Advertisement

ಆದ್ಯತೆ ಮೇರೆಗೆ ಕೆರೆ ತುಂಬಿಸೋ ಕಾರ್ಯ

02:01 PM Feb 01, 2018 | Team Udayavani |

ಜಗಳೂರು: ನಾಡಿನಲ್ಲಿರುವ ಕೆರೆಗಳನ್ನು ತುಂಬಿಸುವ ಕೆಲಸವನ್ನು ಸರ್ಕಾರ ಆದ್ಯತೆಯ ಮೇರೆಗೆ ಮಾಡುತ್ತಿದೆ. ಈ ಕೆಲಸವನ್ನು ಮುಂದೆಯೂ ಮಾಡುವಂತಹ ಯೋಜನೆಯನ್ನು ಸರ್ಕಾರ ಇಟ್ಟುಕೊಂಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

Advertisement

ಜಗಳೂರು ಪಟ್ಟಣದಲ್ಲಿ ನಡೆದ ತರಳಬಾಳು ಹುಣ್ಣಿಮೆ ಮಹೋತ್ಸವದ ಅಂತಿಮ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೆರೆಗಳನ್ನು ತುಂಬಿಸುವ ಕಾರ್ಯದಿಂದ ಅಂತರ್ಜಲ ಮಟ್ಟ ಹೆಚ್ಚಿ ಬೇಸಾಯ ನಂಬಿಕೊಂಡಿರುವ ರೈತರ ಬದುಕು ಸಹ್ಯವಾಗಲಿದೆ ಎಂದರು. ಕೃಷಿ ಭಾಗ್ಯ ಮತ್ತು ನೀರಾವರಿಗೆ ಹೆಚ್ಚು ಒತ್ತು ನೀಡುವ ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗಿದೆ. ಕೆರೆಗಳು ಒತ್ತುವರಿಯಾಗಿ ಅವುಗಳು ತಮ್ಮ ಮೂಲ ಸ್ವರೂಪವನ್ನು ಕಳೆದುಕೊಂಡಿವೆ. ಅವುಗಳನ್ನು ರಕ್ಷಿಸುವುದು ಕೂಡ ಸರ್ಕಾರದ ಕೆಲಸ. ಆದುದರಿಂದ ಕೆರೆಗಳನ್ನು ರಕ್ಷಿಸುವ ಕೆಲಸವನ್ನು ಸಣ್ಣ ನೀರಾವರಿ ಇಲಾಖೆಗೆ ವರ್ಗಾಯಿಸಲಾಗಿದೆ ಎಂದು ತಿಳಿಸಿದರು.

ಅಪ್ಪರ್‌ ಭದ್ರಾ ಯೋಜನೆಯಡಿ ಜಗಳೂರು ಭಾಗದಲ್ಲಿರುವ 46 ಕೆರೆಗಳಿಗೆ ನೀರು ತುಂಬಿಸಲಾಗುವುದು. ಕೆರೆಗಳಿಗೆ ನೀರು ತುಂಬಿಸುವ ಕೆಲಸವನ್ನು ಕಳೆದ ಮೂರ್‍ನಾಲ್ಕು ವರ್ಷದಿಂದ ವ್ಯಾಪಕವಾಗಿ ಮಾಡುತ್ತಿದ್ದೇವೆ. ಇದಕ್ಕಾಗಿ 7000 ಕೋಟಿ
ರೂ. ಈಗಾಗಲೇ ಖರ್ಚು ಮಾಡಿದ್ದೇವೆ ಎಂದರು. ಅಂತರ್ಜಲ ಹೆಚ್ಚಿಸಲು ಅನುಕೂಲವಾಗು ವಂತೆ 1,82,000 ಕೃಷಿ ಹೊಂಡಗಳನ್ನು ನಿರ್ಮಿಸಲಾಗಿದೆ. ಇದರಿಂದ ಅಂತರ್ಜಲ ಮಟ್ಟ ಮತ್ತು ಕುಡಿಯುವ ನೀರು ಅಲ್ಲದೆ ಕೃಷಿಗೆ ಸಹ ನೀರು ಲಭ್ಯವಾಗುತ್ತದೆ. ಕೆರೆಗಳನ್ನು ತುಂಬಿಸುವ ಕೆಲಸ ಸಂಪೂರ್ಣ ಯಶಸ್ವಿಯಾದರೆ ಬರಮುಕ್ತ ರಾಜ್ಯವನ್ನಾಗಿ ಮಾಡಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ನಮ್ಮ ಸರ್ಕಾರ
ಪ್ರಾಮಾಣಿಕವಾಗಿ ಕೆಲಸ ಮಾಡಿದೆ ಎಂದರು.

