Advertisement

ನಮ್ಮತನಕ್ಕೆ ಆದ್ಯತೆ, ಬಳಿಕ ಹೊಂದಾಣಿಕೆ: ಕೃಷ್ಣಾಪುರ ಶ್ರೀ

12:53 AM Dec 15, 2019 | mahesh |

ಉಡುಪಿ: ಇತರರೊಂದಿಗೆ ಹೊಂದಾಣಿಕೆ ಮಾಡುವಾಗ ನಮ್ಮತನ, ನಮ್ಮ ವೈಶಿಷ್ಟéಗಳನ್ನು ಬಿಡಬಾರದು ಎಂದು ಶ್ರೀ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು ಕಿವಿಮಾತು ನುಡಿದರು. ಅವರು ತುಳು ಶಿವಳ್ಳಿ ಬ್ರಾಹ್ಮಣರ ವಿಶ್ವ ಸಮ್ಮೇಳನದ ಧಾರ್ಮಿಕ ಸಮಾವೇಶದಲ್ಲಿ ಆಶೀರ್ವಚನ ನೀಡಿದರು. ಬೇರೆಡೆಗಳಲ್ಲಿ ಶ್ರಾವಣ ಮಾಸದಲ್ಲಿ ಅಷ್ಟಮಿ ಆಚರಣೆ ನಡೆದರೆ ಉಡುಪಿಯಲ್ಲಿ ಮಾತ್ರ ಲಾಗಾಯ್ತಿನಿಂದಲೂ ಸಿಂಹ ಮಾಸದ ಅಷ್ಟಮಿ ಆಚರಣೆ ನಡೆಯುತ್ತಿದೆ. ಇಂತಹ ವೈಶಿಷ್ಟ್ಯಗಳನ್ನು ಉಳಿಸಿಕೊಂಡು ಬರಬೇಕು. ಇದು ಇತರ ಧಾರ್ಮಿಕ ಆಚರಣೆಗಳಿಗೂ ಅನ್ವಯ ಎಂದರು.

Advertisement

ದೇವಾಲಯಗಳಲ್ಲಿ ಶುದ್ಧಾಚಾರಗಳಿದ್ದರೆ ಮಾತ್ರ ಅದರ ಪ್ರಯೋಜನ ಸಮಗ್ರ ಸಮಾಜಕ್ಕೆ ಸಿಗುತ್ತದೆ. ವಾಸ್ತುವಿನಿಂದ ಹಿಡಿದು, ಅಷ್ಟಬಂಧ, ಬ್ರಹ್ಮಕಲಶ, ನಿತ್ಯ ಪೂಜೆಯವರೆಗೆ ಪರಿಶುದ್ಧತೆಗೆ ಆದ್ಯತೆ ಕೊಡಬೇಕು. ಇದಕ್ಕೆ ಆಡಳಿತ ಮಂಡಳಿ ಮತ್ತು ಅರ್ಚಕರು ಪೂರಕವಾಗಿ ವರ್ತಿಸಬೇಕು. ಕೈಕಾಲು ತೊಳೆದುಕೊಂಡು ಪರಿಶುದ್ಧರಾಗಿ ದೇವಸ್ಥಾನಕ್ಕೆ ಹೋಗುವ ಪರಿಪಾಠ ಬೇಕು ಎಂದು ಸಂಸ್ಕೃತ ಕಾಲೇಜಿನ ಪ್ರಾಧ್ಯಾಪಕ ಡಾ| ಶಿವಪ್ರಸಾದ ತಂತ್ರಿ ಹೇಳಿದರು.

ಜಾತಕ ನೋಡುವಾಗ ಕೇವಲ ಕೂಟತಾರಾವಳಿಯನ್ನು ಮಾತ್ರ ನೋಡಿ ನಿರ್ಣಯಕ್ಕೆ ಬರಬಾರದು. ಉದಾಹರಣೆಗೆ ಮೂಲ ನಕ್ಷತ್ರ ಎಂದಾಕ್ಷಣವೇ ತಿರಸ್ಕರಿಸಬಾರದು, ಶಾಸ್ತ್ರದಲ್ಲಿ ಸಾಕಷ್ಟು ವಿಮರ್ಶೆಗೆ ಅವಕಾಶಗಳಿವೆ ಎಂದು ಡಾ| ತಂತ್ರಿ ಹೇಳಿದರು.

ಶಾಸ್ತ್ರಾಧ್ಯಯನದೊಂದಿಗೆ ಶಿವಳ್ಳಿ ಸಂಪ್ರದಾಯದ ಆಚಾರ ವಿಚಾರ ತಿಳಿಯಬೇಕು. ಕನಿಷ್ಠ ಗಾಯತ್ರಿ, ಪುರುಷಸೂಕ್ತಾದಿ ಸೂಕ್ತಗಳು, ಅಗ್ನಿಕಾರ್ಯ, ವಿಷ್ಣುಸಹಸ್ರನಾಮಾದಿ ಸ್ತೋತ್ರಗಳನ್ನು ತಿಳಿದಿರಬೇಕು ಎಂದು ಅವಧಾನಿ ಗುಂಡಿಬೈಲು ಸುಬ್ರಹ್ಮಣ್ಯ ಭಟ್‌ ತಿಳಿಸಿದರು.

ಬ್ರಾಹ್ಮಣರನ್ನು ನೋಡಿ ಇತರರು ಧರ್ಮಾಚರಣೆ ಮಾಡುತ್ತಾರೆ ಎಂದು ಶಾಸ್ತ್ರಗಳಲ್ಲಿರುವುದರಿಂದ ಬ್ರಾಹ್ಮಣರು ಗರಿಷ್ಠವಾಗಿ ಧರ್ಮಾಚರಣೆ ನಡೆಸಬೇಕು ಎಂದು ಬೆಂಗಳೂರು ಪೂರ್ಣಪ್ರಜ್ಞ ವಿದ್ಯಾಪೀಠದ ಪ್ರಾಂಶುಪಾಲ ಪ್ರೊ| ಸತ್ಯನಾರಾಯಣ ಆಚಾರ್ಯ ಕರೆ ನೀಡಿದರು.

Advertisement

ಹರಿಕೃಷ್ಣ ಪುನರೂರು, ಶ್ರೀಪತಿ ಉಪಾಧ್ಯಾಯ ಕುಂಭಾಶಿ, ರಾಮದಾಸ ಭಟ್‌ ವಿಷಯ ಮಂಡಿಸಿದರು. ಬಕ್ರೆ ವಾಸುದೇವ ಭಟ್‌ ಸ್ವಾಗತಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next