Advertisement

“ಎತ್ತಪೋತ’ಬಳಿ ಸೌಲಭ್ಯ ಕಲ್ಪಿಸಲು ಆದ್ಯತೆ

06:47 PM Apr 06, 2021 | Team Udayavani |

ಚಿಂಚೋಳಿ: ತಾಲೂಕಿನ ಕುಂಚಾವರಂ ವನ್ಯಜೀವಿಧಾಮ ಅರಣ್ಯಪ್ರದೇಶದಲ್ಲಿ ಇರುವ ಎತ್ತಪೋತ ಜಲಧಾರೆ ಹತ್ತಿರ ಪ್ರವಾಸಿಗರಿಗೆ ಮೂಲ ಸೌಕರ್ಯ ಕಲ್ಪಿಸಿಕೊಡುವುದಕ್ಕಾಗಿ ಪ್ರವಾಸೋದ್ಯಮ ಇಲಾಖೆಯಿಂದ 2 ಕೋಟಿ ರೂ. ಅನುದಾನ ನೀಡಲಾಗುವುದು ಎಂದು ಪ್ರವಾಸೋದ್ಯಮ ಪರಿಸರ
ಮತ್ತು ಜೀವಶಾಸ್ತ್ರ ಸಚಿವ ಸಿ.ಪಿ. ಯೋಗೇಶ್ವರ ಭರವಸೆ ನೀಡಿದರು.

Advertisement

ಎತ್ತಪೋತ ಜಲಧಾರೆ ಪ್ರದೇಶಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕ ಬಗ್ಗೆ ಉದಾಸೀನ ಮಾಡಲಾಗುತ್ತಿದೆ ಎಂಬ ಕೂಗು ಇದೆ.

ಅದನ್ನು ಹೋಗಲಾಡಿಸುವುದಕ್ಕಾಗಿ ಹಿಂದುಳಿದ ಪ್ರದೇಶದಲ್ಲಿ ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸಲು ಪ್ರವಾಸೋದ್ಯಮ ಇಲಾಖೆಯಿಂದ ಸಾಕಷ್ಟು ಯೋಜನೆಗಳನ್ನು ರೂಪಿಸಲಾಗುತ್ತಿದೆ. ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಹೆಚ್ಚು ಅರಣ್ಯಪ್ರದೇಶ ಹೊಂದಿರುವ ಕುಂಚಾವರಂ ಅರಣ್ಯವು ನೈಸರ್ಗಿಕವಾಗಿರುವ ಸುಂದರ ಸೊಬಗನ್ನು ಹೊಂದಿರುವ ಪ್ರದೇಶವಾಗಿದೆ. ಇಲ್ಲಿಗೆ ಪ್ರವಾಸಿಗರನ್ನು ಆಕರ್ಷಿಸಲು ಪ್ರವಾಸಿ ತಾಣ ಎತ್ತಪೋತ ಸ್ಥಳದಲ್ಲಿ ಮೂಲ ಸೌಲಭ್ಯಗಳಾದ ರಸ್ತೆ, ಶೌಚಾಲಯ, ಕುಡಿಯುವ ನೀರು, ಯಾತ್ರಿ ನಿವಾಸ ನಿರ್ಮಿಸಿದರೆ ಪ್ರವಾಸಿಗರು ತಮ್ಮ ಕುಟುಂಬ ಸಮೇತ ಆಗಮಿಸಿ ಮಳೆಗಾಲದಲ್ಲಿ ಹರಿಯುವ ಜಲಧಾರೆಯನ್ನು ನೋಡಿ ಆನಂದಿಸಬಹುದಾಗಿದೆ. ಪ್ರವಾಸೋದ್ಯಮ ಇಲಾಖೆಯಿಂದ ಅರಣ್ಯಪ್ರದೇಶದಲ್ಲಿ ಯಾವುದೇ ಪರಿಸರ ಹಾನಿ ಆಗದಂತೆ ನೋಡಿಕೊಳ್ಳಲಾಗುವುದು ಎಂದು ಹೇಳಿದರು.

ಈ ಭಾಗದಲ್ಲಿ ಇರುವ ಪ್ರವಾಸಿ ತಾಣಗಳು ಸಾಕಷ್ಟು ನಿರ್ಲಕ್ಷತನಕ್ಕೆ ಒಳಗಾಗಿವೆ. ಬಿಜೆಪಿ ಸರಕಾರದಲ್ಲಿ ಹಣದ ಕೊರತೆ ಏನು ಇಲ್ಲ. ಎತ್ತಪೋತ ಜಲಪಾತ
ಬಳಿ ಈಗಾಗಲೇ ಮೂಲ ಸೌಕರ್ಯಗಳ ಬಗ್ಗೆ ಸಮೀಕ್ಷೆ ನಡೆಸಿ ಕೆಲಸಗಳನ್ನು ಪ್ರಾರಂಭಿಸುವಂತೆ ಅಧಿಕಾರಿಗಳಿಗೆ  ಸೂಚಿಸುತ್ತೇನೆ. ಇನ್ನೆರಡು ತಿಂಗಳಲ್ಲಿ ಮತ್ತೆ ಚಿಂಚೋಳಿ ತಾಲೂಕಿನಲ್ಲಿ ಪ್ರವಾಸ ಮಾಡಿ ನಾನೇ ಖುದ್ದು ಮೂಲ ಸೌಕರ್ಯಗಳನ್ನು ಉದ್ಘಾಟಿಸುತ್ತೇನೆ.

