Advertisement

ಜಿಲ್ಲೆಯಲ್ಲಿ ಅಪರಾಧ, ಅಪಘಾತ ನಿಯಂತ್ರಣಕ್ಕೆ ಆದ್ಯತೆ

09:22 PM Aug 21, 2019 | Team Udayavani |

ಹಾಸನ: ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದು ಮತ್ತು ಅಪಘಾತಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸಂಚಾರ ವ್ಯವಸ್ಥೆ ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್‌ ಮುಖ್ಯಾಧಿಕಾರಿ ರಾಂ ನಿವಾಸ್‌ ಸೆಪೆಟ್‌ ಹೇಳಿದರು.

Advertisement

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯಾಗಿ ಮಂಗಳವಾರ ಕಾರ್ಯಭಾರ ವಹಿಸಿಕೊಂಡ ನಂತರ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾವು ಕಾರ್ಯಭಾರ ವಹಿಸಿಕೊಂಡ ನಂತರ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಜಿಲ್ಲೆಯ ಸೂಕ್ಷ್ಮ ಪ್ರದೇಶಗಳು ಇದುವರೆಗೂ ಆ ಪ್ರದೇಶಗಳಲ್ಲಿನ ಪರಿಸ್ಥಿತಿಯ ಮಾಹಿತಿ ಪಡೆದುಕೊಂಡಿದ್ದೇನೆ. ಜಿಲ್ಲೆಯಲ್ಲಿ ಇದುವರೆಗೂ ಶಾಂತಿ, ಸುವ್ಯವಸ್ಥೆಗೆ ಧಕ್ಕೆ ಬಂದಿಲ್ಲ. ಇನ್ನು ಮುಂದೆಯೂ ಜಿಲ್ಲೆಯ ಜನರಿಂದ ಅದೇ ರೀತಿಯ ಸಹಕಾರ ಬಯಸುವ ಆಶಯ ವ್ಯಕ್ತಪಡಿಸಿದರು.

ಕಾನೂನು ಸುವ್ಯವಸ್ಥೆ ಕಾಪಾಡಲು ಕ್ರಮ: ಕಾನೂನು ಬಾಹಿರ ಚಟುವಟಿಕೆಗಳನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ಕಟ್ಟಚ್ಚರದಿಂದ ಇರಬೇಕೆಂದು ಅಧೀನಾಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ. ನೊಂದವರಿಗೆ ನ್ಯಾಯ ಕೊಡಿಸುವ ಕೆಲಸ ಪೊಲೀಸ್‌ ಇಲಾಖೆಯದು. ಸಣ್ಣಪುಟ್ಟ ವಿಷಯಗಳು ಠಾಣೆಯ ಮಟ್ಟದಲ್ಲಿಯೇ ಇತ್ಯರ್ಥವಾಗಬೇಕು. ಅಪರಾಧ ಪ್ರಕರಣಗಳು ದಿನೆ, ದಿನೇ ಕಡಿಮೆಯಾಗಬೇಕು. ಹಿಂದಿನ ವರ್ಷಕ್ಕಿಂತ ಈ ವರ್ಷ ಅಪರಾಧ ಪ್ರಕರಣಗಳು ಕಡಿಮೆಯಾಗಲೇಬೇಕು. ಅ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗುವುದಾಗಿಯೂ ಭರವಸೆ ನೀಡಿದರು.

ಅಪಘಾತ ನಿಯಂತ್ರಣ: ಹಾಸನ ನಗರದ ಸಂಚಾರದ ವ್ಯವಸ್ಥೆ ಹಾಗೂ ಸುಧಾರಣಾ ಕ್ರಮಗಳ ಬಗ್ಗೆ ಮಾಹಿತಿ ಪಡೆಯುವುದಾಗಿ ಹೇಳಿದ ರಾಂ ನಿವಾಸ್‌ ಸೆಪೆಟ್‌ ಅವರು, ಜಿಲ್ಲೆಯಲ್ಲಿ ಅಪಘಾತ ಪ್ರಕರಣಗಳು ನಿಯಂತ್ರಣವಾಗಬೇಕು. ಈ ನಿಟ್ಟಿನಲ್ಲಿ ಲೋಕೋಪಯೋಗಿ ಇಲಾಖೆ, ರಾಷ್ಟ್ರೀಯ ಹೆದ್ದಾರಿ ಇಲಾಖೆಗಳ ಸಹಕಾರವನ್ನೂ ಪಡೆದು ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.

