳ ನಿರ್ಮಾಣ, ಆಟದ ಮೈದಾನ ನಿರ್ಮಾಣ, ವ್ಯಕ್ತಿಗತ ಫಲಾನುಭವಿಗಳಿಗೆ ಪ್ಯಾಕೇಜ ಮಾದರಿಗಳಲ್ಲಿ ಭೂ ಅಭಿವೃದ್ಧಿ ಕುರಿ-ದನದ ದೊಡ್ಡಿ ಇನ್ನಿತರ ಕಾಮಗಾರಿಗಳನ್ನು ಕೈಗೊಳ್ಳುವಂತೆ ಗಿರೀಶ ಬೆನ್ನೂರ ತಿಳಿಸಿದರು.
ಗ್ರಾಪಂ ಅಭಿವೃದ್ಧಿ ಅಧಿಕಾರಿ ಅಲ್ಲಾಬಕ್ಷ ವಡವಿ ನಿರೂಪಿಸಿ, ವಂದಿಸಿದರು. ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು ಮತ್ತು ಗ್ರಾಮ ಪಂಚಾಯತ್ ಸಿಬ್ಬಂದಿ ವರ್ಗದವರು, ಕೂಲಿಕಾರರು, ಅಂಗನವಾಡಿ ಮೇಲ್ವಿಚಾರಕಿ ಗಿರಿಜವ್ವ ಪಾಟೀಲ, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.