ಕಳೆದ 13 ವರ್ಷಗಳಿಂದ ರಾಜ್ಯದಲ್ಲಿ ತೀವ್ರ ಬರಗಾಲ ಉಂಟಾಗಿದೆ. ನಮ್ಮ ಸರ್ಕಾರ ಬಂದಮೇಲೆ ಅನ್ನಭಾಗ್ಯ, ಕ್ಷೀರಭಾಗ್ಯ, 
ಮಾತೃಪೂರ್ಣ, ಇಂದಿರಾ ಕ್ಯಾಂಟಿನ್‌, ಮುಂತಾದ ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತರುವ ಮೂಲಕ ಕರ್ನಾಟಕವನ್ನು ಹಸಿವು ಮುಕ್ತ ಮತ್ತು ಬರ ಮುಕ್ತ ರಾಜ್ಯವನ್ನಾಗಿ ಮಾಡಬೇಕೆಂಬುದು ಸರ್ಕಾರದ ಆಶಯವಾಗಿದೆ ಎಂದು ತಿಳಿಸಿದರು. ತರಳಬಾಳು ಜಗದ್ಗುರು ಡಾ| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಧಾರ್ಮಿಕ ಕೆಲಸದ ಜೊತೆಗೆ ಜನರ ನೋವುಗಳಿಗೆ ಸ್ಪಂದಿಸುವಂತಹ ಹಲವು ಕಾರ್ಯಗಳನ್ನು ಮಾಡುತ್ತಿದ್ದಾರೆ. ಈ ಕಾರ್ಯಕ್ರಮಗಳ ಮೂಲಕ ಜನರ ಸಮಸ್ಯೆಗಳನ್ನು ತಿಳಿದು ಅವುಗಳಿಗೆ ಪರಿಹಾರವನ್ನು ಜನಪ್ರತಿನಿಧಿಗಳ ಮೂಲಕ ಇಲ್ಲವೇ ಸರ್ಕಾರದ ಮೂಲಕ ಪರಿಹಾರವನ್ನು ಕಂಡುಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.

ಬಸವಾದಿ ಶಿವಶರಣರು ಸಮಾಜದಲ್ಲಿರುವ ಮೇಲು ಕೀಳು, ಜಾತಿ ವ್ಯವಸ್ಥೆಯಿಂದ ಆಗಿರುವಂತಹ ತಾರತಮ್ಯಗಳನ್ನು ನಿರ್ಮೂಲನೆ ಮಾಡಿ ಸಮಸಮಾಜ ನಿರ್ಮಾಣವಾಗಬೇಕು. ಧರ್ಮದ ತಳಹದಿಯ ಮೇಲೆ ಸಮಾಜ ನಿರ್ಮಾಣವಾಗಬೇಕೆಂದು ಕನಸು ಕಂಡಿದ್ದರು
ಎಂದು ತಿಳಿಸಿದರು. ಅನೇಕ ವರ್ಷಗಳಿಂದ ಬಸವಾದಿ ಶರಣರು ಮಾಡಿರುವ ಪ್ರಯತ್ನಕ್ಕೆ ಸಿರಿಗೆರೆಯ ತರಳಬಾಳು ಜಗದ್ಗುರುಗಳು,
ಬೃಹನ್ಮಠ ಇಂಬು ಕೊಟ್ಟು ಕೆಲಸ ಮಾಡುತ್ತಿದೆ. ಪ್ರತಿಯೊಬ್ಬರು ಕೂಡ ನಾವು ಮಾನವರಾಗಿ ಬದುಕುವಂತಹ ಪ್ರಯತ್ನ
ಮಾಡಬೇಕಾಗಿದೆ. ಕುವೆಂಪು ಅವರು ಹೇಳಿದ ನಿಟ್ಟಿನಲ್ಲಿ ವಿಶ್ವಮಾನವರಾಗಲು ಬದುಕಿನಲ್ಲಿ ಪ್ರಯತ್ನಗಳನ್ನು ಮಾಡಬೇಕು.
ಅದು ತರಳಬಾಳು ಶ್ರೀಗಳ ಆಶಯವೂ ಕೂಡ ಆಗಿದೆ ಎಂದು ಹೇಳಿದರು.

