Advertisement

ಆತ್ಮ ನಿರ್ಭರ್‌ದಲ್ಲಿ ಕೃಷಿಗೆ ಆದ್ಯತೆ

05:31 PM Jul 11, 2020 | Suhan S |

ಕೊಪ್ಪಳ: ಕೋವಿಡ್‌-19 ಸಂದರ್ಭದಲ್ಲಿ ದೇಶದ ಜನರ ಹಿತ ರಕ್ಷಣೆಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಆತ್ಮ ನಿರ್ಭರ್‌ ಯೋಜನೆ ಘೋಷಿಸಿ, ಇದಕ್ಕಾಗಿ 20 ಲಕ್ಷ ಕೋಟಿ ಮೀಸಲಿಟ್ಟಿದ್ದಾರೆ. ಇದರಲ್ಲಿ ಕೃಷಿ, ರಕ್ಷಣೆ ಹಾಗೂ ಬಾಹ್ಯಾಕಾಶ ವಲಯಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದಾರೆ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.

Advertisement

ಶುಕ್ರವಾರ ಆತ್ಮ ನಿರ್ಭರ್‌ ಯೋಜನೆ ಹಾಗೂ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಒಂದು ವರ್ಷದ ಸಾಧನೆ ಕುರಿತು ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು. ಕೇಂದ್ರ ಸರ್ಕಾರವು ಆತ್ಮನಿರ್ಭರ ಯೋಜನೆಯಡಿ 20 ಲಕ್ಷ ಕೋಟಿಯಲ್ಲಿ ಮೊದಲ ಕಂತಿನಲ್ಲಿ 5,94,550 ಕೋಟಿ ಎಂಎಸ್‌ಎಂಇ ಸೇರಿದಂತೆ ವಿವಿಧ ವ್ಯಾಪಾರಕ್ಕೆ ಮೀಸಲಿಟ್ಟಿದ್ದಾರೆ. ಉದ್ಯಮಗಳಿಗೆ ತುರ್ತು ಕಾರ್ಯ ನಿರ್ವಹಣೆ ಬಂಡವಾಳಕ್ಕೆ 3 ಲಕ್ಷ ಕೋಟಿ, ಒತ್ತಡದಲ್ಲಿ ಇರುವ ಎಂಎಸ್‌ಎಂಇಗಳ ಸಾಲ ಯೋಜನೆಗೆ 20 ಸಾವಿರ ಕೋಟಿ, ಕಾರ್ಮಿಕರಿಗೆ ಇಪಿಎಫ್‌ ಬೆಂಬಲಕ್ಕೆ 2,800 ಕೋಟಿ, ಎಂಜಿಐಸಿಗೆ ವಿಶೇಷ ನಗದು ಯೋಜನೆಗೆ 30,000 ಕೋಟಿ ರೂ. ಮೀಸಲು ಸೇರಿದಂತೆ ವಿವಿಧ ವಲಯಕ್ಕೆ ಮೊದಲ ಹಂತದ ಅನುದಾನ ಹಂಚಿಕೆ ಮಾಡಿದ್ದಾರೆ ಎಂದರು.

ಇನ್ನೂ 2ನೇ ಕಂತಿನಲ್ಲಿ 3,10,000 ಕೋಟಿ ಘೋಷಣೆ ಮಾಡಲಾಗಿದ್ದು, 3,10,000 ಕೋಟಿ ಎರಡು ತಿಂಗಳ ಕಾಲ ವಲಸಿಗ ಕಾರ್ಮಿಕರಿಗೆ ಉಚಿತ ಆಹಾರ ಧಾನ್ಯ ಪೂರೈಕೆಗೆ ಬಳಕೆ ಮಾಡಲಾಗುತ್ತಿದೆ. ಈ ಮೂಲಕ ಕೇಂದ್ರ ಸರ್ಕಾರ ಕೋವಿಡ್‌ ಮಹಾಮಾರಿ ನಿಯಂತ್ರಣದ ಜೊತೆಗೆ ದೇಶದ ಅಭಿವೃದ್ಧಿಗೆ ಒತ್ತು ನೀಡಲು 20 ಲಕ್ಷ ಕೋಟಿ ರೂ. ಘೋಷಣೆ ಮಾಡಿದ್ದಾರೆ ಎಂದರು.

