ಯಾದಗಿರಿ: ಗ್ರಾಮೀಣ ಭಾಗದಲ್ಲಿನ ಅವ್ಯವಸ್ಥೆಯ ಬಗ್ಗೆ ಸಂಘ-ಸಂಸ್ಥೆಗಳು ಸರಕಾರದ ಗಮನ ಸೆಳೆಯುವ ಮೂಲಕ ಸಮಾಜಮುಖೀಯಾಗಿ ಕಾರ್ಯನಿರ್ವಹಿಸಬೇಕು ಎಂದು ಮಾಜಿ ಶಾಸಕ ಡಾ| ವೀರಬಸವಂತರಡ್ಡಿ ಮುದ್ನಾಳ ಹೇಳಿದರು.
ನಗರದ ವಿದ್ಯಾಮಂಗಲ ಕಾರ್ಯಾಲಯದಲ್ಲಿ ಜೈ ಛತ್ರಪತಿ ಶಿವಾಜಿ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಟ್ರಸ್ಟ್‌ನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಂಘ-ಸಂಸ್ಥೆಗಳು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುವ ಅವಶ್ಯಕತೆ ಇದೆ ಎಂದರು.
ಸಮಾಜದಲ್ಲಿನ ವ್ಯವಸ್ಥೆಯನ್ನು ಸರಿದಾರಿಗೆ ತರಲು ಕೇವಲ ಸರಕಾರ ಮಾತ್ರ ಶ್ರಮಿಸಿದರೆ ಸಾಲದು. ಸರಕಾರದ ಜೊತೆ ಸಂಘ-ಸಂಸ್ಥೆಗಳು ಕೂಡ ಜನಜಾಗೃತಿಗೆ ಮುಂದಾಗಬೇಕು ಎಂದು ಸಲಹೆ ನೀಡಿದರು. ಮುಖ್ಯವಾಗಿ ಶಿಕ್ಷಣ, ಆರೋಗ್ಯ ಸೇರಿದಂತೆ ಯುವ ಜನಾಂಗದಲ್ಲಿ ಸ್ವಾವಲಂಬಿ ಜೀವನ ಕಲ್ಪಿಸಲು ಈ ಟ್ರಸ್ಟ್ ಪ್ರಯತ್ನಿಸಲಿ. ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಪರುಶುರಾಮ ಸೇಗೂರಕರ್, ದೂರದೃಷ್ಠಿ ಹೊಂದಿದ ಸರಳ ವ್ಯಕ್ತಿಯಾಗಿದ್ದು, ಯುವ ಜನಾಂಗಕ್ಕೆ ಅನುಕೂಲವಾಗುವ ಕೆಲಸ ನಿರಂತರವಾಗಿ ನಡೆಯಲಿ ಎಂದು ಹಾರೈಸಿದರು.
ಬಿಜೆಪಿ ಯುವ ಮುಖಂಡ ಮಹೇಶರಡ್ಡಿ ಮುದ್ನಾಳ ಮಾತನಾಡಿ, ಸಮಾಜದಲ್ಲಿನ ಅವ್ಯವಸ್ಥೆ ಸರಿದಾರಿಗೆ ತರುವ ನಿಟ್ಟಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಂಘ-ಸಂಸ್ಥೆಗಳು ಹುಟ್ಟಿಕೊಳ್ಳುತ್ತಿರುವುದು ಉತ್ತಮ ಬೆಳವಣಿಗೆ ಎಂದರು. ಕಾರ್ಯಕ್ರಮದಲ್ಲಿ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಪರುಶುರಾಮ ಸೇಗೂರಕರ್, ಶಂಕರ ಗೋಸಿ, ಜಿಪಂ ಸದಸ್ಯ ಅಮರದೀಪ, ಶ್ರೀರಾಮಸೇನೆ ಸಂಘಟನೆ ಜಿಲ್ಲಾಧ್ಯಕ್ಷ ವಿಜಯ ಪಾಟೀಲ್, ಶ್ರೀಧರ ಘಂಟಿ, ರವಿ ಕೆ. ಮುದ್ನಾಳ, ಭೀಮರಾಯ ಮುಂಡರಗಿ, ವೆಂಕಟೇಶ ಇದ್ದರು.