Advertisement

ಕೆಲವರು ಧರ್ಮದ ಬಗ್ಗೆ ತಪ್ಪು ವಿವರಣೆ ನೀಡುತ್ತಿದ್ದಾರೆ. ಧರ್ಮದಲ್ಲಿ ಸಂಘರ್ಷ ಉಂಟುಮಾಡುವ ಪ್ರಯತ್ನಗಳು ಅಲ್ಲಲ್ಲಿ ನಡೆಯುತ್ತಿವೆ. ಸಂಘರ್ಷಗಳು ಮನುಕುಲದ ಉದ್ಧಾರದ ಪರವಾಗಿ ಇರುವುದಿಲ್ಲ. ಪ್ರತಿಯೊಂದು ಧರ್ಮದ ಉದ್ದೇಶ ಮನುಕುಲದ ಉದ್ಧಾರವೇ
ಆಗಿರುತ್ತದೆ. ಪ್ರತಿಯೊಬ್ಬರೂ ಯಾವುದೇ ಧರ್ಮಕ್ಕೆ ಸೇರಿರಲಿ ಅದರ ಬಗ್ಗೆ ನಿಷ್ಠೆ ಇರಬೇಕು. ಪರಧರ್ಮದ ಬಗ್ಗೆ ಸಹಿಷ್ಣುತೆ
ಇರಬೇಕು. ಸಹಿಷ್ಣುತೆಯನ್ನು ಬದುಕಿನಲ್ಲಿ ಕಲಿತುಕೊಂಡರೆ ಸಮಾಜದಲ್ಲಿ ಅಶಾಂತಿ, ನೆಮ್ಮದಿಗೆ ಭಂಗ ಬರುವುದಿಲ್ಲ. ಆಗ
ಮನುಷ್ಯರ ಮಧ್ಯೆ ದ್ವೇಷ ಮತ್ತು ಈಷ್ಯೆì ಇಲ್ಲವಾಗಲು ಸಹಾಯಕವಾಗುತ್ತದೆ ಎಂದರು. ಮಾನವೀಯ ಮೌಲ್ಯಗಳನ್ನು ಜನರಲ್ಲಿ
ಬೆಳೆಸುವ ಕೆಲಸವನ್ನು ತರಳಬಾಳು ಉತ್ಸವ ಮಾಡುತ್ತಿದೆ. ಮೈಸೂರಿನಲ್ಲಿ ನಡೆಯುತ್ತಿರುವ ದಸರಾ ಹಬ್ಬವನ್ನು ಹೊರತು 
ಪಡಿಸಿದರೆ ತರಳಬಾಳು ಹುಣ್ಣಿಮೆ ಮಹೋತ್ಸವವೇ ಬಹುದೊಡ್ಡ ಧಾರ್ಮಿಕ ಹಬ್ಬವಾಗಿದೆ. ಇಲ್ಲಿ ಧರ್ಮ, ಸಂಸ್ಕೃತಿ, ಕಲೆ, ನೆಲ, ಜಲ
ಇವೆಲ್ಲವುಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಆಗುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು. 

