ಹಲವು ಸೇವೆಗಳನ್ನು ಪರಿಣಾಮಕಾರಿಯಾಗಿ ಒದಗಿಸುವಲ್ಲಿ ಸಂಬಂಧಪಟ್ಟ ಇಲಾಖೆಗಳು ವಿಫಲವಾಗಿವೆ. ಎನ್‌ಜಿಟಿ ತೀರ್ಪನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಸರ್ಕಾರ ಪರಿಸರ ಸಂರಕ್ಷಣೆಯ ಬದ್ಧತೆಯನ್ನು ಪ್ರದರ್ಶಿಸಿಬೇಕಿದೆ.
ನದಿ ಪಕ್ಕ ನಾಗರಿಕತೆ ಬೆಳೆದು ಬಂದಿರುವುದು ಅನಾದಿ ಕಾಲದಿಂದಲೂ ಇದೆ. ಆದರೆ ನದಿ ಮೂಲವಿಲ್ಲದಿದ್ದರೂ ಬೆಂಗಳೂರು ಇಂದು ಜಗತ್ತಿನಲ್ಲೇ ಅತಿ ವೇಗವಾಗಿ ಬೆಳೆಯುತ್ತಿರುವ ನಗರವಾಗಿ ರೂಪುಗೊಂಡಿದೆ. ಬೆಂಗಳೂರಿನ ಬೆಳವಣಿಗೆ ಬಗ್ಗೆ ದೂರದೃಷ್ಟಿ ಹೊಂದಿದ್ದ ನಾಡಪ್ರಭು ಕೆಂಪೇಗೌಡರು 500 ವರ್ಷಗಳ ಹಿಂದೆಯೇ ಸಾವಿರಾರು ಕೆರೆ ಕಟ್ಟೆಗಳನ್ನು ನಿರ್ಮಿಸಿ ನೀರಿನ ಮೂಲ ಸೃಷ್ಟಿಸಿದ್ದರು. ಆದರೆ ನಗರ ಬೆಳೆದಂತೆಲ್ಲಾ ಕೆರೆಗಳು ಕಣ್ಮರೆಯಾಗಲಾರಂಭಿಸಿದ್ದು ವಿಪರ್ಯಾಸ. ಒಂದೆಡೆ ಕೆರೆಗಳು ನಾಶವಾದರೆ ಇನ್ನೊಂದೆಡೆ ಕೆರೆಗಳಿಗೆ ವಿಷಯುಕ್ತ ಅಂಶಗಳು, ರಾಸಾಯನಿಕ ಪದಾರ್ಥ ಸೇರ್ಪಡೆಯಾಗಿ ಕಲುಷಿತಗೊಳ್ಳಲಾರಂಭಿಸಿದವು. ಶುದ್ಧ ನೀರು ಹರಿಯಬೇಕಿದ್ದ ಕೆರೆಗಳಲ್ಲಿ ಭಾರಿ ನೊರೆ, ಬೆಂಕಿ ಕಾಣಿಸಿಕೊಂಡು ಸಾರ್ವಜನಿಕರಲ್ಲಿ ಭೀತಿ ಹುಟ್ಟಿಸಿತು. ಬೆಳ್ಳಂದೂರು, ಅಗರ, ವರ್ತೂರು ಕೆರೆಗಳ ಶೋಚನೀಯ ಸ್ಥಿತಿ ಕಂಡು ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡ ರಾಷ್ಟ್ರೀಯ ಹಸಿರು ನ್ಯಾಯಪೀಠವು ನಿರಂತರವಾಗಿ ಬಿಡಿಎ, ಬಿಬಿಎಂಪಿ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸೇರಿದಂತೆ ರಾಜ್ಯ ಸರ್ಕಾರಕ್ಕೆ ಚಾಟಿ ಬೀಸಿತ್ತು. ವರ್ಷಗಳ ಕಾಲ ಸುದೀರ್ಘ ವಿಚಾರಣೆ ಬಳಿಕ ಅಂತಿಮವಾಗಿ ಬೆಂಗಳೂರು ವ್ಯಾಪ್ತಿಯ ಕೆರೆಗಳ ಸಂರಕ್ಷಣೆಗಾಗಿ 500 ಕೋಟಿ ರೂ. ಮೊತ್ತದ ಮೀಸಲು ನಿಧಿ ಸ್ಥಾಪಿಸಬೇಕೆಂಬ ಮಹತ್ತರ ತೀರ್ಪು ನೀಡಿರುವುದು ಸ್ವಾಗತಾರ್ಹ.