ಪೊಲೀಸರು ಅಧಿಕಾರ ಚಲಾಯಿಸುವುದರಿಂದ ಮಾತ್ರವೇ ಸಂಚಾರಿ ವ್ಯವಸ್ಥೆ ಸುಧಾರಣೆ, ಅಪಘಾತ ಪ್ರಕರಣಗಳ ನಿಯಂತ್ರಣ ಸಾಧ್ಯವಿಲ್ಲ. ಸಾರ್ವಜನಿಕರಲ್ಲಿ ಅರಿವು ಮೂಡಿಸುವುದೂ ಮುಖ್ಯ. ಈ ನಿಟ್ಟಿನಲ್ಲಿ ಪೊಲೀಸ್‌ ಅಧಿಕಾರಿಗಳು ವಿಶೇಷವಾಗಿ ಸಂಚಾರಿ ಪೊಲೀಸರು ಶಾಲಾ – ಕಾಲೇಜುಗಳಲ್ಲಿ ಆಗಿಂದಾಗ ಸಭೆ ನಡೆಸಿ ಸಂಚಾರಿ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಬೇಕು. ಈ ಸಂಬಂಧ ಪೊಲೀಸ್‌ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದು ತಿಳಿಸಿದರು.

Advertisement

ಸೆಪೆಟ್‌ ರಾಜಸ್ಥಾನ ಮೂಲದವರು: ಹಾಸನ: ಜಿಲ್ಲಾ ಪೊಲೀಸ್‌ ಮುಖ್ಯಾಧಿಕಾರಿಯಾಗಿದ್ದ ಎ.ಎನ್‌.ಪ್ರಕಾಶ್‌ಗೌಡ ಅವರು ವರ್ಗಾವಣೆಯಾದ ನಂತರ ನೂತನ ಪೊಲೀಸ್‌ ಮುಖ್ಯಾಧಿಕಾರಿಯಾಗಿ ಮಂಗಳವಾರ ಕಾರ್ಯಭಾರ ವಹಿಸಿಕೊಂಡಿರುವ ರಾಂ ನಿವಾಸ್‌ ಸೆಪೆಟ್‌ ಅವರು ರಾಜಸ್ಥಾನದ ಜೈಪುರದವರು. 2008 ರ ಐಪಿಎಸ್‌ ತಂಡದ ಅಧಿಕಾರಿಯಾಗಿರುವ ಅವರು ಕೃಷಿ ವಿಜ್ಞಾನದಲ್ಲಿ ಪಿ.ಎಚ್‌ಡಿ ಪದವೀಧರರು.

ಈ ಹಿಂದೆ ಕೋಲಾರ, ಬೆಂಗಳೂರು ನಗರ ಜಿಲ್ಲಾ ಪೊಲೀಸ್‌ ಮುಖ್ಯಾಧಿಕಾರಿಯಾಗಿ, ಕೆಎಸ್‌ಆರ್‌ಪಿ ರಾಜ್ಯ ಕಮಾಂಡೆಂಟ್‌, ಬೆಂಗಳೂರು ಎಸಿಬಿ ಘಟಕದ ಮುಖ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಇವರ ಪತ್ನಿ ರೋಹಿಣಿ ಸೆಪೆಟ್‌ ಅವರೂ ಐಪಿಎಸ್‌ ಅಧಿಕಾರಿಯಾಗಿದ್ದು ಅವರು ಪ್ರಸ್ತುತ ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next