ಜಗಳೂರು, ಹರಪನಹಳ್ಳಿ, ದಾವಣಗೆರೆ ಭಾಗದಲ್ಲಿ ಮೆಕ್ಕೆಜೋಳಕ್ಕೆ ಸೈನಿಕ ಹುಳು ಹಾವಳಿಯಿಂದ 50 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ನಾಶವಾಗಿದೆ. ಜಿಲ್ಲಾಧಿಕಾರಿಗಳೊಂದಿಗೆ ಮಾತಾಡಿದ್ದೇನೆ. ಅದನ್ನು ಪರಿಶೀಲನೆ ಮಾಡಿ ಗಮನಕ್ಕೆ ತರಬೇಕು. ಬೆಳೆಹಾನಿಗೆ ಪರಿಹಾರ ಕೊಡುವ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು. 

ವಿಧಾನಸಭಾ ಅಧ್ಯಕ್ಷ ಕೆ.ಬಿ. ಕೋಳಿವಾಡ, ಸಚಿವರಾದ ಎಸ್‌.ಎಸ್‌. ಮಲ್ಲಿಕಾರ್ಜುನ್‌, ಎಚ್‌. ಆಂಜನೇಯ, ಸಂಸದ ಬಿ.ಎನ್‌. ಚಂದ್ರಪ್ಪ, ಶಾಸಕರಾದ ಎಚ್‌.ಪಿ. ರಾಜೇಶ್‌, ಮೋಹನ್‌ ಕೊಂಡಜ್ಜಿ, ಮಾಜಿ ಶಾಸಕರಾದ ಎಸ್‌.ವಿ. ರಾಮಚಂದ್ರ, ಟಿ. ಗುರುಸಿದ್ದನಗೌಡ, ಕೆ.ಆರ್‌. ಜಯದೇವಪ್ಪ, ಅಣಬೇರು ರಾಜಣ್ಣ, ಕೆ.ಬಿ. ಕಲ್ಲೇರುದ್ರೇಶ್‌, ಡಾ| ಜಿ. ಮಂಜುನಾಥಗೌಡ, ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜೀವ್‌ ಚಾವ್ಲಾ ಇತರರು ಇದ್ದರು. 

ಸಿಎಂ ಭಾಷಣದ ಸಂದರ್ಭ ಗದ್ದಲ…
ಸಿಎಂ ಸಿದ್ಧರಾಮಯ್ಯ ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ತಮ್ಮ ಭಾಷಣ ಮಾಡುತ್ತ ಸರ್ಕಾರ ಜಾರಿಗೊಳಿಸಿದ ಯೋಜನೆಗಳ ಬಗ್ಗೆ ವಿವರಿಸುತ್ತಿದ್ದಾಗ ಕೆಲವು ಸಭಿಕರು ಮೋದಿ… ಮೋದಿ… ಎಂದು ಕೂಗಿದರು. ಈ ಬಗ್ಗೆ ತಲೆಕೆಡಿಸಿಕೊಳ್ಳದ ಸಿದ್ಧರಾಮಯ್ಯ ತಮ್ಮ ಭಾಷಣ ಮುಂದುವರೆಸಿದರು. ಸಭಿಕರ ಕೂಗು ಹೆಚ್ಚಾದಾಗ ತರಳಬಾಳು ಶ್ರೀಗಳು ಮೈಕ್‌ ತೆಗೆದುಕೊಂಡು ಇದು ರಾಜಕೀಯ ವೇದಿಕೆಯಲ್ಲ… ಅವರು ನಾಡಿನ ಮುಖ್ಯಮಂತ್ರಿಗಳು. ಅವರ ಮಾತುಗಳನ್ನು ಎಲ್ಲರೂ ಗಂಭೀರವಾಗಿ ಕೇಳಬೇಕು. ಧರ್ಮಸಭೆಯಲ್ಲೂ ರಾಜಕೀಯ ಮಾಡುವರು ಈ ವೇದಿಕೆಯಿಂದ ಹೊರಗೆ ಇರಲಿ ಎಂಬುದಾಗಿ ಗದರಿದರು.

Advertisement

Udayavani is now on Telegram. Click here to join our channel and stay updated with the latest news.

Next