ಸುಮಾರು 800 ಚದರ ಕಿ.ಮೀ. ಪ್ರದೇಶ ಹಾಗೂ ಒಂದು ಕೋಟಿಗಿಂತ ಹೆಚ್ಚು ಜನ ನೆಲೆಸಿರುವ ಬೆಂಗಳೂರಿನಲ್ಲಿ ಕಾವೇರಿ ನದಿ ಹಾಗೂ ಕೊಳವೆ ಬಾವಿ ಹೊರತುಪಡಿಸಿ ಪರ್ಯಾಯ ನೀರಿನ ಮೂಲವೆನಿಸಿರುವ ಕೆರೆಗಳನ್ನು ಸಂರಕ್ಷಿಸಿ ಸುಸ್ಥಿತಿಯಲ್ಲಿ ಇಟ್ಟುಕೊ ಳ್ಳುವಂತೆ ಎನ್‌ಜಿಟಿ ರಾಜ್ಯ ಸರ್ಕಾರಕ್ಕೆ ಹತ್ತಾರು ಬಾರಿ ತಾಕೀತು ಮಾಡಿದೆ. ಈ ಹಿಂದೆ ನೀಡಿದ್ದ ಸೂಚನೆ, ನಿರ್ದೇಶನಗಳ ಪಾಲನೆಯಲ್ಲಿ ರಾಜ್ಯ ಸರ್ಕಾರ ಹಾಗೂ ಸ್ಥಳೀಯ ಸಂಸ್ಥೆಗಳು ನಿರ್ಲಕ್ಷ್ಯ ತೋರಿದ್ದನ್ನು ಮರೆಯದ ಎನ್‌ಜಿಟಿಯು ತನ್ನ ತೀರ್ಪು ಪಾಲಿಸದಿದ್ದರೆ ಮೀಸಲು ನಿಧಿಗೆ ಇನ್ನೂ 100 ಕೋಟಿ ರೂ. ಹೆಚ್ಚುವರಿ ಹಣ ಮೀಸಲಿಡುವಂತೆ ಆದೇಶ ನೀಡುವ ಎಚ್ಚರಿಕೆಯನ್ನೂ ನೀಡಿದೆ. ಆ ಮೂಲಕ ತೀರ್ಪು ಪಾಲನೆಯ ಮೇಲ್ವಿಚಾರಣೆಯನ್ನು ನಿರಂತರವಾಗಿ ನಡೆಸಲಿದೆ ಎಂಬ ಸಂದೇಶವನ್ನು ಎನ್‌ಜಿಟಿ ಸಾರಿದಂತಾಗಿದೆ.