ಚಂದ್ರಂಪಳ್ಳಿಯ ಪ್ರವಾಸಿ ತಾಣದಲ್ಲಿ ಹೆಲಿಪ್ಯಾಡ್‌ ನಿರ್ಮಿಸಿದರೆ ಕಲಬುರಗಿ ಬಂದ ಪ್ರವಾಸಿಗರು ನೇರವಾಗಿ ಇಲ್ಲಿಗೆ ಬಂದು ಹೋಗಲು ಅನುಕೂಲವಾಗಲಿದೆ ಎಂದು ಹೇಳಿದರು. ಸಂಸದ ಡಾ| ಉಮೇಶ ಜಾಧವ್‌ ಮಾತನಾಡಿ, ಚಿಂಚೋಳಿ ತಾಲೂಕಿನಲ್ಲಿ ಪ್ರವಾಸಿ ತಾಣಗಳಿದ್ದರೂ ಅವುಗಳ ನಿರ್ಲಕ್ಷಕ್ಕೆ ಒಳಗಾಗಿವೆ
ಎಂದು ಲೋಕಸಭೆಯಲ್ಲಿ ಧ್ವನಿ ಎತ್ತಿದ್ದೇನೆ. ಭೌಗೋಳಿಕವಾಗಿ ಒಳ್ಳೆಯ ಸ್ಥಳ ಎತ್ತಪೋತ, ಗೊಟ್ಟಂಗೊಟ್ಟ ಬಕ್ಕಪ್ರಭು ದೇವಸ್ಥಾನ, ಚಂದ್ರಂಪಳ್ಳಿ ಪ್ರವಾಸಿ ತಾಣಗಳಾಗಿವೆ. ಮೈಸೂರು ಭಾಗದಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ಆಗಿರುವ ಅಭಿವೃದ್ಧಿ ಕೆಲಸಗಳು ನಮ್ಮಲ್ಲಿಯೂ ಆಗಬೇಕು
ಎಂದು ಸಚಿವರ ಗಮನಕ್ಕೆ ತಂದರು. ಶಾಸಕ ಡಾ| ಅವಿನಾಶ ಜಾಧವ ಮಾತನಾಡಿದರು.

Advertisement

ಜಿಪಂ ಸದಸ್ಯ ಗೌತಮ್‌ ಪಾಟೀಲ, ಅಜೀತ ಪಾಟೀಲ, ಲಕ್ಷ್ಮಣ ಆವಂಟಿ, ಸಂತೊಷ ಗಡಂತಿ, ವಿಜಯಕುಮಾರ ರಾಠೊಡ್‌, ಭೀಮಶೆಟ್ಟಿ ಮುರುಡಾ, ಅಲ್ಲಮಪ್ರಭು
ಹುಲಿ, ಗಿರಿರಾಜ ನಾಟೀಕಾರ, ಪ್ರೇಮಸಿಂಗ ಜಾಧವ್‌, ವನ್ಯಜೀವಿಧಾಮ ಅರಣ್ಯಾಧಿಕಾರಿ ಸಂಜೀವಕುಮಾರ ಚವ್ಹಾಣ, ಎಸಿಎಫ್‌ ಬಾಬುರಾವ ಪಾಟೀಲ, ಶ್ರೀಮಂತ ಕಟ್ಟಿಮನಿ, ಅರುಣ ಪವಾರ, ಜಗದೀಶಸಿಂಗ ಠಾಕೂರ, ಶಾಂತುರೆಡ್ಡಿ, ಕಿರಣರೆಡ್ಡಿ ಮಿರಿಯಾಣ, ಶೈಲೇಶ ಹುಲಿ, ಸತೀಶರೆಡ್ಡಿ ತಾಜಲಾಪುರ ಇದ್ದರು.

ಸಮ್ಮಿಶ್ರ ಸರಕಾರದಲ್ಲಿ ಚಿಂಚೋಳಿ ಶಾಸಕರಾಗಿದ್ದ ಡಾ| ಉಮೇಶ ಜಾಧವ್‌ ಅವರನ್ನು ಶಾಸಕ ಸ್ಥಾನ ಬಿಡಿಸಿ ಒತ್ತಾಯ ಪೂರ್ವಕವಾಗಿ ಬಿಜೆಪಿಗೆ ಸೇರ್ಪಡೆ
ಮಾಡಿಸಿದ್ದೇನೆ. ಚಿಂಚೋಳಿ ಮತಕ್ಷೇತ್ರದ ಶಾಸಕರನ್ನು ರಾಜೀನಾಮೆ ಕೊಡಿಸಲು ನಾನೇ ಪ್ರಮುಖ ಕಾರಣನಾಗಿದ್ದೇನೆ. ಇದರಲ್ಲಿ ನನ್ನ ಪಾತ್ರ ಪ್ರಮುಖವಾಗಿದೆ. ಬಿಜೆಪಿ ಸರಕಾರದಲ್ಲಿ ನನ್ನ ಪಾತ್ರ ಹಿರಿದಾಗಿದೆ.
ಸಿ.ಪಿ. ಯೋಗೇಶ್ವರ, ಸಚಿವ

Advertisement

Udayavani is now on Telegram. Click here to join our channel and stay updated with the latest news.

Next