ತಂಗಡಗಿ ಆಸ್ತಿ ಬಹಿರಂಗ ಪಡಿಸಲಿ: ಮಾಜಿ ಸಚಿವ ಶಿವರಾಜ ತಂಗಡಗಿ ಅವರು ಗಂಗಾವತಿ ಅಮೃತ ಸಿಟಿ ಯೋಜನೆಯಡಿ ಭ್ರಷ್ಟಾಚಾರ ನಡೆದಿದೆ. ನಾನು ಶಾಮೀಲಾಗಿದ್ದೇನೆ ಎನ್ನುವ ರೀತಿ ಹೇಳಿಕೆ ನೀಡಿದ್ದಾರೆ. ನನ್ನ ರಾಜಕೀಯ ಜೀವನದಲ್ಲಿ ಈ ವರೆಗೂ ಭ್ರಷ್ಟಾಚಾರದ ಕಪ್ಪು ಚುಕ್ಕೆ ಇಲ್ಲ. ಅವರಿಗೆ ಅನುಮಾನವಿದ್ದರೆ 1978ರಿಂದ ಹಿಡಿದು ಈ ವರೆಗಿನ ಆಸ್ತಿಯನ್ನು ನಾನು ಬಹಿರಂಗ ಪಡಿಸಲು ಸಿದ್ಧನಿದ್ದೇನೆ. ತಂಗಡಗಿ ಶಾಸಕರಾಗಿದ್ದಾಗ ಗಳಿಸಿದ ಆಸ್ತಿ ಏಷ್ಟು ಎನ್ನುವುದನ್ನು ಅವರು ಬಹಿರಂಗ ಪಡಿಸಲಿ ಎಂದು ಸವಾಲ್‌ ಎಸೆದರು.

ಗಂಗಾವತಿಯಲ್ಲಿ ಅಮೃತ್‌ ಸಿಟಿ ಯೋಜನೆ ಕಾಮಗಾರಿ ಕಳಪೆಯಾಗಿದೆ ಎಂದು ನಾನೇ ಈ ಹಿಂದೆ ಹೇಳಿದ್ದೆ. ಇನ್ನೂ ಪರಣ್ಣ ಮುನವಳ್ಳಿ ಕಾಮಗಾರಿ ಚೆನ್ನಾಗಿದೆ ಎಂದರೆ ಅದು ಅವರ ಅಭಿಪ್ರಾಯ ಎಂದು ಅವರು ತಂಗಡಗಿವಿರುದ್ಧ ಗುಡುಗಿದರು. ಕೋವಿಡ್‌ 19 ಬಗ್ಗೆ ಜನರು ಭೀತಿಗೊಳಗಾಗಬಾರದು. ಗಂಗಾವತಿ ತಾಲೂಕಿನ ಹಿರೇಜಂತಕಲ್‌, ಸಂಗಾಪುರದಲ್ಲಿ ಗುರುವಾರ ರಾತ್ರಿ ನಡೆದ ಘಟನೆ ತಲೆ ತಗ್ಗಿಸುವಂತಹದ್ದು ಎಂದರು.

Advertisement

ರಾಘವೇಂದ್ರ ಪಾನಘಂಟಿ, ನವೀನ್‌ ಗುಳಗಣ್ಣವರ್‌, ಬಸಯ್ಯ ಗದಗಿನಮಠ, ಜಿಪಂ ಸದಸ್ಯ ಕೆ. ಮಹೇಶ್‌, ಗಣೇಶ್‌ ಹೊರತಟ್ನಾಳ, ಇತರರು ಸುದ್ದಿಗೋಷ್ಠಿಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next