ಉದ್ಯಾನ ನಗರಿಯ ನೀರಿನ ಸೆಲೆಗಳಾದ ಕೆರೆಗಳ ಅಭಿವೃದ್ಧಿಗೆ ಮೀಸಲು ನಿಧಿ ಸ್ಥಾಪಿಸಬೇಕೆಂಬ ತೀರ್ಪಿನ ಜತೆಗೆ ಈ ಹಿಂದೆ ತಾನು ನೀಡಿದ್ದ ಮಾರ್ಗಸೂಚಿಗಳ ಅನುಷ್ಠಾನದ ಬಗ್ಗೆ ಮೇಲ್ವಿಚಾರಣೆಗಾಗಿ ಬೆಂಗಳೂರಿನವರೇ ಆದ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಅವರ ಅಧ್ಯಕ್ಷತೆಯಲ್ಲಿ ಹೊಸ ಮಂಡಳಿ ರಚಿಸುವಂತೆ ಸೂಚಿಸಿರುವುದು ಅಭಿನಂದನಾರ್ಹ. ಲೋಕಾಯುಕ್ತ ಸಂಸ್ಥೆಯಲ್ಲಿದ್ದಾಗ ಅಕ್ರಮ ಗಣಿಗಾರಿಕೆ ಸಂಬಂಧಪಟ್ಟ ಪ್ರಕರಣಗಳ ತನಿಖೆ ನಡೆಸಿ ಮುಖ್ಯಮಂತ್ರಿ ಸ್ಥಾನದಲ್ಲಿದ್ದವರು ಜೈಲು ಪಾಲಾಗುವಂತೆ ಮಾಡಿ ಸಾರ್ವಜನಿಕರಲ್ಲಿ ವಿಶ್ವಾಸ ಮೂಡಿಸಿದ್ದ ಸಂತೋಷ್ ಹೆಗ್ಡೆ ಅವರ ಅಧ್ಯಕ್ಷತೆಯಲ್ಲೇ ಮಂಡಳಿ ರಚನೆಯಾಗಬೇಕೆಂದು ತೀರ್ಪು ನೀಡಿರುವುದು ಕೆರೆಗಳ ಸಂರಕ್ಷಣೆಯಾಗುವ ಭರವಸೆ ಹುಟ್ಟಿಸಿದೆ. ಇನ್ನಾದರೂ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ಕೆರೆಗಳಿಗೆ ಕಲುಷಿತ ನೀರು ಸೇರದಂತೆ ತಡೆದು ಶುದ್ಧ ನೀರು ಹರಿಯುವ ವ್ಯವಸ್ಥೆ ಕಲ್ಪಿಸಿದರೆ ಎನ್‌ಜಿಟಿ ಆದೇಶ ಪಾಲನೆಯಷ್ಟೇ ಅಲ್ಲ, ನಗರದ ಪರಿಸರ, ಸೌಂದರ್ಯ ಹಾಗೂ ಜಲಮೂಲವನ್ನು ಸಂರಕ್ಷಿಸಿದ ಹಿರಿಮೆಗೆ ಪಾತ್ರವಾಗಲಿದೆ.
ಹಾಗಾಗಿ ಎನ್‌ಜಿಟಿ ತೀರ್ಪನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಸರ್ಕಾರ ಪರಿಸರ ಸಂರಕ್ಷಣೆಯ ಬದ್ಧತೆಯನ್ನು ಪ್ರದರ್ಶಿಸಿಬೇಕಿದೆ. ರಸ್ತೆ, ತ್ಯಾಜ್ಯ ನಿರ್ವಹಣೆ, ಮಳೆ ನೀರು ಕಾಲುವೆ ನಿರ್ವಹಣೆ ಸೇರಿದಂತೆ ಹಲವು ಸೇವೆಗಳನ್ನು ಪರಿಣಾಮಕಾರಿಯಾಗಿ ಒದಗಿಸುವಲ್ಲಿ ಸಂಬಂಧಪಟ್ಟ ಇಲಾಖೆಗಳು ವಿಫಲವಾಗಿವೆ. ಸಾರ್ವಜನಿಕರ ಪ್ರತಿರೋಧ ಇಲ್ಲವೇ ನ್ಯಾಯಾಲಯದ ಮಧ್ಯಪ್ರವೇಶವಾದರಷ್ಟೇ ಸಮಸ್ಯೆಗಳು ಪರಿಹಾರ ವಾಗಲಿದೆ ಎಂಬುವಷ್ಟರ ಮಟ್ಟಿಗೆ ಆಡಳಿತ ನಡೆಸುವ ಸಂಸ್ಥೆಗಳು, ಸರ್ಕಾರಗಳು ಜವಾಬ್ದಾರಿ ಮರೆಯುತ್ತಿರುವುದು ಆತಂಕಕಾರಿ ಬೆಳವಣಿಗೆ. ಇನ್ನಾದರೂ ನ್ಯಾಯಾಲಯಗಳು ಚಾಟಿ ಬೀಸುವವರೆಗೆ ಕಾಯದೆ ತಮ್ಮ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸುವ ಇಚ್ಛಾಶಕ್ತಿಯನ್ನು ತೋರಬೇಕು.